More

    ಮದ್ದೂರು ಪಟ್ಟಣದ ಐದು ಬಡಾವಣೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ

    ಮದ್ದೂರು: ಪಟ್ಟಣದಲ್ಲಿ ಅನಗತ್ಯವಾಗಿ ರಸ್ತೆ ಬದಿ ಕಸ ಹಾಕಿ ಅನೈರ್ಮಲ್ಯ ಉಂಟು ಮಾಡುವವರನ್ನು ಪತ್ತೆ ಮಾಡಲು ಪುರಸಭೆಯು ಐದು ಬಡಾವಣೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಮೂಲಕ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.

    5 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದ ಕೊಲ್ಲಿವೃತ್ತ, ಹೈಸ್ಕೂಲ್ ಸಮೀಪ, ಸ್ವೀಪರ್ ಕಾಲನಿ, ವಿವಿ ನಗರದ 2ನೇ ಕ್ರಾಸ್ ಮತ್ತು 8ನೇ ಕ್ರಾಸ್ ನಾಲೆ ಸಮೀಪದ ರಸ್ತೆಗಳಲ್ಲಿ ಸೋಲಾರ್ ಚಾಲಿತ 24 ಗಂಟೆ ಕಾರ್ಯನಿರ್ವಹಿಸುವ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

    ಪಟ್ಟಣದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಬೆಳಗ್ಗೆ ಪುರಸಭೆ ವತಿಯಿಂದ ಬರುವ ಆಟೋಗಳಲ್ಲಿ ಕಸ ಹಾಕುವಂತೆ ಸಾಕಷ್ಟು ಬಾರಿ ಜನರಲ್ಲಿ ಮನವಿ ಮಾಡಿ ಜಾಗೃತಿ ಮೂಡಿಸಿದರೂ ಕೆಲವರು ರಸ್ತೆ ಬದಿ ಪಟ್ಟಣದ ಗಡಿ ಭಾಗ ಹಾಗೂ ಇನ್ನಿತರ ಕಡೆಗಳಲ್ಲಿ ರಾಶಿ ರಾಶಿ ಕಸ ಹಾಕಿ ಅನೈರ್ಮಲ್ಯಕ್ಕೆ ಕಾರಣವಾಗುತ್ತಿದ್ದಾರೆ. ಹೀಗಾಗಿ ಇವರನ್ನು ಪತ್ತೆ ಹಚ್ಚುವ ಉದ್ದೇಶದಿಂದ ಪುರಸಭೆಯು ನೂತನ ಪ್ರಯತ್ನಕ್ಕೆ ಮುಂದಾಗಿದೆ.

    ಇದರಿಂದ ರಸ್ತೆ ಬದಿ ಕಸ ಹಾಕುವವರನ್ನು ಸಿಸಿ ಕ್ಯಾಮರಾದ ಮೂಲಕ ಸುಲಭವಾಗಿ ಪತ್ತೆ ಹಚ್ಚಿ ಅವರಿಗೆ 5 ಸಾವಿರ ರೂ.ವರೆಗೂ ದಂಡ ವಿಧಿಸಲು ಚಿಂತಿಸಲಾಗಿದೆ. ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ಹಾಗೂ ಕಸವನ್ನು ಎಲ್ಲೆಂದಲ್ಲಿ ಹಾಕುವುದನ್ನು ತಡೆಗಟ್ಟುವ ಉದ್ದೇಶದಿಂದ ಪುರಸಭೆಯು ಈ ಪ್ರಯೋಗಕ್ಕೆ ಮುಂದಾಗಿದೆ. ಜತೆಗೆ ಪಟ್ಟಣದಲ್ಲಿ ನಡೆಯುವ ಅನೈತಿಕ ಚಟುವಟಿಕೆ ಮತ್ತು ಅಪರಾಧ ಪ್ರಕರಣಗಳನ್ನು ತಡೆಯಲು ಪೊಲೀಸರಿಗೂ ಅನುಕೂಲವಾಗುತ್ತದೆ.

    ಈ ಹಿಂದೆ ಅನಗತ್ಯವಾಗಿ ರಸ್ತೆ ಬದಿ ಕಸ ಹಾಕಿದ್ದ ಹಲವರಿಗೆ ಹಲವಾರು ಬಾರಿ ಪುರಸಭೆ ವತಿಯಿಂದ ದಂಡ ಹಾಕಿದ್ದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ಹೊಸ ಪ್ರಯತ್ನ ಎಷ್ಟು ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

    See also  ಅಂಬೇಡ್ಕರ್ ಆಚರಣೆ ಬೇಡ, ಅನುಸರಣೆ ಬೇಕಿದೆ

    ಪುರಸಭೆ ವ್ಯಾಪ್ತಿಯಲ್ಲಿ ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವ ಉದ್ದೇಶದಿಂದ ಮೊದಲಿಗೆ ಐದು ಕಡೆ ಗುಣಮಟ್ಟದ ಸೋಲಾರ್ ಚಾಲಿತ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಇದು ಯಶಸ್ವಿಯಾದರೆ, ಪುರಸಭೆ ವತಿಯಿಂದ ಪಟ್ಟಣದ ಎಲ್ಲ ವಾರ್ಡ್‌ಗಳಲ್ಲೂ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು.
    ಸುರೇಶ್‌ಕುಮಾರ್, ಪುರಸಭಾ ಅಧ್ಯಕ್ಷ ಮದ್ದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts