ಮದುವೆಗೆ ಹೋದವರು ಮಸಣ ಸೇರಿದರು

ಬಾಗಲಕೋಟೆ: ಧಾರವಾಡ ಜಿಲ್ಲೆಯ ನವಲಗುಂದ ಬಳಿಯ ಅಮರಗೋಳದಲ್ಲಿ ಭಾನುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಗರದ ಜಿಗಜಿನ್ನಿ ಕುಟುಂಬದ ಐವರು ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗವಹಿಸಲು ದಾವಣೆಗೆರೆಗೆ ಶನಿವಾರ ಒಂದೇ ಕಾರಿನಲ್ಲಿ ತೆರಳಿದ್ದರು, ಭಾನುವಾರ ಬಾಗಲಕೋಟೆ ವಾಪಸ್ಸ ಆಗಮಿಸುತ್ತಿದ್ದಾಗ ಬೆಳಗ್ಗೆ ಕಾರಿನ ಟೈರ್ ಸಿಡಿದು ಆಗಿ ಎದುರಿಗೆ ಬರುತ್ತಿದ್ದ ಲಾರಿಗೆ ಗುದ್ದಿದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಜಿಗಜಿನ್ನಿ ಕುಟುಂಬದ ಅಳಿಯ (ಮಗಳ ಗಂಡ) ರವಿ ಹಂಡಿ (40), ರವಿ ಅವರ ಪುತ್ರಿ ಲೇಖಾಶ್ರೀ ಹಂಡಿ (18), ಪುತ್ರ ನವೀನಕುಮಾರ ಹಂಡಿ (14) ಹಾಗೂ ಶರಣ ವಿನೋದ ಜಿಗಜಿನ್ನಿ (7) ಹಾಗೂ ಪತ್ರಕರ್ತ ಆನಂದ ಜಿಗಜಿನ್ನಿ ಅವರ ಪುತ್ರಿ ವರ್ಷಾ (12) ಮೃತಪಟ್ಟಿದ್ದಾರೆ.

ಶನಿವಾರವಷ್ಟೇ ಜಿಗಜಿನ್ನಿ ಅವರ ಭಾವ ರವಿ ಹಂಡಿ ಅವರು ದಾವಣಗೇರಿಗೆ ಮದುವೆಗೆ ತೆರಳಿದ್ದರು. ತಮ್ಮೊಂದಿಗೆ ತಮ್ಮ ಇಬ್ಬರು ಮಕ್ಕಳು ಹಾಗೂ ಇಬ್ಬರು ಅಳಿಯಂದಿರ ಇಬ್ಬರು ಮಕ್ಕಳನ್ನು ಕರೆದುಕೊಂಡು ಕಾರಿನಲ್ಲಿ ಹೋಗಿದ್ದರು. ಮದುವೆ ಮುಗಿಸಿಕೊಂಡು ಭಾನುವಾರ ಬೆಳಗ್ಗೆ ವಾಪಸ್ಸು ಬರುತ್ತಿದ್ದಾಗ ಅಮರಗೋಳದ ಬಳಿ ರಸ್ತೆ ಅಪಘಾತ ನಡೆದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಇನ್ನಿಬ್ಬರು ಆಸ್ಪತ್ರೆಗೆ ಹೋಗುವಾಗ ಜೀವಬಿಟ್ಟಿದ್ದರು. ಹೀಗಾಗಿ ಮದುವೆಗೆ ಹೋದವರು ವಾಪಸ್ಸು ಮನೆಗೆ ಬಾರದೆ ಮಸಣಕ್ಕೆ ಪಯಣ ಬೆಳೆಸಿದ ಹೃದಯ ವಿದ್ರಾವಕ ಘಟನೆ ನಡೆದು ಹೋಗಿದೆ.

