ಮತಬೇಟೆ ಅಬ್ಬರಕ್ಕೆ ಇಂದು ಕೊನೆ

ಕುಂದಗೋಳ: ಕುಂದಗೋಳ ಕ್ಷೇತ್ರದ ಮಿನಿ ಮಹಾ ಸಮರದ ಬಹಿರಂಗ ಪ್ರಚಾರ ಶುಕ್ರವಾರ ಕೊನೆಗೊಳ್ಳಲಿದ್ದು, ಎಲ್ಲೆಲ್ಲೂ ಮತಬೇಟೆ ನಡೆದಿದೆ.

ಕಾಂಗ್ರೆಸ್ ಪರವಾಗಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮುನಿಯಪ್ಪ, ಉಮಾಶ್ರೀ, ಜಯಮಾಲಾ, ಎಂ.ಟಿ.ಬಿ. ನಾಗರಾಜ, ಜಮೀರ್, ಯು.ಟಿ. ಖಾದರ್ ಸೇರಿ ಹಲವು ನಾಯಕರು ಗುರುವಾರ ಮತ ಯಾಚಿಸಿದರು.

ಬಿಜೆಪಿ ಪರವಾಗಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಶ್ರೀರಾಮುಲು, ಪ್ರಲ್ಹಾದ ಜೋಶಿ, ಸಿ.ಟಿ. ರವಿ, ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಶೋಭಾ ಕರಂದ್ಲಾಜೆ, ಶ್ರುತಿ, ಬಿ.ವೈ. ವಿಜಯೇಂದ್ರ ಸೇರಿ ಹಲವರು ಮತ ಯಾಚಿಸಿದರು. ಬಹಿರಂಗ ಸಭೆ, ರೊಡ್ ಶೋ, ಚಿಕ್ಕ ಚಿಕ್ಕ ಸಭೆಗಳು, ಮನೆ ಮನೆ ಭೇಟಿ ಹೀಗೆ ನಾನಾ ವಿಧಗಳಲ್ಲಿ ಜನರನ್ನು ಸಮೀಪಿಸಿದ್ದರಿಂದ ಕುಂದಗೋಳ ಕ್ಷೇತ್ರದಲ್ಲಿ ಯಾವ ಊರಲ್ಲಿ ನೋಡಿದರೂ ರಾಜಕಾರಣಿಗಳೇ ಕಂಡು ಬಂದರು. 10-12 ದಿನ ಇಲ್ಲಿಯೇ ಠಿಕಾಣಿ ಹೂಡಿರುವ ಪ್ರಮುಖರು ಶುಕ್ರವಾರ ಇನ್ನೂ ಹೆಚ್ಚಿನ ಅಬ್ಬರದ ಪ್ರಚಾರ ಸಭೆ ನಡೆಸಲಿದ್ದಾರೆ.

ಅರ್ಧ ಸರ್ಕಾರವೇ ಇಲ್ಲಿ!

ಮೈತ್ರಿ ಪಕ್ಷದ ಪರವಾಗಿ ಅರ್ಧ ಸಚಿವ ಸಂಪುಟವೇ ಹುಬ್ಬಳ್ಳಿಯಲ್ಲಿ ಮೊಕ್ಕಾಂ ಹೂಡಿದ್ದರೆ, ಬಿಜೆಪಿಯವರು ತಾವೇನು ಕಡಿಮೆ ಎಂದು ದೊಡ್ಡ ತಂಡವನ್ನೇ ಕರೆಸಿದ್ದಾರೆ. ಇಷ್ಟೊಂದು ಸಂಖ್ಯೆಯ ಸಚಿವರು, ರಾಜಕಾರಣಿಗಳು ವಾರಗಟ್ಟಲೇ ಮನೆ ಮಠದ ಚಿಂತೆ ಬಿಟ್ಟು ಹುಬ್ಬಳ್ಳಿಯಲ್ಲಿ ಉಳಿದುಕೊಂಡಿದ್ದು ಇದೇ ಪ್ರಥಮ ಎನ್ನಬಹುದು.

ಭದ್ರತೆ, ಮತ ಎಣಿಕೆ ತಯಾರಿ ಪರಿಶೀಲನೆ

ಧಾರವಾಡ: ಸಾರ್ವತ್ರಿಕ ಲೋಕಸಭಾ ಚುನಾವಣೆ ಹಾಗೂ ಕುಂದಗೋಳ ವಿಧಾನಸಭಾ ಉಪ ಚುನಾವಣೆಯ ಮತ ಎಣಿಕೆ ಮೇ 23ರಂದು ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ. ಎಣಿಕೆ ಕೇಂದ್ರಗಳಿಗೆ ಮೊಬೈಲ್ ತರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ದೀಪಾ ಚೋಳನ್ ಹೇಳಿದರು.

