ಮತ್ತೆ ಕಾಡಾನೆ ದಾಳಿ, ಒಂದು ಎಕರೆ ಬೆಳೆ ನಾಶ

ಚನ್ನಪಟ್ಟಣ: ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆ ದಾಳಿ ಮುಂದುವರೆದಿದೆ. ಸತತ ಒಂದು ವಾರದಿಂದ ಆನೆಗಳ ಹಿಂಡು ಕಬ್ಬಾಳು ಅರಣ್ಯ ಪ್ರದೇಶದ ಅಕ್ಕಪಕ್ಕದ ಗ್ರಾಮಗಳ ರೈತರ ಜಮೀನಿನ ಮೇಲೆ ನಿರಂತರ ದಾಳಿ ಮಾಡುತ್ತಿವೆ.

ಶುಕ್ರವಾರ ರಾತ್ರಿ ದಾಂಧಲೆ ಮುಂದುವರಿಸಿರುವ ಗಜಪಡೆ ಜೆ.ಬ್ಯಾಡರಹಳ್ಳಿ ಗ್ರಾಮದ ರೈತರ ಜಮೀನಿಗೆ ನುಗ್ಗಿ ಫಸಲಿಗೆ ಬಂದಿದ್ದ ರಾಗಿ, ಬಾಳೆ, ತೆಂಗು ಸೇರಿ ಹಲವು ಬೆಳೆಗಳನ್ನು ನಾಶಮಾಡಿವೆ.

ಗ್ರಾಮದ ರೈತ ಬಸವಯ್ಯನವರ 1 ಎಕರೆ ಬಾಳೆ, ಅರ್ಧ ಎಕರೆ ರಾಗಿ, ಸಿದ್ದಯ್ಯ ಎಂಬುವರ 8 ತೆಂಗಿನ ಮರ ಹಾಗೂ ರಾಗಿ ಬೆಳೆಯನ್ನು ಸಂಪೂರ್ಣ ನಾಶಮಾಡಿದೆ. ಇದಿಷ್ಟೇ ಅಲ್ಲದೆ ಆನೆಗಳು ಸಾಗುವ ಹಾದಿಯಲ್ಲಿ ಸಿಕ್ಕ ಮರಗಳನ್ನು ಮುರಿದು ಹಾಕಿವೆ.

ಒಂದು ವಾರದ ಹಿಂದೆ ತಾಲೂಕಿನ ಕೋಡಂಬಹಳ್ಳಿ, ಶ್ಯಾನುಭೋಗನಹಳ್ಳಿ ಗ್ರಾಮಗಳಲ್ಲಿ ಕಾಣಿಸಿಕೊಂಡಿದ್ದ ಆನೆಗಳ ಹಿಂಡು, ನಿರಂತರವಾಗಿ ರೈತರ ಜಮೀನಿನ ಮೇಲೆ ದಾಳಿ ನಡೆಸುತ್ತಲೇ ಇವೆ. ಕಾಡಾನೆ ದಾಳಿಯಿಂದಾಗಿ ಈ ಭಾಗದ ರೈತರು ಕಂಗಾಲಾಗಿದ್ದಾರೆ.

ಕಬ್ಬಾಳು ಅರಣ್ಯದಲ್ಲಿ ಆನೆಗಳು: ಒಂಭತ್ತು ಕಾಡಾನೆಗಳ ಹಿಂಡು ಸದ್ಯ ಕಬ್ಬಾಳು ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿರುವುದಾಗಿ ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಆನೆಗಳನ್ನು ಮತ್ತೆ ಕಾಡಿಗೆ ಅಟ್ಟಲು ಅಧಿಕಾರಿಗಳು ಕಾರ್ಯತಂತ್ರ ರೂಪಿಸಿದ್ದು, ಚನ್ನಪಟ್ಟಣ, ಸಾತನೂರು ಮತ್ತು ಕಾವೇರಿ ವನ್ಯಜೀವಿ ವಲಯದ ಸಿಬ್ಬಂದಿ ಜತೆಗೂಡಿ ಆನೆಗಳನ್ನು ಸುರಕ್ಷಿತವಾಗಿ ಮತ್ತೆ ಕಾಡಿಗೆ ಕಳುಹಿಸುವ ಕಾರ್ಯಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಕಾಡಾನೆ ದಾಳಿಯಿಂದ ಈ ಭಾಗದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಷ್ಟ ಪಟ್ಟು ಬೆಳೆದ ಬೆಳೆಗಳು ಇನ್ನೇನು ಕಟಾವಿಗೆ ಬಂತು ಎನ್ನುವಾಗ ಕಾಡಾನೆಗಳ ದಾಳಿಯಿಂದ ನಾಶವಾಗುತ್ತಿವೆ. ಇದೇ ರೀತಿ ಕಾಡಾನೆ ಹಾವಳಿ ಮುಂದುವರಿದರೆ ಈ ಭಾಗದ ರೈತರು ಬೇಸಾಯದಿಂದ ದೂರ ಉಳಿಯುವ ಪರಿಸ್ಥಿತಿ ನಿರ್ವಣಗೊಳ್ಳುತ್ತದೆ.

| ನಾಗರಾಜು, ಕೋಡಂಬಹಳ್ಳಿ ಗ್ರಾಮಸ್ಥ

 

ಕಾಡಾನೆಗಳು ಕಬ್ಬಾಳು ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿವೆ. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಹೋಗುವ ಮೂಲಕ ದಾರಿ ತಪ್ಪಿಸುತ್ತಿವೆ. ಮತ್ತೆ ಕಾವೇರಿ ವನ್ಯಜೀವಿ ವಲಯಕ್ಕೆ ಕಾಡಾನೆಗಳನ್ನು ಸುರಕ್ಷಿತವಾಗಿ ಕಳುಹಿಸಲು ಚನ್ನಪಟ್ಟಣ ವಲಯ, ಸಾತನೂರು ವಲಯ ಮತ್ತು ಕಾವೇರಿ ವನ್ಯಜೀವಿ ವಲಯದ ಸಿಬ್ಬಂದಿ ಜಂಟಿಯಾಗಿ ಆನೆಗಳನ್ನು ಹಿಂದಕ್ಕೆ ಕಳುಹಿಸಲು ಯೋಚಿಸುತ್ತಿದ್ದೇವೆ.

| ಮಹ್ಮದ್ ಮನ್ಸೂರ್, ಆರ್​ಎಫ್​ಒ, ಚನ್ನಪಟ್ಟಣ ವಿಭಾಗ

ಆನೆ ದಾಳಿಗೆ ಕಡಿವಾಣ ಹಾಕಿ: ತಾಲೂಕು ಅರಣ್ಯ ಇಲಾಖೆ ನಿಷ್ಕ್ರಿಯಗೊಂಡಿದ್ದು, ಕಾಡಾನೆಗಳ ದಾಳಿಗೆ ಕಡಿವಾಣ ಹಾಕಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸದಿದ್ದಲ್ಲಿ ಅರಣ್ಯ ಇಲಾಖೆಗೆ ಬೀಗ ಜಡಿದು ಉಗ್ರ ಹೋರಾಟ ನಡೆಸುವುದಾಗಿ ರಾಜ್ಯ ರೈತಸಂಘ ಎಚ್ಚರಿಸಿದೆ.

ನಗರದ ಜೆ.ಸಿ. ರಸ್ತೆಯಲ್ಲಿರುವ ಸಂಘದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಎಂ.ರಾಮು, ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ನಿರಂತರವಾಗಿರುವ ಕಾಡಾನೆ ದಾಳಿಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ರೈತ ಕುಟುಂಬಗಳು ಸಾಲದ ಶೂಲಕ್ಕೆ ಸಿಲುಕಿ ಸಂಕಷ್ಟಕ್ಕೊಳಗಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ದೇಶದ ಬೆನ್ನೆಲುಬು ಎನ್ನುವ ರೈತ ಪ್ರತಿ ಹೆಜ್ಜೆಗೂ ನೋವು ಅನುಭವಿಸುತ್ತಿದ್ದಾನೆ. ಪ್ರಕೃತಿ ವಿಕೋಪ, ಬೆಲೆ ಕುಸಿತ, ಕಾಡುಪ್ರಾಣಿಗಳ ಹಾವಳಿ ಹೀಗೆ ಹಲವು ಸವಾಲಗಳನ್ನು ಎದುರಿಸುವಂತಾಗಿದೆ. ಜತೆಗೆ ಸಾಲದ ಹೊರೆಯನ್ನು ಹೊತ್ತು ಬದುಕುವುದಾದರೂ ಹೇಗೆ ಎಂಬುದನ್ನು ಸರ್ಕಾರ, ಅರಣ್ಯ ಇಲಾಖೆ ಅರಿತುಕೊಳ್ಳಬೇಕು ಎಂದು ಆಗ್ರಹಿಸಿದರು.

ಕಾಡು ಉಳಿಸಿದ್ದರೆ ಇಲ್ಲಿಗ್ಯಾಕೆ ಬರುತ್ತಿದ್ದವು?: ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಮಲ್ಲಯ್ಯ ಮಾತನಾಡಿ, ಕಾಡನ್ನು ರಕ್ಷಿಸುವಲ್ಲಿ ಸರ್ಕಾರ ಮತ್ತು ಅರಣ್ಯ ಇಲಾಖೆ ವಿಫಲ ವಾಗಿರುವುದೇ ಕಾಡುಪ್ರಾಣಿಗಳು ನಾಡಿನತ್ತ ಬರಲು ಕಾರಣವಾಗಿದೆ. ಅರಣ್ಯ ಇಲಾಖೆ ಪರಿಹಾರದ ನೆಪದಲ್ಲಿ ರೈತರ ಸ್ವಾಭಿಮಾನವನ್ನು ಕರೆಳಿಸುತ್ತಿದೆ. ಕಾಡಾನೆಗಳ ದಾಳಿಯಿಂದ ಕೇವಲ ಬೆಳೆ ಹಾನಿಯಲ್ಲದೆ ಸಾವು-ನೋವುಗಳು ಸಂಭವಿಸಿದ್ದು ಇದಕ್ಕೆಲ್ಲ ಅರಣ್ಯ ಇಲಾಖೆ ವೈಫಲ್ಯವೇ ಕಾರಣ ಎಂದು ಆರೋಪಿಸಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ರಾಮೇಗೌಡ, ಕಾರ್ಯಾಧ್ಯಕ್ಷ ಗುರುಲಿಂಗಯ್ಯ, ಜಿಲ್ಲಾ ಉಪಾಧ್ಯಕ್ಷ ತಿಮ್ಮೇಗೌಡ ಇನ್ನೂ ಮುಂತಾದವರು ಉಪಸ್ಥಿತರಿದ್ದರು.