ಸಿನಿಮಾ

ಮತಯಂತ್ರದ ಕಂಟ್ರೋಲ್ ಯೂನಿಟ್ ಒಡೆದ ಮತದಾರ

ಮೈಸೂರು: ಮತದಾನಕ್ಕೆ ಬಂದ ವ್ಯಕ್ತಿ ಮತಯಂತ್ರದ ಕಂಟ್ರೋಲ್ ಯೂನಿಟ್ ಅನ್ನೇ ಒಡೆದು ಹಾಕಿದ್ದಾನೆ.
ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಹೂಟಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತಯಂತ್ರದ ಯೂನಿಟ್ ಒಡೆದಿದ್ದರಿಂದ ಗೊಂದಲದ ವಾತಾವರಣ ನಿಮಾರ್ಣವಾಗಿತ್ತಲ್ಲದೆ, ಕೆಲಕಾಲ ಮತದಾನ ಸ್ಥಗಿತಗೊಂಡಿತ್ತು.
ಹೂಟಗಳ್ಳಿ ನಿವಾಸಿ ಶಿವಮೂರ್ತಿ ಎಂಬಾತ ಸಂಜೆ 4.30ರಲ್ಲಿ ಮತದಾನ ಮಾಡಲು ಬಂದಿದ್ದಾನೆ. ಗುರುತಿನಚೀಟಿ ನೀಡಿ ಮತದಾನಕ್ಕೆ ತೆರಳಿದ್ದಾಗ ಏಕಾಏಕಿ ಮತಯಂತ್ರದ ಕಂಟ್ರೋಲ್ ಯೂನಿಟ್ ಎತ್ತಿ ನೆಲಕ್ಕೆ ಬಡಿದಿದ್ದಾನೆ. ಇದರಿಂದ ಕಂಟ್ರೋಲ್ ಯೂನಿಟ್ ಒಡೆದುಹೋಗಿದೆ. ಚುನಾವಣೆಗೆ ನಿಯೋಜನೆಗೊಂಡಿದ್ದ ಸಿಬ್ಬಂದಿ ಮತ್ತು ಪೊಲೀಸರು ತಕ್ಷಣವೇ ಶಿವಮೂರ್ತಿಯನ್ನು ವಶಕ್ಕೆ ಪಡೆದು, ವಿಜಯನಗರ ಠಾಣೆ ಪೊಲೀಸರಿಗೆ ಒಪ್ಪಿಸಿದರು.
ಮತಯಂತ್ರ ಒಡೆದಿದ್ದರಿಂದ ಕೆಲಕಾಲ ಮತದಾನ ಸ್ಥಗಿತಗೊಂಡಿತ್ತು. ಮತಗಟ್ಟೆಯಲ್ಲಿ ಒಟ್ಟು 912 ಮತದಾರರು ಇದ್ದು, ಆ ವೇಳೆಗೆ 553 ಮಂದಿಯ ಮತದಾನ ನಡೆದಿತ್ತು. ಬಳಿಕ ಹೊಸ ಕಂಟ್ರೋಲ್ ಯೂನಿಟ್ ಅಳವಡಿಸಿ ಮತದಾನ ಮುಂದುವರಿಸಲಾಯಿತು. ಹೊಸ ಯಂತ್ರದಲ್ಲಿ 46 ಮತ ಸೇರಿದಂತೆ ಮತಗಟ್ಟೆಯಲ್ಲಿ ಒಟ್ಟು 599 ಮತ ಚಲಾವಣೆಗೊಂಡವು.
ಮಾನಸಿಕ ಅಸ್ವಸ್ಥ:
ಗ್ರಾಮದ ಮಾದೇಗೌಡ ಅವರ ಮಗನಾದ ಶಿವಮೂರ್ತಿ(47) ಅವಿವಾಹಿತನಾಗಿದ್ದು, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ. ಈ ಹಿಂದೆಯೂ ಸಾರ್ವಜನಿಕರು ಹಾಗೂ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದು, ತಿಳಿಹೇಳಲಾಗಿತ್ತು. ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಇದುವರೆಗೆ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Latest Posts

ಲೈಫ್‌ಸ್ಟೈಲ್