ಮತ್ತೆ ಗ್ರಾಮ ವಾಸ್ತವ್ಯ- ಜನತಾ ದರ್ಶನ

ಕುಮಟಾ: ಲೋಕಸಭೆ ಚುನಾವಣೆ ನಂತರ ಸರ್ಕಾರವನ್ನು ಜನರ ಮನೆ ಬಾಗಿಲಿಗೆ ತರುತ್ತೇನೆ. ನನ್ನ ಆರೋಗ್ಯ ಪರಿಸ್ಥಿತಿ ಏನೇ ಇರಲಿ, ಗ್ರಾಮವಾಸ್ತವ್ಯ ಹಾಗೂ ಜನತಾದರ್ಶನದ ಮೂಲಕ ಜನರ ಸಮಸ್ಯೆಗೆ ಸ್ಥಳದಲ್ಲೇ ಪರಿಹರಿಸುವ ಕಾರ್ಯ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

ಕುಮಟಾದಲ್ಲಿ ಗುರುವಾರ ಉತ್ತರ ಕನ್ನಡ ಲೋಕಸಭೆ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಪರ ಪ್ರಚಾರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಹಿಂದೆ ಮುಖ್ಯಮಂತ್ರಿ ಇದ್ದಾಗ ಜನತಾ ದರ್ಶನ ಮಾಡುತ್ತಿದ್ದೆ, ಉತ್ತರ ಕನ್ನಡ ಜಿಲ್ಲೆಯ ಎರಡು ಗ್ರಾಮಗಳಲ್ಲಿ ಉಳಿದುಕೊಂಡಿದ್ದೆ. ಕುಮಟಾದಲ್ಲಿ ತಣ್ಣೀರಕುಳಿ ಗ್ರಾಮದಲ್ಲಿ ಒಂದು ರಾತ್ರಿ ವಾಸ್ತವ್ಯ ಹೂಡಿದ್ದೆ. ಇಂದು ಮತ್ತೆ ಅಂಥ ಕಾರ್ಯಕ್ರಮಗಳಿಗೆ ಚಾಲನೆ ಕೊಡಬೇಕಿದೆ. ತಿಂಗಳಲ್ಲಿ 10 ದಿನಗಳ ಕಾಲ ಹಳ್ಳಿಯಲ್ಲಿ ಅಧಿಕಾರಿಗಳನ್ನು ಕರೆ ತಂದು ಸ್ಥಳದಲ್ಲೇ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಸುತ್ತೇನೆ ಎಂದರು.

ಧ್ವನಿ ಎತ್ತದ ಅನಂತ: ಜಿಲ್ಲೆಯ ಅತಿಕ್ರಮಣದಾರರ ಸಮಸ್ಯೆ ಬಗೆಹರಿಸಲು ಖುದ್ದು ಬರುವುದಾಗಿ ಮಾತುಕೊಟ್ಟಿದ್ದೆ. ಆದರೆ, ಕೇಂದ್ರ ಸರ್ಕಾರದಿಂದ ಕೆಲ ಕಾಯಿದೆ ತಿದ್ದುಪಡಿಯಾಗದ ಹೊರತು ಅತಿಕ್ರಮಣದಾರರ ಸಮಸ್ಯೆ ಬಗೆಹರಿಸುವುದು ಕಷ್ಟ. ಇಷ್ಟಕ್ಕೂ ಅನಂತಕುಮಾರ ಹೆಗಡೆ ಲೋಕಸಭೆಯಲ್ಲಿ ಒಮ್ಮೆಯಾದರೂ ಅತಿಕ್ರಮಣದಾರರ ಪರವಾಗಿ ಧ್ವನಿ ಎತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.

ಸೂರಜ ನಾಯ್ಕ ಮಾತನಾಡಿ, ನಾವು ಜೈಲಿಗೆ ಹೋದಾಗಲೂ ಬಾರದ ಅನಂತಕುಮಾರ ಹೆಗಡೆಯನ್ನು ಸೋಲಿಸುವುದೇ ನಮ್ಮ ಸಂಕಲ್ಪ ಎಂದರು.

ಅಭ್ಯರ್ಥಿ ಆನಂದ ಅಸ್ನೋಟಿಕರ್, ಮಾಜಿ ಶಾಸಕಿ ಶಾರದಾ ಶೆಟ್ಟಿ, ವಿ.ಪ. ಸದಸ್ಯ ಬಸವರಾಜ ಹೊರಟ್ಟಿ, ಎನ್.ಎಚ್. ಕೋನರಡ್ಡಿ, ವಿಜಯಾ ಪಟಗಾರ, ರತ್ನಾಕರ ನಾಯ್ಕ, ಇನಾಯತುಲ್ಲಾ ಶಾಬಂದ್ರಿ, ಭಾಸ್ಕರ ಪಟಗಾರ, ಜಿ.ಕೆ. ಪಟಗಾರ, ಆರ್.ಎಚ್. ನಾಯ್ಕ, ಶಶಿಭೂಷಣ ಹೆಗಡೆ, ಬಿ.ಆರ್. ನಾಯ್ಕ ಇತರರು ವೇದಿಕೆಯಲ್ಲಿದ್ದರು.

