ಮದ್ಯದಂಗಡಿಗೆ ಪರವಾನಗಿ ನೀಡದಂತೆ ಒತ್ತಾಯ

ಶಿವಮೊಗ್ಗ: ನಗರದ ಶ್ರೀ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಮದ್ಯದಂಗಡಿ ತೆರೆಯಲು ಸಿದ್ಧತೆ ನಡೆದಿದ್ದು, ಯಾವುದೇ ಕಾರಣಕ್ಕೂ ಪರವಾನಗಿ ನೀಡದಂತೆ ಒತ್ತಾಯಿಸಿ ಶುಕ್ರವಾರ ದಲಿತ ಸಂಘಟನೆಗಳ ಒಕ್ಕೂಟದಿಂದ ಡಿಸಿ ಕಚೇರಿ ಎದುರು ಪ್ರತಿಭಟಿಸಲಾಯಿತು.

ಕಟ್ಟಡ ಮಾಲೀಕರೊಬ್ಬರು ವೈನ್​ಶಾಪ್ ತೆರೆಯಲು ಕಟ್ಟಡ ಬಾಡಿಗೆ ನೀಡಲು ಉದ್ದೇಶಿಸಿದ್ದು, ಪರವಾನಗಿ ನೀಡದಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸ್ಥಳದ ಅಕ್ಕಪಕ್ಕದಲ್ಲಿ ಬಡವರು, ಕೂಲಿಕಾರ್ವಿುಕರು ಹೆಚ್ಚಾಗಿ ವಾಸವಾಗಿದ್ದಾರೆ. ಇಲ್ಲಿ ಮದ್ಯದಂಗಡಿ ತೆರೆದರೆ ದುಡಿದ ಹಣ ಮದ್ಯ ಸೇವನೆ, ಇಸ್ಪೀಟ್, ಜೂಜು, ಓಸಿ ಆಡಲು ಖರ್ಚು ಮಾಡುತ್ತಾರೆ. ಮನೆಗೆ ಖಾಲಿ ಕೈಯಲ್ಲಿ ಬರುತ್ತಾರೆ. ಇದರಿಂದ ಕುಟುಂಬದವರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ದೂರಿದರು.

ಈ ಪ್ರದೇಶಕ್ಕೆ ಹೊಂದಿಕೊಂಡಂತೆ ಸಾರ್ವಜನಿಕರು, ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು, ನಾಗರಿಕರು ವಾಸವಾಗಿದ್ದಾರೆ. ಅಲ್ಲದೆ ಚೌಡೇಶ್ವರಿ ದೇವಾಲಯ, ಮಸೀದಿ, ಅಂಗನವಾಡಿ, ಶಾಲಾ ಕಾಲೇಜು, ವಿದ್ಯಾರ್ಥಿನಿಲಯಗಳಿವೆ. ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಇದೇ ಮಾರ್ಗವಾಗಿ ಓಡಾಡಬೇಕಿದೆ. ಬಸ್ ನಿಲ್ದಾಣ ಕೂಡ ಇಲ್ಲಿದ್ದು, ಹೆಣ್ಣು ಮಕ್ಕಳು, ವಿದ್ಯಾರ್ಥಿನಿಯರು ಸದಾಕಾಲ ಓಡಾಡುತ್ತಾರೆ. ಹಾಗಾಗಿ ಮದ್ಯದಂಗಡಿಗೆ ಅವಕಾಶ ನೀಡದಂತೆ ಡಿಸಿಗೆ ಮನವಿ ಮಾಡಿದರು.

ಒಕ್ಕೂಟದ ಪ್ರಮುಖರಾದ ಮೂರ್ತಿ, ಪ್ರಭು, ರಾಜು, ಲೋಕೇಶ್, ಮಾಲತೇಶ್, ಪ್ರಕಾಶ್ ಲಿಗಾಡಿ, ವಿಜಯಕುಮಾರಿ, ಜಯಮ್ಮ, ಸಣ್ಣಮ್ಮ, ಭವ್ಯಾ ಸೇರಿ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.