ಮತ್ತೆ ಮುನ್ನೆಲೆಗೆ ಬಂದ ಪ್ರತ್ಯೇಕ ಹಾಲು ಒಕ್ಕೂಟ

ಹಾವೇರಿ: ಧಾರವಾಡ ಹಾಲು ಒಕ್ಕೂಟಕ್ಕೆ ಹಾವೇರಿ ಜಿಲ್ಲೆಯವರೇ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಜಿಲ್ಲೆಯ ಹಲವು ವರ್ಷಗಳ ಬೇಡಿಕೆಯಾದ ಪ್ರತ್ಯೇಕ ಹಾಲು ಒಕ್ಕೂಟದ ಬೇಡಿಕೆಯ ಕನಸು ಮತ್ತೆ ಗರಿಗೆದರುವಂತೆ ಮಾಡಿದೆ.

ಶುಕ್ರವಾರ ಧಾರವಾಡದಲ್ಲಿ ಜರುಗಿದ ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷರಾಯ್ಕೆ ಚುನಾವಣೆಯಲ್ಲಿ ರಾಜಕೀಯ ಬದಲಾವಣೆಗಳು ನಡೆದು ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಗೊಂಡ ಹಾವೇರಿ ತಾಲೂಕು ಕಾಟೇನಹಳ್ಳಿ ಗ್ರಾಮದ ಬಸವರಾಜ ಅರಬಗೊಂಡ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕಳೆದ ಹಲವು ದಶಕಗಳಿಂದ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ಬಸವರಾಜ ಅರಬಗೊಂಡ, ಈಗಾಗಲೇ ಮೂರು ಬಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. 2004ರಲ್ಲಿ ಧಾರವಾಡ ಹಾಲು ಒಕ್ಕೂಟಕ್ಕೆ ನಿರ್ದೇಶಕರಾಗಿ ಮೊದಲ ಬಾರಿಗೆ ಆಯ್ಕೆಯಾದ ಇವರು 2006ರಲ್ಲಿ ಮೊದಲ ಬಾರಿಗೆ ಅಧ್ಯಕ್ಷರಾದರು. ಅಲ್ಲಿಂದ ಸತತವಾಗಿ ಮೂರು ಅವಧಿಗೆ (ಎರಡೂವರೆ ವರ್ಷಗಳಿಗೆ ಒಂದು ಅವಧಿ) 2013ರವರೆಗೆ ಅಧ್ಯಕ್ಷರಾಗಿದ್ದರು. ಮೂರನೇ ಬಾರಿಗೆ ಅಧ್ಯಕ್ಷರಾದ ಸಮಯದಲ್ಲಿ ಹಾವೇರಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ರಚಿಸುವ ಚಿಂತನೆ ನಡೆಸಿದ್ದರು. ನಂತರ ಅವರು ಅಧ್ಯಕ್ಷರಾಗಿ ಆಯ್ಕೆಯಾಗಲು ಸಾಧ್ಯವಾಗಲಿಲ್ಲ. ಆದರೂ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಬೇಡಿಕೆ ಜಿಲ್ಲೆಯಲ್ಲಿ ಹೋರಾಟದ ರೂಪವನ್ನು ಪಡೆದುಕೊಂಡಿತು. ಬಿಜೆಪಿ ಹಾಗೂ ರೈತ ಸಂಘಟನೆಗಳು ಪ್ರತಿಯೊಂದು ಹೋರಾಟದಲ್ಲಿಯೂ ಪ್ರತ್ಯೇಕ ಹಾಲು ಒಕ್ಕೂಟಕ್ಕೆ ಒತ್ತಾಯ ಮಾಡುತ್ತಲೇ ಬರಲಾಗುತ್ತಿದೆ. ಆದರೆ, ಬೇಡಿಕೆ ಮಾತ್ರ ಈಡೇರಿರಲಿಲ್ಲ.

ಬೇಡಿಕೆ ಏಕೆ…?: ಹಾವೇರಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟದ ಬೇಡಿಕೆ ಪೂರಕವಾಗಿದೆ. ಧಾರವಾಡ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ನಾಲ್ಕು ಜಿಲ್ಲೆಗಳಿಂದ ಪ್ರತಿದಿನ 2.50 ಲಕ್ಷ ಲೀಟರ್ ಹಾಲು ಸರಬರಾಜಾಗುತ್ತದೆ. ಅದರಲ್ಲಿ ಅರ್ಧದಷ್ಟು ಅಂದರೆ 1.20 ಲಕ್ಷ ಲೀಟರ್ ಹಾಲು ಹಾವೇರಿ ಜಿಲ್ಲೆಯಿಂದಲೇ ಪೂರೈಕೆಯಾಗುತ್ತದೆ. ಒಕ್ಕೂಟ ವ್ಯಾಪ್ತಿಯಲ್ಲಿ 900 ಹಾಲು ಉತ್ಪಾದಕರ ಸಹಕಾರಿ ಸಂಘಗಳಿದ್ದು, ಅದರಲ್ಲಿಯೂ ಸಿಂಹಪಾಲು 425 ಸಂಘಗಳು ಹಾವೇರಿ ಜಿಲ್ಲೆಯಲ್ಲಿವೆ. ಈ ಎಲ್ಲ ಕಾರಣಗಳಿಗೆ ಹಾವೇರಿಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ರಚನೆಯಾಗಬೇಕು ಎಂಬ ಬೇಡಿಕೆ ಮುನ್ನಲೆಗೆ ಬಂದಿತ್ತು.

ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಹಾಲು ಒಕ್ಕೂಟದ ಬೇಡಿಕೆ ಹೋರಾಟದ ಸ್ವರೂಪ ಪಡೆದಾಗ ಶೀಘ್ರವೇ ಪ್ರತ್ಯೇಕ ಹಾಲು ಒಕ್ಕೂಟ ರಚನೆಗೆ ಸಮಿತಿ ರಚಿಸಲಾಗಿತ್ತು. ಆದರೆ, ಸಮಿತಿಯು ಒಕ್ಕೂಟ ಸ್ಥಾಪನೆಯಾದರೆ ಒಕ್ಕೂಟಕ್ಕೆ ಬರುವ ಹಾಲನ್ನು ಮರಳಿ ಮಾರಾಟ ಮಾಡುವ ಮಾರುಕಟ್ಟೆ ವ್ಯವಸ್ಥೆಯಿಲ್ಲ ಎಂಬ ನೆಪವೊಡ್ಡಿದ್ದರಿಂದ ಜಿಲ್ಲೆಯ ಜನರ ಪ್ರತ್ಯೇಕ ಒಕ್ಕೂಟದ ಕನಸು ಕನಸಾಗಿಯೇ ಉಳಿದಿದೆ.

ಒಕ್ಕೂಟ ಸ್ಥಾಪಿಸಿಯೇ ಸಿದ್ಧ: ಹಾಲು ಒಕ್ಕೂಟಕ್ಕೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಸವರಾಜ ಅರಬಗೊಂಡ, ‘ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಲು ಬದ್ಧನಾಗಿದ್ದೇನೆ. ಹಾವೇರಿಗೆ ಪ್ರತ್ಯೇಕ ಒಕ್ಕೂಟ ಮಾಡಿದರೆ ಮಾರುಕಟ್ಟೆಯಿಲ್ಲ ಎಂಬ ಮಾತನ್ನು ನಾನು ಒಪ್ಪುವುದಿಲ್ಲ. ನಿತ್ಯ ಉತ್ಪಾದನೆಯಾಗುವ 1.20 ಲಕ್ಷ ಲೀಟರ್ ಹಾಲಿನಲ್ಲಿ ಜಿಲ್ಲೆಯಲ್ಲಿ 10 ಸಾವಿರ ಲೀಟರ್ ಹಾಲಿನ ರೂಪದಲ್ಲಿ, 12 ಸಾವಿರ ಲೀಟರ್ ಗುಡ್​ಲೈಪ್ ಹಾಲಿನ ರೂಪದಲ್ಲಿ, ಇನ್ನು ಹಾಲಿನ ಉತ್ಪನ್ನಗಳು 6ರಿಂದ 7 ಸಾವಿರ ಲೀಟರ್​ನಷ್ಟು ಮಾರಾಟವಾಗುತ್ತದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಸರ್ಕಾರಿ ಶಾಲೆಗಳಿದ್ದು, ಮಕ್ಕಳ ಸಂಖ್ಯೆಯೂ ಅಧಿಕವಾಗಿದೆ. ಕ್ಷೀರಭಾಗ್ಯಕ್ಕೆ 50 ಸಾವಿರಕ್ಕೂ ಅಧಿಕ ಲೀಟರ್ ಹಾಲಿನಪುಡಿ ಖರ್ಚಾಗುತ್ತಿದೆ. ಹೀಗಾಗಿ ಪ್ರತ್ಯೇಕ ಒಕ್ಕೂಟ ಸ್ಥಾಪನೆಯಾದರೆ ಜಿಲ್ಲೆಯ ರೈತರಿಗೆ ಅನುಕೂಲವಾಗಲಿದೆ’ ಎಂದು ವಿವರಿಸಿದ್ದಾರೆ.

