ಮತ್ತೆ ಚೆಕ್ ಡ್ಯಾಂ ಪ್ರತಿಧ್ವನಿ

ಧಾರವಾಡ: ಚೆಕ್ ಡ್ಯಾಂ ನಿರ್ಮಾಣ ಸಂಬಂಧ ಜಿ.ಪಂ. ಆಡಳಿತಾರೂಢ ಕಾಂಗ್ರೆಸ್ ಸದಸ್ಯರ ಮಧ್ಯೆ ಜಟಾಪಟಿ ನಡೆದ ಪ್ರಸಂಗ ಬುಧವಾರ ಜಿ.ಪಂ. ವಿಶೇಷ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಕಾಂಗ್ರೆಸ್ ಸದಸ್ಯ ಕರೆಪ್ಪ ಮಾದರ, ಚೆಕ್ ಡ್ಯಾಂಗಳ ನಿರ್ಮಾಣ ಕಾರ್ಯದ ಸಂಬಂಧ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಆಡಳಿತ ಪಕ್ಷದ ಸದಸ್ಯ ಕಲ್ಲಪ್ಪ ಪುಡಕಲಕಟ್ಟಿ ಧ್ವನಿಗೂಡಿಸಿದರು.

ಆಕ್ಷೇಪ ವ್ಯಕ್ತಪಡಿಸಿದ ಹೆಬ್ಬಳ್ಳಿ ಜಿ.ಪಂ. ಕ್ಷೇತ್ರದ ಸದಸ್ಯ ಚನ್ನಬಸಪ್ಪ ಮಟ್ಟಿ, ಯಾವ ವಿಷಯದ ಬಗ್ಗೆ ಚರ್ಚೆ ನಡೆದಿದೆಯೋ ಅದನ್ನಷ್ಟೇ ಚರ್ಚೆ ಮಾಡಿ ಎಂದು ಹೇಳಿದರು.

ಉಪಾಧ್ಯಕ್ಷ ಶಿವಾನಂದ ಕರಿಗಾರ ಮಧ್ಯಪ್ರವೇಶಿಸಿ ವೇದಿಕೆಯಲ್ಲೇ ಎದ್ದು ನಿಂತು, ಚೆಕ್ ಡ್ಯಾಂ ವಿಷಯ ಪ್ರಸ್ತಾಪಿಸಿದರೆ ನಿಮಗೆ ಏನಾಗುತ್ತದೆ? ಸದಸ್ಯರು ಸರಿಯಾದ ಪ್ರಶ್ನೆಯನ್ನೇ ಎತ್ತಿದ್ದಾರೆ. ಬೇರೆ ಸದಸ್ಯರು ಮಾತನಾಡಿದರೆ ನಿಮಗೇನು ತೊಂದರೆ? ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದರು.

ಸಿಇಒ ಡಾ. ಬಿ.ಸಿ. ಸತೀಶ ಮಾತನಾಡಿ, ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಯಾವುದೇ ಸಮಸ್ಯೆ ಇಲ್ಲ. ಕ್ಷೇತ್ರವಾರು ಎಷ್ಟು ಮತ್ತು ಎಲ್ಲಿ ಕಾಮಗಾರಿ ತೆಗೆದುಕೊಳ್ಳಲಾಗುವುದು ಎಂಬ ವಿವರ ಕೊಟ್ಟರೆ ಶೀಘ್ರವೇ ಅನುಮೋದನೆ ಕೊಡಲಾಗುವುದು. ಟೆಂಡರ್ ಆದ ಮೇಲೆ ಬದಲಾಯಿಸಲಾಗುವುದಿಲ್ಲ ಎಂದು ಹೇಳಿದಾಗ ಸದಸ್ಯರು ಒಪ್ಪಿಗೆ ಸೂಚಿಸಿದರು.

18 ಲಕ್ಷ ಮಾನವ ದಿನ ಸೃಜನೆ ಗುರಿ

ಜಿ.ಪಂ. ಸಿಇಒ ಮಾತನಾಡಿ, ಕ್ರಿಯಾಯೋಜನೆ ಅನುಮೋದನೆಗೊಂಡು, ಕಾರ್ಯಾದೇಶ ವಿತರಿಸಿರುವ ಕಾಮಗಾರಿಗಳನ್ನು ತಕ್ಷಣದಿಂದಲೇ ಆರಂಭಿಸಬೇಕು. ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ 18 ಲಕ್ಷ ಮಾನವ ದಿನಗಳ ಉದ್ಯೋಗ ಸೃಜನೆಯ ಗುರಿ ನಿಗದಿಗೊಳಿಸಲಾಗಿದೆ. ಇದುವರೆಗೆ ಶೇ. 78ರಷ್ಟು ಪ್ರಗತಿಯಾಗಿದೆ. ಪ್ರಸಕ್ತ ಮಾಸಾಂತ್ಯಕ್ಕೆ ಶೇ. 90ಕ್ಕಿಂತ ಹೆಚ್ಚಾಗುವ ನಿರೀಕ್ಷೆ ಇದೆ ಎಂದರು.

ಕುಡಿಯುವ ನೀರು ಕಾಮಗಾರಿ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆಯಡಿ ಜಿಲ್ಲೆಗೆ ಹಂಚಿಕೆಯಾದ 17.44 ಕೋಟಿ ರೂ.ಗಳಲ್ಲಿ 74 ಮುಂದುವರಿದ ಕಾಮಗಾರಿಗಳು, 303 ಹೊಸ ಕಾಮಗಾರಿಗಳು, 1 ಬಹುಗ್ರಾಮ ಕುಡಿಯುವ ನೀರಿನ ಯೋಜನೆ, 7 ಬಹುಗ್ರಾಮ ಕುಡಿಯುವ ನೀರಿನ ಕಾರ್ಯಾಚರಣೆ, ನಿರ್ವಹಣೆ, 5 ಅಂತರ್ಜಲ ಅಭಿವೃದ್ಧಿ ಕಾಮಗಾರಿಗಳು, 56 ಕುಡಿಯುವ ನೀರಿನ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ವಿ. ಮುನವಳ್ಳಿ ಸಭೆಗೆ ಮಾಹಿತಿ ನೀಡಿದರು.

ಜಿಲ್ಲೆಯ ಜಾನುವಾರುಗಳು, ಮೇವಿನ ದಾಸ್ತಾನು, ಮೇವು ಬ್ಯಾಂಕ್ ಸ್ಥಾಪನೆ ಕುರಿತು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ವಿಶಾಲ್ ಅಡಳ್ಳಿಕರ್ ಮಾಹಿತಿ ನೀಡಿದರು. ಉಪ ಕಾರ್ಯದರ್ಶಿ ಎ.ಎಂ. ಪಾಟೀಲ ವೇದಿಕೆಯಲ್ಲಿದ್ದರು.

ತಡಬಡಾಯಿಸಿದ ಅಧ್ಯಕ್ಷರು

ಅವಿಶ್ವಾಸ ನಿರ್ಣಯ ಮಂಡನೆಯ ಮೂಲಕ ಅಧಿಕಾರದ ಗದ್ದುಗೆ ಏರಿದ ಕಾಂಗ್ರೆಸ್​ನ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಮಾತನಾಡಲು ತಡಬಡಾಯಿಸಿದರು. ನಂತರ ಜಿಲ್ಲಾದ್ಯಂತ ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಕ್ರಮ ಜರುಗಿಸಬೇಕು ಎಂದರು.