ಹಣ ಲೂಟಿ ಮಾಡಿರುವ ಹೆಗಡೆ: ಐಟಿ ದಾಳಿಯಲ್ಲಿ ಶಿರಸಿಯಲ್ಲಿ ಬಿಜೆಪಿ ಪದಾಧಿಕಾರಿಗಳ ಮನೆಯಲ್ಲಿ 82 ಲಕ್ಷ ರೂ. ವಶವಾಗಿದೆ. ಒಂದೊಂದು ಕವರ್​ನಲ್ಲಿ 5 ಸಾವಿರ ರೂ. ನಂತೆ ಪ್ಯಾಕೆಟ್ ಪತ್ತೆಯಾಗಿದೆ. ಅನಂತಕುಮಾರ ಹೆಗಡೆ ಕೇಂದ್ರದಲ್ಲಿ ಮಂತ್ರಿಯಾಗಿ ಹಣ ಲೂಟಿ ಮಾಡಿಕೊಂಡು ಬಂದಿದ್ದಾರೆ. ನಿಮಗೆ ಆ ಹಣ ಕೊಟ್ಟು ಖರೀದಿ ಮಾಡಲು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಹಿರಿಯ ನಾಗರಿಕರ ಪಿಂಚಣಿ ಒಂದು ಸಾವಿರಕ್ಕೆ ಏರಿಸಿದ್ದು ಮುಂದಿನ 3 ವರ್ಷಗಳಲ್ಲಿ 5000 ರೂ. ಮಾಡುತ್ತೇನೆ. ರಾಜ್ಯದಲ್ಲಿ 16 ಲಕ್ಷ ರೈತರ ಖಾತೆಗೆ ಸಾಲ ಮನ್ನಾ ಹಣ ಸಂದಾಯವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 46 ಸಾವಿರ ರೈತರ ಖಾತೆಗೆ 181 ಕೋಟಿ ರೂ. ಸಂದಾಯವಾಗಿದೆ. | ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

23ರ ನಂತರ ಎಲ್ಲಿದ್ದೀಯಪ್ಪಾ ಅನಂತ: ಅನಂತಕುಮಾರ ಹೆಗಡೆ ‘ಎಲ್ಲಿದ್ದೀಯಪ್ಪಾ ಆನಂದ’ ಎಂದು ಲೇವಡಿ ಮಾಡುತ್ತಿದ್ದಾರೆ, ಆದರೆ, ಏ. 23ರ ಚುನಾವಣೆೆಯ ಬಳಿಕ ‘ಎಲ್ಲಿದ್ದೀಯಪ್ಪಾ ಅನಂತಕುಮಾರ’ ಎಂದು ಕೇಳಬೇಕಾಗುತ್ತೆ. ಚುನಾವಣೆ ಮುಗಿದ ಬಳಿಕ ಇವರೆಲ್ಲ ಎಲ್ಲಿರ್ತಾರೆ ನೋಡಬೇಕಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿಕೊಂಡರು. ಚುನಾವಣಾ ಪ್ರಚಾರ ಸಭೆಗಾಗಿ ಹೆಲಿಕಾಪ್ಟರ್​ನಲ್ಲಿ ಬಂದಿಳಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಹಿಂದು ಧರ್ಮ ಉಳಿಸುವವನು ನಾನೊಬ್ಬನೇ ಎಂದು ಹೇಳುವ ವ್ಯಕ್ತಿ ಅನಂತಕುಮಾರ ಹೆಗಡೆ. ರಾಜ್ಯದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿಎಂ ಹೆಲಿಕಾಪ್ಟರ್ ಪರಿಶೀಲನೆ: ಪಾರದರ್ಶಕ ಚುನಾವಣೆ ಕೈಗೊಳ್ಳುವ ನಿಟ್ಟಿನಲ್ಲಿ ಚುನಾವಣೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಕುಮಟಾಕ್ಕೆ ಬಂದಿಳಿದ ಹೆಲಿಕಾಪ್ಟರ್​ನಲ್ಲಿದ್ದ ಬ್ಯಾಗ್​ಗಳನ್ನು ತಪಾಸಣೆಗೆ ಒಳಪಡಿಸಿದರು. ನಂತರ ದಾಂಡೇಲಿಯಲ್ಲೂ ಸಿಎಂ ಪ್ರಯಾಣ ಬೆಳೆಸಿದ್ದ ಹೆಲಿಕಾಪ್ಟರ್ ಪರಿಶೀಲನೆ ನಡೆಸಿದರು.