ತಮ್ಮ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಎಣಿಕೆ ಕಾರ್ಯದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಣಿಕೆ ಕೇಂದ್ರಕ್ಕೆ 3 ಹಂತಗಳ ಭದ್ರತೆ, ಸಾರ್ವಜನಿಕರಿಗೆ ಧ್ವನಿವರ್ಧಕ ವ್ಯವಸ್ಥೆ ಕಲ್ಪಿಸಲಾಗುವುದು. ಎಣಿಕೆ ಏಜೆಂಟರು ಮೊಬೈಲ್ ತರುವುದನ್ನು ನಿಷೇಧಿಸಲಾಗಿದೆ. ಮಾಧ್ಯಮ ಪ್ರತಿನಿಧಿಗಳು ಮಾಧ್ಯಮ ಕೇಂದ್ರದಲ್ಲಿ ಮಾತ್ರ ಮೊಬೈಲ್ ಬಳಸಬೇಕು. ಎಣಿಕೆ ಕೌಂಟರ್​ಗಳಿಗೆ ತೆರಳುವುದನ್ನು ನಿಷೇಧಿಸಲಾಗಿದೆ ಎಂದರು.

ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ಮಾತನಾಡಿ, ಬಿಗಿ ಭದ್ರತೆಗೆ ಗುಣಮಟ್ಟದ ಬ್ಯಾರಿಕೇಡ್​ಗಳನ್ನು ಹಾಕಲಾಗುವುದು. ಎಣಿಕೆ ಏಜೆಂಟರಿಗೆ ನಿಗದಿಪಡಿಸಿದ ಕೌಂಟರ್​ಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ, ಉಪ ಪೊಲೀಸ್ ಆಯುಕ್ತ ನಾಗೇಶ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ವಿರೂಪಾಕ್ಷ ಯಮನಕನಮರಡಿ, ಎನ್​ಐಸಿ ಜಿಲ್ಲಾ ಅಧಿಕಾರಿ ಮೀನಾಕುಮಾರಿ, ಇತರರಿದ್ದರು.

ಸಭೆಯ ನಂತರ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಕೃಷಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ಮತ ಎಣಿಕೆ ಕೇಂದ್ರ, ಪ್ರವೇಶ, ವಾಹನ ನಿಲುಗಡೆ ಸ್ಥಳಗಳನ್ನು ಪರಿಶೀಲಿಸಿದರು.

ರೋಡ್ ಶೋ ರದ್ದು

ಕುಂದಗೋಳ ಪಟ್ಟಣದಲ್ಲಿ ಮೇ 17ರಂದು ನಿಗದಿಯಾಗಿದ್ದ ಕಾಂಗ್ರೆಸ್ ಮತ್ತು ಬಿಜೆಪಿ ರೋಡ್ ಶೋಗಳು ಚುನಾವಣಾ ಆಯೋಗದ ಪರವಾನಗಿ ಸಿಗದಿರುವುದರಿಂದ ರದ್ದಾಗಿವೆ. ಉಪಚುನಾವಣೆ ಬಹಿರಂಗ ಪ್ರಚಾರ ಮೇ 17ರ ಸಂಜೆ ಮುಕ್ತಾಯ ವಾಗಲಿದೆ. ಕೊನೆಯ ದಿನ ರೋಡ್ ಶೋ ನಡೆಸುವ ಮೂಲಕ ಸಾರ್ವಜನಿಕರ ಎದುರು ಬಲ ಪ್ರದರ್ಶನಕ್ಕೆ ಎರಡು ಪಕ್ಷಗಳು ತಯಾರಿ ನಡೆಸಿದ್ದವು. ಆದರೆ, ಪೊಲೀಸರ ವರದಿ ಆಧರಿಸಿ ಎರಡೂ ಪಕ್ಷಕ್ಕೆ ಚುನಾವಣಾ ಆಯೋಗ ಅನುಮತಿ ನಿರಾಕರಿಸಿದೆ.

ಆಯೋಗಕ್ಕೆ ದೂರು

ಹುಬ್ಬಳ್ಳಿ ತಾಲೂಕಿನ ವರೂರಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುವಾಗ ಕೆಪಿಸಿಸಿ ಬ್ರೋಕರ್, ರಾಹುಲ್ ಗಾಂಧಿ ಜೋಕರ್ ಎಂಬ ಶಬ್ಧ ಪ್ರಯೋಗಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕೆಪಿಸಿಸಿ ಕಾರ್ಯದರ್ಶಿ ವಿ.ವೈ. ಘೊರ್ಪಡೆ, ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.