More

  ಮತ್ತೆ ಮಹಾ ಹೋರಾಟಕ್ಕೆ ಸಿದ್ಧತೆ

  ನವಲಗುಂದ: ಮಹದಾಯಿ ವಿಷಯವಾಗಿ ಸವೋಚ್ಚ ನ್ಯಾಯಾಲಯದಲ್ಲಿ ಗೋವಾ ಸರ್ಕಾರ, ಕರ್ನಾಟಕದ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಮಾಡಿ ಹೊಸ ಕ್ಯಾತೆ ತೆಗೆಯುವ ಮೂಲಕ ಕಾನೂನು ಸಮರಕ್ಕಿಳಿದಿದೆ. ಹೀಗಾಗಿ ಉತ್ತರ ಕರ್ನಾಟಕ ಜನ ಮತ್ತೆ ಮಹಾ ಹೋರಾಟಕ್ಕೆ ಸಿದ್ಧಗೊಳ್ಳುವಂತೆ ಮಾಡಿದೆ.

  ಮಹದಾಯಿ ನದಿ ನೀರು ಹಂಚಿಕೆಯಲ್ಲಿ ನ್ಯಾಯಾಧಿಕರಣದಿಂದ ಶಾಶ್ವತ ನ್ಯಾಯ ದೊರಕಿದೆ ಎಂದು ಬೀಗುತ್ತಿದ್ದ ಉತ್ತರ ಕರ್ನಾಟಕ ಜನತೆಯಲ್ಲಿ ಮತ್ತೆ ಢವಢವ ಶುರುವಾಗಿದೆ. ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ 13 ತಾಲೂಕುಗಳ ರೈತರಲ್ಲಿ ಆಕ್ರೋಶದ ಕಿಡಿಯನ್ನು ಹತ್ತಿಸಿದೆ.

  2018 ಆಗಸ್ಟ್​ನಲ್ಲಿ ಮಹದಾಯಿ ನ್ಯಾಯಾಧಿಕರಣವು 13.42 ಟಿಎಂಸಿ ಕುಡಿಯುವ ನೀರನ್ನು ಕರ್ನಾಟಕಕ್ಕೆ ನೀಡಲು ಮಧ್ಯಂತರ ಆದೇಶ ಹೊರಡಿಸಿತ್ತು. 2020 ಫೆಬ್ರುವರಿ 5ರಂದು ಸವೋಚ್ಚ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಗೆಜೆಟ್ ನೋಟಿಫಿಕೇಷನ್ ಹೊರಡಿಸಲು ಆದೇಶಿಸಿತ್ತು. ಬಳಿಕ ಕೇಂದ್ರ ಸರ್ಕಾರ ಫೆ. 27ರಂದು ಮಹದಾಯಿಯಿಂದ ಕರ್ನಾಟಕ ಪಾಲಿನ ಕುಡಿಯುವ ನೀರಿನ ಹಕ್ಕು ಪಡೆಯಲು ಗೆಜೆಟ್ ನೋಟಿಫಿಕೇಷನ್ ಹೊರಡಿಸಿ ಅಂತಿಮ ನಿರ್ಧಾರ ತಿಳಿಸಿತ್ತು. ಆಗ ಕರ್ನಾಟಕ ಜನತೆ ಸಂಭ್ರಮಿಸಿದ್ದರು.

  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಬಜೆಟ್​ನಲ್ಲಿ ಮಹದಾಯಿ ಯೋಜನೆಗೆ 500 ಕೋಟಿ ರೂ. ಮೀಸಲಿಟ್ಟು ಕಾಮಗಾರಿ ಕೈಗೆತ್ತಿಕೊಳ್ಳಲು ಸಿದ್ಧವಾಗಿದ್ದರು. ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಅನುಮತಿಗೆ ಕಾಯಲಾಗುತ್ತಿದೆ. ಅನುಮತಿ ಲಭಿಸಿದ ಕೂಡಲೆ ಕಾಮಗಾರಿ ಕೈಗೊಳ್ಳುವ ಹಂತದಲ್ಲಿರುವಾಗಲೇ ಗೋವಾ ಸರ್ಕಾರ ಕಾಮಗಾರಿಗೆ ಅಡ್ಡಗಾಲು ಹಾಕಲು ಮುಂದಾಗಿದೆ. ಕೇಂದ್ರ, ಕರ್ನಾಟಕ ಹಾಗೂ ಗೋವಾದಲ್ಲಿ ಒಂದೇ ಪಕ್ಷವಿದ್ದರೂ, ಪಕ್ಷವನ್ನು ಪಕ್ಕಕ್ಕಿಟ್ಟು ಗೋವಾ ಕ್ಯಾತೆ ತೆಗೆದಿದ್ದು, ಮಹದಾಯಿ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.

  ಇತ್ತ ರಾಜ್ಯದಲ್ಲಿರುವ ಬಿಜೆಪಿಗೆ ಪ್ರತಿಷ್ಠೆ ವಿಷಯವಾದರೆ, ಮತ್ತೊಂದೆಡೆ ರೈತರು ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.

  ಮಹದಾಯಿ ವಿಚಾರದಲ್ಲಿ ಗೋವಾ ವಿನಾಕಾರಣ ಕ್ಯಾತೆ ತೆಗೆಯುತ್ತಿದೆ. ಗೋವಾ ನ್ಯಾಯಾಂಗ ನಿಂದನೆ ಆರೋಪ ನಿರಾಧಾರ. ಕುಡಿಯುವ ನೀರಿನ ಹಕ್ಕನ್ನು ಪಡೆಯಲು ಯಾರ ಮನ್ನಣೆ ಬೇಕಿಲ್ಲ. ಆದರೆ, ಕರ್ನಾಟಕ ಸರ್ಕಾರ ವಿಳಂಬ ನೀತಿ ಅನುಸರಿಸದೇ ತ್ವರಿತಗತಿಯಲ್ಲಿ ಕಾಮಗಾರಿ ಕೈಗೆತ್ತಿಗೊಳ್ಳಬೇಕು. ಗೋವಾ ಆರೋಪ ಮಾಡಲು ಆಸ್ಪದ ನೀಡಬಾರದು.

  | ಲೋಕನಾಥ ಹೆಬಸೂರ, ರೈತ ಮುಖಂಡ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts