ಹಾಸನ: ಅಭ್ಯರ್ಥಿಗಳಿಗೆ ಮತದಾರರ ನಾಡಿಮಿಡಿತವನ್ನು ಅರಿಯುವ ಟೆನ್ಷನ್‌ಗಿಂತ ಇದೀಗ ಇನ್ನೇನು ಕೆಲವೇ ಗಂಟೆಗಳಲ್ಲಿ ಪ್ರಕಟಗೊಳ್ಳುವ ಫಲಿತಾಂಶದ ಬಗ್ಗೆ ಚಿಂತೆ ಹೆಚ್ಚಾಗಿದೆ. ಅವರಲ್ಲಿ ಪ್ರಚಾರದ ತಲೆ ನೋವಿಗಿಂತ ಮತ ಎಣಿಕೆಯ ಎದೆಬಡಿತ ಹೆಚ್ಚಾಗಿದೆ. ಕಳೆದ ಎರಡು ತಿಂಗಳಿನ ಚುನಾವಣೆಯ ಅಂತಿಮ ಘಟ್ಟಕ್ಕೆ ಬಂದಿದ್ದು ಈಗ ಎಲ್ಲರ ಚಿತ್ತ ಮತ ಎಣಿಕೆಯತ್ತ ನೆಟ್ಟಿದೆ. ಈಗಾಗಲೇ ಜಿಲ್ಲೆಯ ಜನಸಂದಣಿ ಪ್ರದೇಶ ಸೇರಿದಂತೆ ಎಲ್ಲರ ಬಾಯಲ್ಲೂ ಕೂಡ ಫಲಿತಾಂಶದ್ದೇ ಮಾತುಕತೆ.
ಕಳೆದ ಬಾರಿಗಿಂತ ಈ ಬಾರಿ ಜಿಲ್ಲೆಯಲ್ಲಿ ಹೆಚ್ಚು ಕ್ಷೇತ್ರಗಳು ಜಿದ್ದಾಜಿದ್ದಿನಿಂದ ಕೂಡಿದ್ದರಿಂದ ಯಾರಿಗೆ ಗೆಲುವು- ಸೋಲು ಎಂಬುದನ್ನು ಅಂದಾಜಿಸಲು ಸಾಧ್ಯವಾಗುತ್ತಿಲ್ಲ. ಕೆಲವರು ತಮ್ಮ ತಮ್ಮ ಮೂಗಿನ ನೇರಕ್ಕೆ ಅಥವಾ ತಮಗೆ ಸಿಕ್ಕ ಅಂಕಿ-ಅಂಶಗಳ ಆಧಾರದ ಮೇಲೆ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬ ಚರ್ಚೆಯಲ್ಲಿ ತೊಡಗಿಕೊಂಡಿದ್ದಾರೆ.
ಹಿಂದಿನ ಚುನಾವಣೆಗಳಿಗಿಂತ ಈ ಬಾರಿ ಚುನಾವಣೆ ಭಾರೀ ಕುತೂಹಲ ಮೂಡಿಸಿದೆ. ಕಳೆದ ಬಾರಿ ಚುನಾವಣೆಯಲ್ಲಿ ಹಾಸನ ಮತ್ತು ಸಕಲೇಶಪುರ ಕ್ಷೇತ್ರ ಹೊರತುಪಡಿಸಿದರೆ ಉಳಿದ ಕ್ಷೇತ್ರಗಳ ಫಲಿತಾಂಶದ ಬಗ್ಗೆ ಜನರು ಮೊದಲೇ ನಿಖರವಾಗಿ ಊಹಿಸಿದ್ದರು. ಆದರೆ ಈ ಬಾರಿ ಎಲ್ಲಾ ಕ್ಷೇತ್ರಗಳಲ್ಲೂ ನೇರ ಹಣಾಹಣಿ ಏರ್ಪಟ್ಟಿದ್ದು, ಯಾರು ಗೆಲ್ಲುತ್ತಾರೆ ಎಂಬುದನ್ನು ಅಂದಾಜಿಸಲು ಸಾಧ್ಯವಾಗುತ್ತಿಲ್ಲ.
ಹಾಸನ ವಿಧಾನಸಭಾ ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆದ ಕ್ಷೇತ್ರವಾಗಿದೆ. ಚುನಾವಣೆ ಮುಗಿದ ಬಳಿಕವೂ ಈ ಕ್ಷೇತ್ರದ ಬಗ್ಗೆ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ. ಸ್ವರೂಪ್ ಮತ್ತು ಪ್ರೀತಂಗೌಡರ ನಡುವೆ ಪೈಪೋಟಿ ಏರ್ಪಟ್ಟಿದೆ. ಅದೇ ರೀತಿ ಸಕಲೇಶಪುರದಲ್ಲಿಯೂ ಕೂಡ ಮೂವರು ಅಭ್ಯರ್ಥಿಗಳಾದ ಎಚ್.ಕೆ.ಕುಮಾರಸ್ವಾಮಿ, ಸಿಮೆಂಟ್ ಮಂಜು, ಮುರಳಿ ಮೋಹನ್ ಅವರ ನಡುವೆ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ. ಬೇಲೂರಿನಲ್ಲಿಯೂ ಕೂಡ ಈ ಬಾರಿ ಮೂವರು ಅಭ್ಯರ್ಥಿಗಳಾದ ಕೆ.ಎಸ್.ಲಿಂಗೇಶ್, ಹುಲ್ಲಳ್ಳಿ ಸುರೇಶ್, ಬಿ.ಶಿವರಾಂ ಅವರ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ. ಅರಕಲಗೂಡಿನಲ್ಲಿ ಜೆಡಿಎಸ್ ಅಭ್ಯರ್ಥಿ ಎ.ಮಂಜು ಅವರಿಗೆ ಪ್ರಬಲ ಪೈಪೋಟಿ ನೀಡಿರುವುದು ಪಕ್ಷೇತರ ಅಭ್ಯರ್ಥಿಯಾಗಿರುವ ಎಂ.ಟಿ.ಕೃಷ್ಣೇಗೌಡರು. ಅದೇ ರೀತಿ ಅರಸೀಕೆರೆಯಲ್ಲಿ ಶಿವಲಿಂಗೇಗೌಡ ಮತ್ತು ಎನ್.ಆರ್.ಸಂತೋಷ್ ನಡುವೆ ಹಣಾಹಣಿ ಏರ್ಪಟ್ಟಿದೆ. ಇನ್ನುಳಿದಂತೆ ಹೊಳೆನರಸೀಪುರ ಮತ್ತು ಶ್ರವಣಬೆಳಗೊಳದಲ್ಲಿ ದಳಪತಿಗಳಾದ ಎಚ್.ಡಿ.ರೇವಣ್ಣ ಮತ್ತು ಸಿ.ಎನ್. ಬಾಲಕೃಷ್ಣ ಅವರಿಗೆ ಕಾಂಗ್ರೆಸ್ ಅಭ್ಯರ್ಥಿಗಳಾದ ಶ್ರೇಯಸ್ ಪಟೇಲ್ ಮತ್ತು ಎಂ.ಎ. ಗೋಪಾಲಸ್ವಾಮಿ ನಿದ್ದೆಗೆಡಿಸಿದ್ದಾರೆ. ಯಾರು ಏನೇ ಲೆಕ್ಕಾಚಾರ ಹಾಕುತ್ತಿದ್ದರೂ ಕೂಡ ಮತದಾರರ ತೀರ್ಮಾನ ಏನು ಎಂಬುದು ಇಂದು ಬೆಳಗ್ಗೆ 7 ಗಂಟೆಯಿಂದ ಆರಂಭವಾಗುವ ಮತ ಎಣಿಕೆಯಿಂದ ತಿಳಿದುಬರಲಿದೆ.
ಜಿಲ್ಲೆಯಲ್ಲಿ ಈ ಬಾರಿ ಅಚ್ಚರಿಯ ಫಲಿತಾಂಶ ಸಾಧ್ಯತೆ
ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಹಿಂದೆಂದಿಗಿಂತ ಈ ಬಾರಿ ಎಲ್ಲಾ ಕ್ಷೇತ್ರಗಳಲ್ಲೂ ನೇರ ಪೈಪೋಟಿ ನಡೆದಿದ್ದು, ಕೆಲ ಕ್ಷೇತ್ರಗಳಲ್ಲಿ ಅಚ್ಚರಿಯ ಫಲಿತಾಂಶ ಬರುವ ಸಾಧ್ಯತೆಗಳಿವೆ. ಅದು ಯಾರ ಸೋಲು- ಗೆಲುವುಗಳಾಗಿರಹುದು ಅಥವಾ ಮತಗಳ ಅಂತರವಿರಬಹುದು, ಜನರು ಮತ್ತು ಅಭ್ಯರ್ಥಿಗಳ ಬೆಂಬಲಿಗರು ಇಟ್ಟುಕೊಂಡುರವ ನಿರೀಕ್ಷೆಗೂ ಮೀರಿ ನಿಬ್ಬೆರಗಾಗುವ ಫಲಿತಾಂಶ ಬರುವ ಸಾಧ್ಯತೆಗಳಿವೆ.
11 ಗಂಟೆಗೆ ಸ್ಪಷ್ಟ ಚಿತ್ರಣ
ಜಿಲ್ಲೆಯ 7 ವಿಧಾನಸಭಾ ಕ್ಷೇತ್ರದ 73 ಅಭ್ಯರ್ಥಿಗಳ ಭವಿಷ್ಯ ಏನು ಎಂಬ ಸ್ಪಷ್ಟ ಚಿತ್ರಣ ಬೆಳಗ್ಗೆ 11 ಗಂಟೆಯೊಳಗೆ ಹೊರಬೀಳಲಿದೆ. ಯಾರಿಗೆ ವಿಜಯಮಾಲೆ, ಯಾರಿಗೆ ಸೋಲಿನ ಕಹಿ ಎಂಬ ಮಾಹಿತಿ ತಿಳಿದುಬರಲಿದೆ. 7 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡು 12 ಗಂಟೆಯೊಳಗೆ ಸಂಪೂರ್ಣವಾಗಿ ಫಲಿತಾಂಶ ಹೊರ ಬೀಳುವ ಸಾಧ್ಯತೆಗಳಿವೆ. ಅಂಚೆ ಮತದಾನ ಎಣಿಕೆ ಹಿಂದಿಗಿಂತ ಈ ಬಾರಿ ಹೆಚ್ಚು ಇರುವುದರಿಂದ ಅದರ ಎಣಿಕೆ ಕಾರ್ಯ ಸ್ವಲ್ಪ ವಿಳಂಬವಾಗಬಹುದು.