ಸಾವಿನ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸುತ್ತಿದ್ದಂತೆ ನಗರದ ಜಿಗಜಿನ್ನಿ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ಅಪಘಾತ ನಡೆದ ವಿಷಯ ತಿಳಿದು ಅಪಾರ ಸಂಖ್ಯೆಯ ಬಂಧುಗಳು, ಮಿತ್ರರು, ಸಂಬಂಧಿಕರು ಜಿಗಜಿನ್ನಿ ಅವರ ಮನೆಗೆ ತೆರಳಿ ಸಾಂತ್ವಾನ ಹೇಳುತ್ತಿದ್ದರು. ಆದರೆ, ಬೆಳೆದ ಮಕ್ಕಳು ಇನ್ನಿಲ್ಲ ಎನ್ನುವ ಆಘಾತಕಾರಿ ಸುದ್ದಿ ಇಡೀ ಕುಟುಂಬವನ್ನು ಕಣ್ಣೀರಲ್ಲಿ ಮುಳುಗಿಸಿದ್ದು, ಎಲ್ಲರೂ ಮಮ್ಮಲ ಮರಗುತ್ತಿದ್ದಾರೆ.
ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಬಾಗಲಕೋಟೆಗೆ ಬಂದ ಮೇಲೆ ಎಲ್ಲರೂ ಸೇರಿ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತೆರಳಲು ಸಿದ್ದತೆ ಮಾಡಿಕೊಂಡಿದ್ದರು. ಅಷ್ಟರಲ್ಲಿ ವಿಧಿ ಅವರ ಬದುಕಿನಲ್ಲಿ ಚೆಲ್ಲಾಟ ಆಡಿಬಿಟ್ಟಿದೆ. ಬಾಳಿ ಬದುಕಬೇಕಿದ್ದ ಆ ಮಕ್ಕಳ ಭವಿಷ್ಯವನ್ನು ನುಂಗಿಹಾಕಿದೆ. ಎದೆ ಎತ್ತರ ಬೆಳೆದ ಮಕ್ಕಳನ್ನು ಕಳೆದುಕೊಂಡ ಆ ಪಾಲಕರು ರೋಧನ ಹೃದಯ ಕಲುಕುವಂತೆ ಮಾಡಿದೆ.

ಭಾನುವಾರ ಸಂಜೆ ವೇಳೆ ಐವರ ಪಾರ್ಥಿವ ಶರೀರಗಳನ್ನು ಬಾಗಲಕೋಟೆಗೆ ತರಲಾಗಿದೆ. ಸೋಮವಾರ ಸಂಜೆ ನಾಲ್ಕು ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಕುಟುಂಬದ ಮೂಲಗಳು ತಿಳಿಸಿವೆ.

ವಾರದಲ್ಲಿ ಎರಡನೇ ಆಘಾತ
ಕಳೆದ ಶನಿವಾರವಷ್ಟೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಂದಗನೂರ ಗ್ರಾಮದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದರು. ಇದರಲ್ಲಿ ಮೂವರು ಗುಳೇದಗುಡ್ಡ ತಾಲೂಕಿನ ಹಳದೂರ ಗ್ರಾಮ ಹಾಗೂ ಇನ್ನಿಬ್ಬರು ಬಾಗಲಕೋಟೆ ತಾಲೂಕಿನ ಬೊಮ್ಮಣಗಿ ಗ್ರಾಮದವರು ಮೃತಪಟ್ಟಿದ್ದರು. ಈ ಕಹಿ ಘಟನೆ ಮರೆಯಾಗುವ ಮೊದಲೇ ಒಂದು ವಾರದ ಅಂತರದಲ್ಲಿ ಅಮರಗೋಳ ಸಮೀಪ ಸಂಭವಿಸಿದ ದುರ್ಘಟನೆಯಲ್ಲಿ ಮತ್ತೆ ಬಾಗಲಕೋಟೆ ಮೂಲದ ಐವರು ಸಾವನ್ನಪ್ಪಿದ್ದು, ಜಿಲ್ಲೆಯ ಜನರಲ್ಲಿ ಆಘಾತವನ್ನುಂಟು ಮಾಡಿದೆ.

ಗಣ್ಯರ ತೀವ್ರ ಸಂತಾಪ
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಅನೇಕರು ತೀವ್ರ ಶೋಕ ವ್ಯಕ್ತಪಡಿಸಿದರು. ಚರಂತಿಮಠದ ಪ್ರಭು ಸ್ವಾಮೀಜಿ, ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಡಾ. ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಎಸ್.ಆರ್. ಪಾಟೀಲ, ಮಾಜಿ ಸಚಿವ, ಬಿಟಿಡಿಎ ಅಧ್ಯಕ್ಷೃ ಎಚ್.ವೈ. ಮೇಟಿ, ಮಾಜಿ ಶಾಸಕ ಪಿ.ಎಚ್. ಪೂಜಾರ, ವಿ.ಪ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಎಸ್.ಜಿ. ನಂಜಯ್ಯನಮಠ, ಜಿ.ಪಂ. ಅಧ್ಯಕ್ಷೆ ಬಾಯಕ್ಕ ಮೇಟಿ, ಸದಸ್ಯೆ ವೀಣಾ ಕಾಶಪ್ಪನವರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೃ ಎಂ.ಬಿ. ಸೌದಾಗರ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷೃ ಪ್ರಕಾಶ ತಪಶೆಟ್ಟಿ, ಮುಖಂಡರಾದ ಬಸಲಿಂಗಪ್ಪ ನಾವಲಗಿ, ಜಯಂತ ಕುರಂದವಾಡ, ನಾಗರಾಜ ಹದ್ಲಿ ಮತ್ತಿತರ ಪ್ರಮುಖರು ಮೃತರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *