ಮತ ಎಣಿಕೆಗೆ ಜಿಲ್ಲಾಡಳಿತ ಸಜ್ಜು

ಹಾವೇರಿ: ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಮೇ 23ರಂದು ಬೆಳಗ್ಗೆ 8 ಗಂಟೆಯಿಂದ ಆರಂಭಗೊಂಡು ಮಧ್ಯಾಹ್ನ ಇಲ್ಲವೇ ಸಂಜೆ ವೇಳೆಗೆ ಫಲಿತಾಂಶ ಹೊರಬೀಳಲಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

ತಾಲೂಕಿನ ದೇವಗಿರಿಯಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್​ನಲ್ಲಿ ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಪ್ರತಿ ವಿಧಾನಸಭಾ ಕ್ಷೇತ್ರವಾರು ಪ್ರತ್ಯೇಕವಾಗಿ ಮತ ಎಣಿಕೆ ನಡೆಯಲಿದೆ. ಈ ಉದ್ದೇಶಕ್ಕಾಗಿ ಎಂಟು ಕೊಠಡಿಗಳನ್ನು ಸಜ್ಜುಗೊಳಿಸಲಾಗಿದೆ. ಪ್ರತಿ ಕೊಠಡಿಯಲ್ಲಿ 14 ಟೇಬಲ್​ಗಳನ್ನು ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ. ಅಂಚೆ ಮತದಾನ ಹಾಗೂ ಸೇವಾ ಮತಗಳ ಎಣಿಕೆಗೂ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಹಾಗೂ ವೀಕ್ಷಕರಿಗೆ, ಚುನಾವಣಾ ಅಧಿಕಾರಿಗಳಿಗೆ, ಮಾಧ್ಯಮ ಹಾಗೂ ಅಭ್ಯರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ 15 ಕೊಠಡಿಗಳನ್ನು ಸಜ್ಜುಗೊಳಿಸಲಾಗಿದೆ. ಪ್ರತಿ ಎಣಿಕೆ ಕೊಠಡಿಯಲ್ಲಿಯೂ ಪ್ರದರ್ಶಕದ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಸುತ್ತಿನ ಒಟ್ಟು ಮತಗಳನ್ನು ಪ್ರದರ್ಶಿಸಲಾಗುತ್ತದೆ. ಸುವಿಧಾ ಆಪ್ ಮೂಲಕ ಮತದಾನದ ವಿವರವನ್ನು ಆನ್​ಲೈನ್ ಮೂಲಕ ಅಪ್​ಲೋಡ್ ಮಾಡುವ ವ್ಯವಸ್ಥೆ ಮಾಡಲಾಗಿದೆ.

ಎಣಿಕೆಗಾಗಿ ಒಟ್ಟಾರೆ 126 ಟೇಬಲ್​ಗಳ ವ್ಯವಸ್ಥೆ ಮಾಡಲಾಗಿದೆ. 153 ಕೌಂಟಿಂಗ್ ಮೇಲ್ವಿಚಾರಕರು, 153 ಎಣಿಕೆ ಸಹಾಯಕರು, 157 ಎಣಿಕೆ ಸೂಕ್ಷ್ಮವೀಕ್ಷಕರು, 144 ಭದ್ರತಾ ಕೊಠಡಿ ಸಹಾಯಕ ಸಿಬ್ಬಂದಿ, 80 ಟ್ಯಾಬುಲೇಷನ್ ಸ್ಟಾಫ್ ಸೇರಿ 703 ಸಿಬ್ಬಂದಿ ಎಣಿಕೆ ಕಾರ್ಯಕ್ಕೆ ನೆರವಾಗಲಿದ್ದಾರೆ ಎಂದು ತಿಳಿಸಿದರು.

ಮತ ಎಣಿಕೆ ಪ್ರಕ್ರಿಯೆ: ಮೇ 23ರಂದು ಬೆಳಗ್ಗೆ 7.30ಕ್ಕೆ ಚುನಾವಣಾ ವೀಕ್ಷಕರು, ಅಭ್ಯರ್ಥಿಗಳು, ಎಣಿಕೆ ಏಜೆಂಟರ ಸಮ್ಮುಖದಲ್ಲಿ ಭದ್ರತಾ ಕೊಠಡಿಗಳನ್ನು ತೆರೆಯಲಾಗುವುದು. ಮತ ಯಂತ್ರಗಳನ್ನು ಎಣಿಕೆ ಕೊಠಡಿಗೆ ಸಾಗಿಸಲಾಗುವುದು. ಬೆಳಗ್ಗೆ 8 ಗಂಟೆಗೆ ಅಂಚೆ ಮತಪತ್ರಗಳ ಎಣಿಕೆ, ಬೆಳಗ್ಗೆ 8.30ಕ್ಕೆ ಇವಿಎಂಗಳ ಎಣಿಕೆ ಪ್ರಾರಂಭಿಸಲಾಗುತ್ತದೆ. ಕ್ಷೇತ್ರದಲ್ಲಿ 1,972 ಮತಗಟ್ಟೆಗಳ ಇವಿಎಂಗಳ ಮತ ಎಣಿಕೆ ಕಾರ್ಯ 16ರಿಂದ 20 ಸುತ್ತು ನಡೆಯಲಿದೆ.

ಕ್ಷೇತ್ರವಾರು ಸುತ್ತುಗಳು:ಶಿರಹಟ್ಟಿ ವಿಧಾನಸಭಾ ಕ್ಷೇತ್ರದ 250 ಮತಗಟ್ಟೆಗಳಿಗೆ 18 ಸುತ್ತು, ಗದಗ ಕ್ಷೇತ್ರದ 223 ಮತಗಟ್ಟೆಗಳಿಗೆ 16 ಸುತ್ತು, ರೋಣ 267 ಮತಗಟ್ಟೆಗಳಿಗೆ 20 ಸುತ್ತು, ಹಾನಗಲ್ಲ 239 ಮತಗಟ್ಟೆಗಳಿಗೆ 18 ಸುತ್ತು, ಹಾವೇರಿ 257 ಮತಗಟ್ಟೆಗಳಿಗೆ 19 ಸುತ್ತು, ಬ್ಯಾಡಗಿ 241 ಮತಗಟ್ಟೆಗಳಿಗೆ 17 ಸುತ್ತು, ಹಿರೇಕೆರೂರು 229 ಮತಗಟ್ಟೆಗಳಿಗೆ 16 ಸುತ್ತು, ರಾಣೆಬೆನ್ನೂರ 266 ಮತಗಟ್ಟೆಗಳಿಗೆ 19 ಸುತ್ತು ಮತ ಎಣಿಕೆ ನಡೆಯಲಿದೆ.

ವಾಹನ ನಿಲುಗಡೆ ಹಾಗೂ ಪಾಸ್ ಹೊಂದಿದವರಿಗೆ ಪ್ರತ್ಯೇಕ ಪ್ರವೇಶ ಮಾರ್ಗವನ್ನು ಜಿಲ್ಲಾ ಪೊಲೀಸ್ ಇಲಾಖೆ ಗುರುತಿಸಿದೆ. ಮೂರು ಹಂತದ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಮತ ಎಣಿಕೆ ಕೇಂದ್ರದ ಕಟ್ಟಡದ ಸುತ್ತಲೂ ಬ್ಯಾರಿಕೇಡ್ ನಿರ್ವಿುಸಲಾಗಿದೆ.

ಮದ್ಯ ಮಾರಾಟ ನಿಷೇಧ: ಜಿಲ್ಲೆಯಾದ್ಯಂತ ಗುರುವಾರ ಬೆಳಗ್ಗೆ 6ರಿಂದ ಮಧ್ಯರಾತ್ರಿ 12 ಗಂಟೆವರೆಗೆ ಮದ್ಯಪಾನ ಹಾಗೂ ಮದ್ಯಮಾರಾಟ ನಿಷೇಧಿಸಲಾಗಿದೆ. 144 ಕಲಂ ಜಾರಿಗೊಳಿಸಲಾಗಿದೆ. ವಿಜಯೋತ್ಸವ ಆಚರಿಸಲು ನಿರ್ಬಂಧ ಹೇರಲಾಗಿದೆ. ಮೆರವಣಿಗೆ, ಸಭೆ-ಸಮಾರಂಭಕ್ಕೂ ಅವಕಾಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

Leave a Reply

Your email address will not be published. Required fields are marked *