ಮತ ಎಣಿಕೆಗೆ ದಿನಗಣನೆ

ತುಮಕೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸ್ಪರ್ಧೆಯಿಂದ ಪ್ರತಿಷ್ಠಿತ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ತುಮಕೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಗುರುವಾರ ಜಿಲ್ಲಾ ಕೇಂದ್ರದಲ್ಲಿ ನಡೆಯಲಿದೆ.

ನಗರದ ಸರ್ಕಾರಿ ಪಾಲಿಟೆಕ್ನಿಕ್, ತುಮಕೂರು ವಿವಿ ವಿಜ್ಞಾನ ಕಾಲೇಜಿನಲ್ಲಿ ಮೇ 23ರಂದು ಬೆಳಗ್ಗೆ 8ರಿಂದ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನ 3ರ ಹೊತ್ತಿಗೆ ಫಲಿತಾಂಶ ಹೊರಬೀಳಲಿದೆ. ಈ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್​ಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

2500 ಸಿಬ್ಬಂದಿ: ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ತುಮಕೂರು ವಿವಿ ವಿಜ್ಞಾನ ಕಾಲೇಜಿನಲ್ಲಿ ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಲಾಗಿದೆ. ಮತ ಎಣಿಕೆಗೆ 2500 ಸಿಬ್ಬಂದಿ ನೇಮಿಸಲಾಗಿದೆ. ಮೈಕ್ರೋ ಅಬ್ಸರ್ವರ್, ಭದ್ರತಾ ಅಧಿಕಾರಿಗಳು ಹಾಗೂ ಸಹಾಯಕ ಸಿಬ್ಬಂದಿ ಕಾರ್ಯದಲ್ಲಿ ತೊಡಗಿದ್ದಾರೆ.

ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೆಕೆರೆ, ಮಧುಗಿರಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ತುಮಕೂರು ವಿವಿ ವಿಜ್ಞಾನ ಕಾಲೇಜಿನಲ್ಲಿ ನಡೆಯಲಿದೆ. ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಗುಬ್ಬಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮತ ಎಣಿಕೆ ಟೇಬಲ್​ಗೆ ಒಬ್ಬ ಮೇಲ್ವಿಚಾರಕರು, ಒಬ್ಬ ಸಹಾಯಕ ಮತ್ತು ಮೈಕ್ರೋ ಅಬ್ಸರ್ವರ್ ನೇಮಕವಾಗಲಿದೆ. ಅಭ್ಯರ್ಥಿಗಳಿಗೆ ಪ್ರತಿ ಮತ ಎಣಿಕೆ ಟೇಬಲ್​ಗೆ ಒಬ್ಬ ಏಜೆಂಟ್ ನೇಮಿಸಲು ಅವಕಾಶವಿದೆ. ಇಟಿಪಿಬಿಎಸ್ ಮತ್ತು ಅಂಚೆ ಮತ ಪತ್ರಗಳ ಎಣಿಕೆ ತುಮಕೂರು ವಿವಿ ವಿಜ್ಞಾನ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಪ್ರತ್ಯೇಕ ಕೊಠಡಿಯಲ್ಲಿ ನಡೆಯಲಿದೆ.

ಮತ ಎಣಿಕೆಯನ್ನು ಸುಗಮವಾಗಿ ನಡೆಸಲು ವ್ಯಾಪಕ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಬಿ.ಎಚ್.ರಸ್ತೆಯಲ್ಲಿ ಬ್ಯಾರಿಕೇಡ್ ನಿರ್ವಿುಸಲಾಗಿದ್ದು, ಗುರುವಾರ ಸಂಚಾರ ನಿರ್ಬಂಧವಿರುತ್ತದೆ.

| ಡಾ.ಕೆ.ವಂಶಿಕೃಷ್ಣ, ಜಿಲ್ಲಾ ಪೊಲೀಸ್ ಅಧೀಕ್ಷಕ

ಜಿಎಸ್​ಬಿ ಟೆಂಪಲ್ ರನ್!: ಚುನಾವಣೋತ್ತರ ಸಮೀಕ್ಷೆಯಲ್ಲಿ ತುಮಕೂರು ಕ್ಷೇತ್ರ ಬಿಜೆಪಿಗೆ ಒಲಿಯಲಿದೆ ಎಂಬ ಮಾಹಿತಿಯಿಂದ ಖುಷಿಯಾಗಿರುವ ಮಾಜಿ ಸಂಸದ ಜಿ.ಎಸ್.ಬಸವರಾಜು ಸೋಮವಾರ ಟೆಂಪಲ್ ರನ್ ನಡೆಸಿದರು.

ಬೆಳಗ್ಗೆ ದೇವರಾಯನದುರ್ಗ ನರಸಿಂಹಸ್ವಾಮಿಗೆ ಪೂಜೆ ಸಲ್ಲಿಸಿ, ಎಡೆಯೂರು ಸಿದ್ದಲಿಂಗೇಶ್ವರ, ಹಟ್ಟಿಲಕ್ಕಮ್ಮ, ಜಕ್ಕನಹಳ್ಳಿ ಬೈರವೇಶ್ವರ ಸ್ವಾಮಿ, ಗೋಡೆಕೆರೆ ಹಾಗೂ ಗುಬ್ಬಿ ತಾಲೂಕು ಪತ್ರೆಮತಿಘಟ್ಟದಲ್ಲಿ ನಡೆದ ಧಾರ್ವಿುಕ ಸಮಾರಂಭದಲ್ಲಿ ಭಾಗವಹಿಸಿದ್ದರು.

ಎಣಿಕೆಗೂ ಗೌಡರು ಬರೋದು ಡೌಟ್!?: ಚುನಾವಣೆ ನಂತರ ಜಿಲ್ಲೆಯಲ್ಲಿ ಕಾಣಿಸಿಕೊಳ್ಳದ ಜೆಡಿಎಸ್ ಅಭ್ಯರ್ಥಿ, ಮಾಜಿ ಪ್ರಧಾನಿ ದೇವೇಗೌಡ ಮತ ಎಣಿಕೆ ಸಂದರ್ಭದಲ್ಲಿಯಾದರೂ ಜಿಲ್ಲೆಯಲ್ಲಿ ಕಾಣಿಸಿಕೊಳ್ಳಲಿ ಎಂಬುದು ಗೆಲುವಿನ ವಿಶ್ವಾಸದಲ್ಲಿರುವ ಜೆಡಿಎಸ್ ಕಾರ್ಯಕರ್ತರ ಆಸೆ. ರಾಷ್ಟ್ರ ರಾಜಕಾರಣದ ಆಗು-ಹೋಗುಗಳ ಬಗ್ಗೆ ಗಮನಹರಿಸಲಿರುವ ದೇವೇಗೌಡರು ಗುರುವಾರ ಕೂಡ ತುಮಕೂರಿನಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎಂಬುದು ಅವರ ಆಪ್ತರ ಅಭಿಪ್ರಾಯವಾಗಿದೆ.

Leave a Reply

Your email address will not be published. Required fields are marked *