ಸಾರಿಗೆ ವೆಚ್ಚ ಕಡಿತ: ಪ್ರತ್ಯೇಕ ಒಕ್ಕೂಟವಾದರೆ ಪ್ರತಿನಿತ್ಯ ಧಾರವಾಡಕ್ಕೆ ಸಾಗಿಸುವ ಸಾರಿಗೆ ವೆಚ್ಚದಲ್ಲಿ ಉಳಿತಾಯವಾಗಲಿದೆ. ಹಾಲಿನ ಜೀವಿತಾವಧಿಯೂ ಹೆಚ್ಚಲಿದೆ. ಇದರಿಂದ ಒಕ್ಕೂಟವು ನಷ್ಟಕ್ಕಿಂತ ಲಾಭದಾಯಕವಾಗಿ ನಡೆಯುತ್ತದೆ. ಒಕ್ಕೂಟಕ್ಕೆ ಲಾಭವಾದರೆ ಅದರಿಂದ ಹಾಲಿನ ದರದಲ್ಲಿ ಹೆಚ್ಚಳವಾಗಿ ಹಾಲು ಉತ್ಪಾದಕ ರೈತರಿಗೆ ಲಾಭವಾಗುತ್ತದೆ. ಇದನ್ನು ಸಮರ್ಪಕವಾಗಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು ಎಂದು ನೂತನ ಅಧ್ಯಕ್ಷ ಬಸವರಾಜ ಅರಬಗೊಂಡ ‘ವಿಜಯವಾಣಿ’ಗೆ ತಿಳಿಸಿದರು.

ಹಾವೇರಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಮಾಡುವ ಉದ್ದೇಶದಿಂದಲೇ ನಾನು ಕಾಂಗ್ರೆಸ್ ಸೇರಿದ್ದೇನೆ. ಜಿಲ್ಲೆಯ ಜನರ ಬೇಡಿಕೆ ಈಡೇರಿಕೆಗೆ ಬಿಜೆಪಿಯವರಿಗೆ ಕೊನೆಯವರೆಗೂ ಇದೊಂದು ಬಾರಿ ಅವಕಾಶ ಕೇಳಿದೆ. ಅದು ಸಾಧ್ಯವಾಗದೇ ಇದ್ದರಿಂದ ರೈತರಿಗಾಗಿ ಪಕ್ಷಾಂತರ ಮಾಡಬೇಕಾಯಿತು. ರಾಜ್ಯದಲ್ಲಿ ಸದ್ಯ ಮೈತ್ರಿ ಸರ್ಕಾರವಿದೆ. ನಮ್ಮ ಜಿಲ್ಲೆಯ ಬೇಡಿಕೆಗೆ ನ್ಯಾಯ ಸಿಗುವ ಭರವಸೆಯೂ ಸಿಕ್ಕಿದೆ. ಹಾಲು ಒಕ್ಕೂಟದ ಜೊತೆಗೆ ಹಾಲು ಉತ್ಪಾದಕರ ಸಂಘಗಳಲ್ಲಿ ಪ್ರೋತ್ಸಾಹ ಧನದಲ್ಲಿ ಕೆಲಸ ಮಾಡುತ್ತಿರುವ 2 ಸಿಬ್ಬಂದಿಗೆ ಕನಿಷ್ಠ ವೇತನ, ಹಾಲಿನ ಗುಣಮಟ್ಟ ಹಾಗೂ ಆದಾಯ ಹೆಚ್ಚಳಕ್ಕೆ ಆದ್ಯತೆ ನೀಡಿ ಕೆಲಸ ಮಾಡುವ ಗುರಿ ಹೊಂದಿದ್ದೇನೆ.
| ಬಸವರಾಜ ಅರಬಗೊಂಡ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ

Leave a Reply

Your email address will not be published. Required fields are marked *