More

    ಮದಿರೆ ಮಾರಾಟದಲ್ಲಿ ಏರಿಕೆ

    ಗದಗ: ಮದ್ಯದ ಅಮಲಿನಲ್ಲಿ ಹಾಡುತ್ತ, ಕೂಗಾಡುತ್ತ, ನೂತನ ವರ್ಷ ಸ್ವಾಗತಿಸುವ ವಾತಾವರಣ ಜಿಲ್ಲೆಯಲ್ಲಿ ಹೆಚ್ಚಾಗತೊಡಗಿದೆ. ವರ್ಷದ ಕೊನೆಯ ತಿಂಗಳು ಡಿಸೆಂಬರ್ ಅವಧಿಯಲ್ಲಿ ಮದಿರೆಯ ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ ಗಮನಾರ್ಹ ಏರಿಕೆ ಕಂಡುಬಂದಿದೆ.

    ಡಿ. 31ರ ಇಡೀ ದಿನ ಗದಗ-ಬೆಟಗೇರಿ ಅವಳಿ ನಗರ ಸೇರಿ ಜಿಲ್ಲೆಯ ಬಹುತೇಕ ಬಾರ್​ಗಳು ಗಿಜಿಗುಡುತ್ತಿದ್ದವು. ಇದರಲ್ಲಿ ಯುವಕರೇ ಹೆಚ್ಚಾಗಿ ಮದ್ಯದ ಬಾಟಲ್​ಗಳನ್ನು ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದದು ಕಂಡುಬಂತು.

    ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪ್ರತಿ ವರ್ಷ ಮದ್ಯ ಮಾರಾಟದಲ್ಲಿ ಏರಿಕೆ ಕಾಣುವುದು ಸಹಜ. ಈ ವರ್ಷ ಕೂಡ ಮದ್ಯ (ವಿಸ್ಕಿ, ರಮ್ ಝಿನ್ ಮತ್ತು ವೋಡ್ಕಾ) ಮತ್ತು ಬಿಯರ್ ಬಾಕ್ಸ್​ಗಳ ಮಾರಾಟದಲ್ಲಿ ಗಮನಾರ್ಹ ಏರಿಕೆಯಾಗಿದೆ. 2019ರ ಡಿಸೆಂಬರ್​ನಲ್ಲಿ 72, 224 ಮದ್ಯದ ಬಾಕ್ಸ್​ಗಳು, 26,986 ಬಿಯರ್ ಬಾಕ್ಸ್​ಗಳು ಮಾರಾಟವಾಗಿವೆ. ಕಳೆದ ವರ್ಷ 62,841 ಬಾಕ್ಸ್ ಮದ್ಯ, 22,885 ಬಿಯರ್ ಬಾಕ್ಸ್ ಗಳು ಮಾರಾಟವಾಗಿದ್ದವು.

    2018ರ ಡಿಸೆಂಬರ್​ನಲ್ಲಾದ ಮಾರಾಟಕ್ಕೆ ಹೋಲಿಸಿದರೆ 2019ರ ಡಿಸೆಂಬರ್​ನಲ್ಲಿ ಮದ್ಯ ಮಾರಾಟದಲ್ಲಿ ಏರಿಕೆಯಾಗಿದೆ. ಉಳ್ಳಾಗಡ್ಡಿ, ಮೆಣಸಿನಕಾಯಿ ಸೇರಿ ಕೆಲ ಬೆಳೆಗಳು ರೈತರ ಕೈಹಿಡಿದಿರುವುದರಿಂದ ಮಾರಾಟ ಹೆಚ್ಚಾಗಿರಬಹುದು ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.

    ಕೇಕ್ ಕತ್ತರಿಸಿ ಸ್ವಾಗತ: ಹೊಸ ವರ್ಷ ಹಿನ್ನೆಲೆಯಲ್ಲಿ ಮಂಗಳವಾರವೇ ಎಲ್ಲರ ಮೊಗದಲ್ಲಿ ಸಂಭ್ರಮ. ಗಡಿಯಾರದ ಮುಳ್ಳು ಮಂಗಳವಾರ ಮಧ್ಯರಾತ್ರಿ 12 ಗಂಟೆಗೆ ಸಮನಾಗುತ್ತಿದ್ದಂತೆಯೇ ಗದಗ-ಬೆಟಗೇರಿ ಅವಳಿ ನಗರ ಸೇರಿ ಜಿಲ್ಲಾದ್ಯಂತ ಜನರು ಕೇಕ್ ಕತ್ತರಿಸಿ ಸಿಹಿ ಹಂಚಿ, ಪಟಾಕಿ ಸಿಡಿಸಿ 2020 ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಿದರು. ಒಬ್ಬರಿಗೊಬ್ಬರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ನೂತನ ವರ್ಷವನ್ನು ಜಿಲ್ಲೆಯ ಜನತೆ ಶುಭಾರಂಭ ಮಾಡಿದರು. ಯುವಕರು ಬಾನಂಗಳದಲ್ಲಿ ವರ್ಣರಂಜಿತ ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ‘ಹ್ಯಾಪಿ ನ್ಯೂ ಇಯರ್’ ಎಂದು ಸ್ನೇಹಿತರು, ಸಂಬಂಧಿಗಳಿಗೆ ಶುಭ ಸಂದೇಶ ಕಳಿಸಿದರು. ಗದಗ-ಬೆಟಗೇರಿ ಅವಳಿ ನಗರ ಸೇರಿ ಜಿಲ್ಲೆಯ ವಿವಿಧೆಡೆ ಬೇಕರಿ ಅಂಗಡಿಗಳ ಮುಂದೆ ಕೇಕ್ ಖರೀದಿಗಾಗಿ ಸಾರ್ವಜನಿಕರು ಸರದಿ ಸಾಲಿನಲ್ಲಿ ನಿಂತದ್ದು ಕಂಡುಬಂತು.

    ಪ್ರತಿನಿತ್ಯ 60ರಿಂದ 80 ಸಾವಿರ ರೂ. ಮದ್ಯದ ವ್ಯಾಪಾರವಾಗುತ್ತದೆ. ಹೊಸ ವರ್ಷಾಚರಣೆ ನಿಮಿತ್ತ 2 ಲಕ್ಷ ರೂ. ವ್ಯಾಪಾರವಾಗಿದೆ. | ಹೆಸರು ಹೇಳಲಿಚ್ಛಿಸದ ಬಾರ್​ವೊಂದರ ವ್ಯವಸ್ಥಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts