ಕೇಶವಮೂರ್ತಿ ವಿ.ಬಿ. ಹುಬ್ಬಳ್ಳಿ
ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ ಪ್ರಕರಣದ ಬಳಿಕ ಮಹಿಳಾ ಸುರಕ್ಷತೆ ದೃಷ್ಟಿಯಿಂದ ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ‘ಚನ್ನಮ್ಮ ಪಡೆ’ ಮತ್ತೆ ಸಜ್ಜಾಗಿದ್ದು, ಪುಂಡ ಪೋಕರಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಈ ತಂಡ ಕರ್ತವ್ಯ ನಿರ್ವಹಿಸಲಿದೆ.
ಈ ಹಿಂದೆ ಪಾಂಡುರಂಗ ರಾಣೆ ಪೊಲೀಸ್ ಆಯುಕ್ತರಾಗಿದ್ದ ವೇಳೆ ಚಾಲ್ತಿಯಲ್ಲಿದ್ದ ‘ಚನ್ನಮ್ಮ ಪಡೆ’ ಕ್ರಮೇಣವಾಗಿ ನೇಪಥ್ಯಕ್ಕೆ ಸರಿದಿತ್ತು. ಸದ್ಯ ದೇಶಾದ್ಯಂತ ಮಹಿಳಾ ಸುರಕ್ಷತೆ ಕುರಿತ ಚರ್ಚೆ ನಡೆದಿರುವ ಹಿನ್ನೆಲೆಯಲ್ಲಿ ಹು-ಧಾ ಪೊಲೀಸ್ ಕಮಿಷನರೇಟ್ ಅವಳಿ ನಗರದಲ್ಲಿ ಚನ್ನಮ್ಮ ಪಡೆಗೆ ಜೀವ ತುಂಬುವ ಪ್ರಯತ್ನಕ್ಕೆ ಮುಂದಾಗಿದೆ.
ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ 2 ಪ್ರತ್ಯೇಕ ತಂಡಗಳು ಕಾರ್ಯ ನಿರ್ವಹಿಸಲಿದ್ದು, ಪ್ರತ್ಯೇಕ ವಾಹನ ನೀಡಲಾಗುತ್ತದೆ. ತಂಡದಲ್ಲಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಇರಲಿದ್ದಾರೆ. ಓರ್ವ ಎಎಸ್ಐ, ಓರ್ವ ಮುಖ್ಯಪೇದೆ, ಓರ್ವ ಚಾಲಕ ಹಾಗೂ ಓರ್ವ ಪೇದೆ ತಂಡದಲ್ಲಿ ಇರುತ್ತಾರೆ. ಒಟ್ಟು 16 ಸಿಬ್ಬಂದಿಯನ್ನು ಚನ್ನಮ್ಮ ಪಡೆಗೆ ನೇಮಿಸಲಾಗಿದೆ. ಈ ತಂಡಗಳು ಪಾಳಿ ಪ್ರಕಾರ 24/7 ಮಹಿಳೆಯರ ಸುರಕ್ಷತೆಗಾಗಿ ಕೆಲಸ ಮಾಡುತ್ತವೆ.
ಚನ್ನಮ್ಮ ಪಡೆಯ ಎರಡೂ ತಂಡಗಳು ಈಗಾಗಲೇ ಪ್ರಾಯೋಗಿಕವಾಗಿ ಕೆಲಸ ಆರಂಭಿಸಿವೆ. ಜ. 18ರ ಕೇಂದ್ರ ಗೃಹ ಸಚಿವ ಅಮಿತ್ ಷಾ ರ‍್ಯಾಲಿ ಬಳಿಕ ಅಧಿಕೃತವಾಗಿ ಚಾಲನೆ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಬಾರಿಯಂತೆ ಆರಂಭ ಶೂರತ್ವ ತೋರಿಸದೇ ಸೂಕ್ತ ತರಬೇತಿ ನೀಡಿ ಅಗತ್ಯ ಸೇವೆ ನೀಡುವ ಮೂಲಕ ಅವಳಿ ನಗರದ ಮಹಿಳೆಯರಿಗೆ ಚನ್ನಮ್ಮ ಪಡೆ ಬೆನ್ನೆಲುಬಾಗಿ ನಿಲ್ಲುವಂತಾಗಬೇಕು ಎಂಬುದು ಸಾರ್ವಜನಿಕರ ಆಶಯವಾಗಿದೆ.
ತುರ್ತು ಸಂದರ್ಭ ಕರೆ ಮಾಡಿ : ರಾತ್ರಿ ವೇಳೆ, ಬಸ್ ನಿಲ್ದಾಣ, ಸಿಬಿಟಿ, ಕಾಲೇಜು, ಲೇಡೀಸ್ ಹಾಸ್ಟೆಲ್, ಪಿಜಿ ಹಾಗೂ ಮಹಿಳೆಯರು ಹೆಚ್ಚಾಗಿ ಓಡಾಡುವ ಸ್ಥಳಗಳಲ್ಲಿ ಚನ್ನಮ್ಮ ಪಡೆ ನಿಗಾ ಇಡಲಿದೆ. ಸಮಸ್ಯೆ ಉಂಟಾದಲ್ಲಿ ತಕ್ಷಣವೇ ಸ್ಥಳಕ್ಕೆ ಧಾವಿಸಲಿದೆ. ಸಮಸ್ಯೆಗೆ ಸಿಲುಕಿರುವ ಮಹಿಳೆಯರು, ತುರ್ತು ಸಂದರ್ಭದಲ್ಲಿ ಪೊಲೀಸ್ ಕಂಟ್ರೋಲ್ ರೂಂ 100 ಅಥವಾ ದೂ.ಸಂ. 0836-2233555 ಗೆ ಕರೆ ಮಾಡಬಹುದು ಎಂದು ಪೊಲೀಸ್ ಆಯುಕ್ತ ಆರ್. ದಿಲೀಪ ತಿಳಿಸಿದ್ದಾರೆ.
ಶಾಲಾ-ಕಾಲೇಜು ಬಳಿ ಗಸ್ತು: ಚನ್ನಮ್ಮ ಪಡೆ ಮುಖ್ಯವಾಗಿ ಶಾಲಾ- ಕಾಲೇಜು, ಮಹಿಳಾ ಕಾಲೇಜುಗಳ ಬಳಿ ಗಸ್ತು ತಿರುಗುತ್ತದೆ. ಕಾಲೇಜು ಆವರಣ, ರಸ್ತೆಬದಿ ಅಥವಾ ಬಸ್ ನಿಲ್ದಾಣ, ಪಾರ್ಕ್ಗಳಲ್ಲಿ ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಯಾರಾದರೂ ಚುಡಾಯಿಸಿದ್ದು ಕಂಡು ಬಂದರೆ ಜೀಪಿನಲ್ಲಿ ಎಳೆದುಕೊಂಡು ಬಂದು ಕ್ಲಾಸ್ ತೆಗೆದುಕೊಳ್ಳುತ್ತದೆ.
ಖಾಕಿ ಸಮವಸ್ತ್ರ : ಕಳೆದ ಬಾರಿ ಚನ್ನಮ್ಮ ಪಡೆಗೆ ಮಿಲಿಟರಿ ಶೈಲಿಯ ಉಡುಪು ನೀಡಲಾಗಿತ್ತು. ಆದರೆ, ಈ ಬಾರಿ ಖಾಕಿ ಸಮವಸ್ತ್ರದಲ್ಲೇ ಕರ್ತವ್ಯ ನಿರ್ವಹಿಸಲಿದೆ. ಹು-ಧಾ ಮಹಿಳಾ ಪೊಲೀಸ್ ಠಾಣೆ ಇನ್ ್ಸ ಪೆಕ್ಟರ್ ಅಶೋಕ ಚವ್ಹಾಣ ತಂಡದ ನೇತೃತ್ವ ವಹಿಸುವರು. ಚನ್ನಮ್ಮ ಪಡೆ ಹೊರತುಪಡಿಸಿ ಆಯಾ ಠಾಣೆ ವ್ಯಾಪ್ತಿಯ ಸಿಬ್ಬಂದಿಯೂ ಮಹಿಳೆಯರ ಸುರಕ್ಷತೆಗೆ ಒತ್ತು ಕೊಡಲಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಮಹಿಳೆಯರ ಸುರಕ್ಷತೆಗಾಗಿ ಹು-ಧಾ ಅವಳಿ ನಗರದಲ್ಲಿ ಚನ್ನಮ್ಮ ಪಡೆಯ 2 ತಂಡಗಳು ಸಿದ್ಧವಾಗಿದ್ದು, ಜ.20ರಿಂದ ಈ ತಂಡಕ್ಕೆ ವಿಶೇಷ ತರಬೇತಿ ನೀಡಲಾಗುವುದು. ಆತ್ಮವಿಶ್ವಾಸ, ಕರಾಟೆ, ಮಹಿಳೆಯರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸುವುದು ಹೇಗೆ ಎಂಬಿತ್ಯಾದಿ ತರಬೇತಿ ನೀಡಲಾಗುವುದು.
| ಆರ್. ದಿಲೀಪ, ಪೊಲೀಸ್ ಆಯುಕ್ತ