ಮದಗ ಕೆರೆಗಳಲ್ಲಿ ಹೂಳು

ಅನಂತ್ ನಾಯಕ್ ಮುದ್ದೂರು ಕೊಕ್ಕರ್ಣೆ 

ಗ್ರಾಮೀಣ ಪ್ರದೇಶ ಕೊಕ್ಕರ್ಣೆ, ಕುದಿ, ನಂಚಾರು, ಮುದ್ದೂರು, ಮಾರಾಳಿ ಮೊದಲಾದೆಡೆ ನೀರಿನ ಸಂಗ್ರಹಕ್ಕಾಗಿ ಈ ಹಿಂದೆ ನಿರ್ಮಿಸಿದ ಮದಗ, ಕೆರೆಗಳು ಪ್ರಸ್ತುತ ನಿರ್ಲಕ್ಷೃದಿಂದ ಹೂಳು ತುಂಬಿದ್ದು, ಈ ಪ್ರದೇಶಗಳಲ್ಲಿ ನೀರಿನ ಅಭಾವ ಕಾಣಿಸಿಕೊಂಡಿದೆ.

ಹಿಂದಿನ ಕಾಲದಲ್ಲಿ ನೀರಿನ ಸಂಗ್ರಹಕ್ಕೆ ಮದಗ ಕೆರೆಗಳನ್ನು ನಿರ್ಮಿಸಿದ್ದರು. ಮಳೆಗಾಲದಲ್ಲಿ ಇದರಲ್ಲಿ ನೀರು ಶೇಖರಣೆಗೊಂಡು ಸುತ್ತಮುತ್ತಲ ಪ್ರದೇಶಗಳಲ್ಲಿ ನೀರಿನ ಆರ್ದ್ರತೆ ಉಳಿಯುವಂತೆ ಮಾಡುತ್ತಿದ್ದರು. ಇದರಿಂದ ಮಳೆಗಾಲ ಮುಗಿದು ಬೇಸಿಗೆ ಪರ್ಯಂತ ನೀರು ಕೃಷಿ ಕಾರ್ಯಗಳಿಗೆ ದೊರೆಯುತ್ತಿತ್ತು. ಕಾಲಕ್ರಮೇಣ ಮದಗ ಕೆರೆಗಳ ಸ್ಥಾನವನ್ನು ಬೋರ್‌ವೆಲ್, ರಿಂಗ್ ಬಾವಿಗಳು ಆಕ್ರಮಿಸಿಕೊಂಡವು. ಇದರಿಂದ ಮದಗ ಕೆರೆಗಳತ್ತ ಜನ ನಿರ್ಲಕ್ಷ್ಯ ತೋರಿದ್ದರಿಂದ ಹೂಳು ತುಂಬಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಈ ವರ್ಷ ಮುಂಗಾರು ಬೇಗನೆ ಕೈಕೊಟ್ಟಿದ್ದರಿಂದ ನೀರಿನ ಅಭಾವ ಕಾಣಿಸತೊಡಗಿದೆ.

ಈ ಹಿಂದೆ ಮದಗ, ಕೆರೆಗಳ ನೀರು ನಂಬಿ ಸುತ್ತಮುತ್ತಲ ಹಲವಾರು ಜನರು ಬೇಸಾಯ, ಹೈನುಗಾರಿಕೆ, ಗೃಹಕಾರ್ಯ ಮಾಡುತ್ತಿದ್ದರು. ಪ್ರಸಕ್ತ ಸೂಕ್ತ ವ್ಯವಸ್ಥೆಗಳಿಲ್ಲದ ಕಾರಣ ಜನರು ದೂರದ ನೀರನ್ನೇ ಅವಲಂಬಿಸುವಂತಾಗಿದೆ. ಜೀವಜಲ ಸಂರಕ್ಷಣೆಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಸಂಬಂಧಪಟ್ಟ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಆಗ್ರಹಿಸಿದ್ದಾರೆ.
ಕುದಿ ಗ್ರಾಮದ ಹೊರ್ಲಾಳಿ ಸಮೀಪದ ಮದಗ ಬಳಿ ಶಿಲೆಕಲ್ಲುಗಳಿಂದ ಕಟ್ಟಿದ ಬಾವಿ ಇದ್ದು, ಇತ್ತೀಚಿಗಿನ ವರ್ಷದಲ್ಲಿ ಕಲ್ಲುಗಳೆಲ್ಲ ಕುಸಿದು ಬಿದ್ದು ಅಪಾಯದ ಸ್ಥಿತಿಯಲ್ಲಿದೆ. ಈ ಬಾವಿಯ ನೀರನ್ನು ಹತ್ತಿರದ ಐದು ಸೆಂಟ್ಸ್ ಕಾಲನಿಯವರು ಉಪಯೋಗಿಸುತ್ತಿದ್ದು ಶಿಥಿಲಾವಸ್ಥೆಗೆ ತಲುಪಿದೆ. ಈ ಬಾವಿಯ ಪುನಾರಚನೆ ಮಾಡಬೇಕಾಗಿದೆ.

ಕೊಳಚೆ ತುಂಬಿ ಕಾಯಿಲೆ ಭೀತಿ: ಮದಗ ಕೆರೆಗಳತ್ತ ಗಮನ ನೀಡದಿರುವುದರಿಂದ ಮದಗದ ಸುತ್ತಲೂ ಮಳೆ ನೀರಿನೊಂದಿಗೆ ಹರಿದು ಬರುವ ಕೊಳಚೆ ವಸ್ತುಗಳು, ಪ್ಲಾಸ್ಟಿಕ್, ಕಸ ಕಡ್ಡಿಗಳು ತುಂಬಿ ನೀರು ಮಲಿನಗೊಂಡಿದೆ. ಇದರಿಂದಾಗಿ ಇಲ್ಲಿ ಸಾಂಕ್ರಮಿಕ ರೋಗ ಭೀತಿ ಎದುರಾಗಿದೆ. ಮಾತ್ರವಲ್ಲದೆ ಸುತ್ತಲೂ ಪೊದೆಗಳು ಆವರಿಸಿರುವುದರಿಂದ ವಾಹನ ಸವಾರರು, ದನ ಕರುಗಳು ತೊಂದರೆ ಅನುಭವಿಸಿದ ನಿದರ್ಶನಗಳೂ ಇವೆ.

ಹೊರ್ಲಾಳಿ ಮದಗ ಸಂಪೂರ್ಣ ಶಿಥಿಲಾವಸ್ಥೆಗೆ ಬಂದಿದ್ದು, ಭದ್ರತೆ ಇಲ್ಲ. ಮಳೆಗಾಲ ಆರಂಭವಾಗುವುದರೊಳಗೆ ಹೂಳೆತ್ತಿದರೆ ಸುತ್ತಮುತ್ತಲಿನ ಹಲವು ಊರುಗಳಿಗೆ ನೀರಿನ ಅಭಾವ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿ ವರ್ಗ, ಜನಪ್ರತಿನಿಧಿಗಳು ಕ್ರಮ ಕೈಗೊಂಡು ಮದಗ, ಕೆರೆಗಳನ್ನು ಸಂರಕ್ಷಿಸಲಿ.
ವಿಶ್ವನಾಥ ಅಡಿಗ ಪ್ರಗತಿಪರ ಕೃಷಿಕರು ಹೊರ್ಲಾಳಿ

ಮದಗಗಳು ವರ್ಷದ ಎಲ್ಲ ತಿಂಗಳಲ್ಲಿ ತುಂಬಿರುತ್ತಿತ್ತು. ಆದರೆ ಇತ್ತೀಚೆಗಿನ ದಿನಗಳಲ್ಲಿ ಹೂಳು ತುಂಬಿದ್ದರಿಂದ ನೀರಿನ ಸೆಲೆ ಕಡಿಮೆಯಾಗಿದೆ. ಸಂಬಂಧಪಟ್ಟವರು ಹೂಳೆತ್ತುವ ಕುರಿತು ಚಿಂತನೆ ನಡಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ.
ನರಸಿಂಹ ಪೂಜಾರಿ ಗ್ರಾಮಸ್ಥರು ಹೊರ್ಲಾಳಿ

One Reply to “ಮದಗ ಕೆರೆಗಳಲ್ಲಿ ಹೂಳು”

  1. ಸೀತೆಯ ತಟದಲ್ಲಿಯೇ ಕುಡಿಯುವ ನೀರಿಗೆ ಬರ.ಮಳೆಗಾಲದಲ್ಲಿ ಭೋರ್ಗರೆಯುವ ನಮ್ಮೂರಿನ ನದಿತೊರೆಗಳು ಬತ್ತಿ ಬರಿದಾಗಿವೆ.ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.ಅಗಾಧ ಪ್ರಮಾಣದಲ್ಲಿ ಸುರಿಯುವ ಮಳೆಯ ನೀರನ್ನು ಹಿಡಿದಿಡಲು ನಮ್ಮ ಸರಕಾರಗಳು ಯಾವುದೇ ಯೋಜನೆಗಳನ್ನು ಮಾಡಲಿಲ್ಲ.ಇಷ್ಟು ವರ್ಷಗಳಲ್ಲಿ ನಮ್ಮನ್ನಾಳಿದ ಸರಕಾರಗಳು ಕುಡಿಯುವ ನೀರಿಗಾಗಿ ಕನಿಷ್ಠ ಪ್ರಯತ್ನಗಳನ್ನು ಮಾಡದಿರುವುದರಿಂದ ಈ ಪರಿಸ್ಥಿತಿ ಉಂಟಾಗಿದೆ.

Comments are closed.