ಮತ ಎಣಿಕೆ ಕೇಂದ್ರ ರೆಡಿ

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಮತಯಂತ್ರಗಳು ಅಜ್ಜರಕಾಡು ಸೇಂಟ್ ಸಿಸಿಲಿ ಶಾಲೆಗಳ ಕೊಠಡಿ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿದ್ದು, ಮತ ಎಣಿಕೆಗೆ ಕೇಂದ್ರದಲ್ಲಿ ಅಂತಿಮ ಹಂತದ ಸಿದ್ಧತೆ ನಡೆದಿದೆ.

ಒಟ್ಟು 18 ಕೊಠಡಿಗಳಲ್ಲಿ ಮತಯಂತ್ರಗಳನ್ನು ಇರಿಸಲಾಗಿದೆ. ಕೇಂದ್ರದಲ್ಲಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮೊಕ್ಕ ಹೂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಮಂಗಳವಾರ ಕ್ಷೇತ್ರದ ಮುಖ್ಯ ಕೌಂಟಿಂಗ್ ಅಬ್ಸರ್ವರ್ ನಿತೀಶ್ವರ್ ರಾವ್ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಎಲ್ಲಾ ಕೊಠಡಿಗಳಿಗೆ ಭೇಟಿ ನೀಡಿ ಎಸ್‌ಪಿ, ಡಿಸಿ ಅವರೊಂದಿಗೆ ಸಮಾಲೋಚನೆ ನಡೆಸಿದರು.

ಕೇಂದ್ರದ ಪ್ರವೇಶದ್ವಾರದಲ್ಲಿ ಚುನಾವಣೆ ನೇಮಕಗೊಂಡ ಅಧಿಕಾರಿ, ಸಿಬ್ಬಂದಿ ವರ್ಗವನ್ನು ಪರಿಶೀಲನೆ ನಡೆಸಿಯೇ ಒಳಗೆ ಬಿಡಲಾಗುತ್ತಿದೆ. ಮತ ಎಣಿಕೆ ದಿನ ಸಾಕಷ್ಟು ಕಟ್ಟಿನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತ ಎಣಿಕೆ ಕೇಂದ್ರದ ಪ್ರತೀ ಕೊಠಡಿಯಲ್ಲಿ 2 ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ. ಕೇಂದ್ರದ ಪ್ರವೇಶ ದ್ವಾರ ಸೇರಿದಂತೆ ಆವರಣದಲ್ಲಿಯೂ ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಲಾಗಿದ್ದು, ಒಟ್ಟು 159 ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ.

ಕೇಂದ್ರಕ್ಕೆ ಚುನಾವಣಾಧಿಕಾರಿಯಿಂದ ನೀಡಲಾದ ಅಧಿಕೃತ ಗುರುತಿನ ಚೀಟಿ ಇದ್ದಲ್ಲಿ ಮಾತ್ರ ಪ್ರವೇಶಿಸಲು ಅವಕಾಶ ಕಲ್ಪಿಸಲಾಗುತ್ತದೆ. ಮತ ಎಣಿಕೆ ಕೇಂದ್ರದ ಹಿಂಭಾಗದಲ್ಲಿ ಮಾಧ್ಯಮದವರಿಗೆ ಮತ್ತು ರಾಜಕೀಯ ಪಕ್ಷದ ಏಜೆಂಟರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಸೇಂಟ್ ಸಿಸಿಲಿ ಶಾಲಾ ಕಟ್ಟಡದಲ್ಲಿರುವ 14 ಮತ ಎಣಿಕಾ ಕೆಂದ್ರಗಳಿಗೆ ಒಂದೇ ಪ್ರವೇಶ ದ್ವಾರದ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರದಿಂದ 100 ಮೀಟರ್ ವ್ಯಾಪ್ತಿಯನ್ನು ವಾಹನ ಸಂಚಾರ ರಹಿತ ಪಾದಚಾರಿಗಳ ವಲಯ ಎಂದು ಗುರುತಿಸಲಾಗಿದೆ.

ಹೆಚ್ಚುವರಿ ಟ್ಯಾಂಕರ್ ನೀರು: ಸಾವಿರಕ್ಕೂ ಅಧಿಕ ಸಿಬ್ಬಂದಿ, ಅಧಿಕಾರಿ ವರ್ಗ ಮತ ಎಣಿಕೆ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲಿದ್ದು, ಮೂಲ ಸೌಕರ್ಯಗಳಿಗೆ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ. ಕುಡಿಯುವ ನೀರು ಸೇರಿದಂತೆ, ಇತರೆ ಬಳಕೆಗಾಗಿ ಹೆಚ್ಚುವರಿ ಟ್ಯಾಂಕರ್‌ಗೆ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿ ಶೌಚಗೃಹ, ಮಹಿಳಾ ಸಿಬ್ಬಂದಿಗಾಗಿ ಗ್ರೀನ್ ರೂಮ್, ಪ್ರಥಮ ಚಿಕಿತ್ಸೆ, ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ನಿಷೇಧಿಸಲಾಗಿದೆ. ಸಿಬ್ಬಂದಿ, ಅಧಿಕಾರಿ ವರ್ಗಕ್ಕೆ ತಿಂಡಿ,ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಡಿಸಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಕೇಂದ್ರದಲ್ಲಿ ಬಿಗಿ ಭದ್ರತೆ: ಕೇಂದ್ರದ ಭದ್ರತೆಗಾಗಿ 1 ಸಿಆರ್‌ಪಿಎಫ್ ತುಕಡಿ, 2 ಕೆಎಸ್‌ಆರ್‌ಪಿ ತುಕಡಿ, 83 ಹೋಮ್ ಗಾರ್ಡ್ಸ್, 312 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಎಸ್‌ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿ ಮೂರುಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕ್ಷೇತ್ರವಾರು ಮತ ಎಣಿಕೆಯ ಕೊಠಡಿಯಲ್ಲಿ ಓರ್ವ ಎಆರ್‌ಓ, 8 ಸಹಾಯಕ ಚುನಾವಣಾಧಿಕಾರಿ ಹಾಗೂ 6 ಮಂದಿ ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳಿರುತ್ತಾರೆ. ಮತ ಎಣಿಕೆಗಾಗಿ ಒಟ್ಟು 127 ಮತ ಎಣಿಕಾ ಮೇಲ್ವಿಚಾರಕರು, 131 ಮತ ಎಣಿಕೆ ಸಹಾಯಕರು, 127 ಮೈಕ್ರೋ ಅಬ್ಸರ್‌ವರ್‌ಗಳನ್ನು ಹಾಗೂ 127 ಡಿ ದರ್ಜೆ ಸಿಬ್ಬಂದಿ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *