ಮತಯಾಚನೆ ಆರಂಭಿಸಿದ ಕಮಲ

ಚಿಕ್ಕಬಳ್ಳಾಪುರ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಬಿಎಸ್​ಪಿ ಕಾರ್ಯಕರ್ತರು ಜಿಲ್ಲೆಯಲ್ಲಿ ಮನೆ ಮನೆಗೂ ಭೇಟಿ ನೀಡಿ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ಆರಂಭಿಸಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳಯ ಮಾತ್ರ ತಟಸ್ಥ ಧೋರಣೆಯಲ್ಲಿದೆ.

ಕಮಲ ಪಕ್ಷದ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಮತ್ತು ಬಹುಜನ ಸಮಾಜವಾದಿ ಪಾರ್ಟಿ ಅಭ್ಯರ್ಥಿ ಸಿ.ಎಸ್.ದ್ವಾರಕನಾಥ್ ಕ್ಷೇತ್ರದ ವಿವಿಧೆಡೆ ಬೆಂಬಲಿಗರೊಂದಿಗೆ ಪ್ರವಾಸ ಕೈಗೊಂಡು ಸಭೆ ನಡೆಸುತ್ತಿದ್ದಾರೆ. ಕಾರ್ಯಕರ್ತರು ಅಭಿವೃದ್ಧಿ ಸಾಧನೆಯ ಕರಪತ್ರಗಳನ್ನು ಹಿಡಿದುಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಕ್ಷೇತ್ರವನ್ನು ಜೆಡಿಎಸ್ ಕಾಂಗ್ರೆಸ್​ಗೆ ಬಿಟ್ಟು ಕೊಟ್ಟಿದೆ. ಇದರ ನಡುವೆ ಮತ್ತೊಮ್ಮೆ ಕಣಕ್ಕಿಳಿಯಲು ಬಯಸಿರುವ ಸಂಸದ ಎಂ.ವೀರಪ್ಪ ಮೊಯ್ಲಿ ಇನ್ನೂ ರಾಜಧಾನಿಯಲ್ಲಿದ್ದಾರೆ. ಇದುವರೆಗೂ ಜಿಲ್ಲೆಯ ಶಾಸಕರು, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷದ ಮುಖಂಡರ ಸಭೆ ನಡೆಸಿ ರ್ಚಚಿಸಿಲ್ಲ. ಚುನಾವಣೆ ಪ್ರಚಾರದ ಯಾವುದೇ ರೂಪುರೇಷೆ ನಿರ್ಧರಿಸಿಲ್ಲ.

ನನ್ನ ಪರಿವಾರ, ಬಿಜೆಪಿ ಪರಿವಾರ: ನನ್ನ ಪರಿವಾರ-ಬಿಜೆಪಿ ಪರಿವಾರ, ಕೇಂದ್ರ ಸರ್ಕಾರದ ಸಾಧನೆಯ ಮಾಹಿತಿಯನ್ನೊಳಗೊಂಡ ಕರಪತ್ರಗಳನ್ನು ಮನೆ ಮನೆಗೂ ವಿತರಿಸುವ ಮೂಲಕ ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರಚಾರ ನಡೆಸಿದರು. ಜೈ ಭೀಮ್ಗರ, ಸಾಧುಮಠ ರಸ್ತೆ, ಕೃಷ್ಣ ಟಾಕೀಸ್, ನಗರ್ತರಪೇಟೆ, ಈಶ್ವರ ದೇವಸ್ಥಾನ ಸೇರಿ ಹಲವೆಡೆ ಮತಯಾಚಿಸಿದರು.

ಮುಖಂಡ ರಘು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಉತ್ತಮ ಆಡಳಿತದ ಮೂಲಕ ದೇಶವನ್ನು ಪ್ರಗತಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ. ಸುಕನ್ಯಾ, ಮುದ್ರಾ, ಉಜ್ವಲ ಸೇರಿ ಅನೇಕ ಯೋಜನೆಗಳಿಂದ ದೇಶದ ಜನರಿಗೆ ತುಂಬಾ ಅನುಕೂಲವಾಗಿದೆ ಎಂದರು.

ದೇಶದ ಅಭಿವೃದ್ಧಿಗೆ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಸುಸ್ಥಿರ ಸರ್ಕಾರ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಮತದಾರರು ಬಿಜೆಪಿಗೆ ಬೆಂಬಲಿಸಬೇಕೆಂದು ಕೋರಿದರು. ಮುಖಂಡರಾದ ಮೋಹನ್ ಮುರಳಿ, ಸಿ.ಬಿ.ಕಿರಣ್​ಕುಮಾರ್, ಬಾಲು, ರಾಜೇಶ್, ಅಚ್ಚಪ್ಪ, ಮಧು, ಚಕ್ರಧರ್, ಬಾಹುಬಲಿ, ವಿಶ್ವನಾಥ್ ಮತ್ತಿತರರಿದ್ದರು.