ಮತದಾರ ಕೈ ಕೊಟ್ಟರೂ ಚುನಾವಣೆ ಬಿಡದ ಭೂಪ!

ಎನ್.ವೆಂಕಟೇಶ್ ಚಿಕ್ಕಬಳ್ಳಾಪುರ

ಈತ ನಿಲ್ಲದ ಚುನಾವಣೆಗಳೇ ಇಲ್ಲ, ಪ್ರತಿಸ್ಪರ್ಧಿಗಳಿಗೆ ಸರಿದೂಗುವ ಆರ್ಥಿಕ ಸಬಲ ವ್ಯಕ್ತಿಯೂ ಅಲ್ಲ, ಯಾವುದೇ ಪಕ್ಷದ ಬೆಂಬಲ ಹೊಂದಿಲ್ಲ. ಆದರೂ ಸೋಲೋ, ಗೆಲುವೋ ಪ್ರತಿ ಚುನಾವಣೆ ಅಖಾಡದಲ್ಲಿ ಮಾತ್ರ ಖಚಿತವಾಗಿ ಇರುತ್ತಾನೆ. ಚುನಾವಣೆ ಸ್ಪರ್ಧಿ ಪ್ರೇಮಿಯ ಹೆಸರು ಜಿ.ಎನ್.ರವಿ. ಗೌರಿಬಿದನೂರು ತಾಲೂಕು ಗೊಟಕನಾಪುರದ ನಿವಾಸಿ. ವೃತ್ತಿ ಕೃಷಿ. ಪ್ರವೃತ್ತಿ ಸಮಾಜಸೇವೆ. ವಿದ್ಯಾರ್ಹತೆ ಐಟಿಐ. ಈತ ತಾಪಂ, ಜಿಪಂ, ಪುರಸಭೆ, ಎಪಿಎಂಸಿ, ಎಂಎಲ್​ಎ ಸೇರಿ ಪ್ರತಿ ಚುನಾವಣೆಯಲ್ಲೂ ಸ್ಪರ್ಧಿಸಿಕೊಂಡು ಬರುತ್ತಿದ್ದಾನೆ. ಒಮ್ಮೆಯೂ ಗೆದ್ದಿಲ್ಲ. ಆದರೆ, ಚುನಾವಣೆ ವೇಳೆ ಸ್ಪರ್ಧೆ, ಪ್ರಚಾರ ವಿಚಾರವಾಗಿ ಸದ್ದು ಮಾಡುತ್ತಿರುತ್ತಾನೆ. ಇದರ ನಡುವೆ ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸೋಮವಾರ ಚುನಾವಣಾಧಿಕಾರಿ ಪಿ.ಅನಿರುಧ್ ಶ್ರವಣ್​ಗೆ ಉಮೇದುವಾರಿಕೆ ಸಲ್ಲಿಸಿದ್ದಾನೆ.

ರವಿ ಮೊದಲು ಗೌರಿಬಿದನೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಮೂರು ಬಾರಿ ಜಿಪಂಗೆ ಸ್ಪರ್ಧಿಸಿ ಸೋತಿದ್ದು, ಜೆಡಿಎಸ್​ನಿಂದ ಒಂದು ಹಾಗೂ ಪಕ್ಷೇತರರಾಗಿ ಎರಡು ಬಾರಿ ಜಿಪಂ ಚುನಾವಣೆಗೆ ಸ್ಪರ್ಧಿಸಿದ್ದಾನೆ. ಪುರಸಭೆ ಚುನಾವಣೆಗೆ ಎರಡು ಬಾರಿ, ತಾಪಂಗೆ ಒಂದು ಬಾರಿ, ಎಪಿಎಂಸಿ ಚುನಾವಣೆಗೆ ಎರಡು ಬಾರಿ ಸ್ಪರ್ಧಿಸಿ ಸೋಲುಂಡಿದ್ದಾನೆ. ಮತ್ತೊಂದೆಡೆ ಪತ್ನಿ ಜಿ.ಎನ್.ಮಂಜುಳಾ ಅವರನ್ನೂ ಎರಡು ಬಾರಿ ಚುನಾವಣೆ ಕಣಕ್ಕಿಳಿಸಿದ್ದು ವಿಶೇಷ.

ಮೂರಂಕಿಯ ಮತ:  ಕಳೆದ ಮೂರು ವಿಧಾನಸಭೆ ಚುನಾವಣೆಯಲ್ಲೂ ಗೌರಿಬಿದನೂರು ವಿಧಾನಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, 2008ರ ಚುನಾವಣೆಯಲ್ಲಿ 699 ಮತ, 2013ರಲ್ಲಿ 424 ಮತ ಹಾಗೂ 2018ರ ಚುನಾವಣೆಯಲ್ಲಿ 234 ಮತಗಳು ಸಿಕ್ಕಿವೆ.

ಕ್ರಿಮಿನಲ್ ಹಿನ್ನೆಲೆಯೂ ಇಲ್ಲ:  ಪ್ರತಿ ಚುನಾವಣೆಯಲ್ಲೂ ಸ್ಪರ್ಧಿಸುವ ಉತ್ಸಾಹಿ ಜಿ.ಎನ್.ರವಿ ಆದಾಯ ತೆರಿಗೆ ಪಾವತಿದಾರನಲ್ಲ. ಕ್ರಿಮಿನಲ್ ಹಿನ್ನೆಲೆಯನ್ನೂ ಹೊಂದಿಲ್ಲ. ಆರು ಲಕ್ಷ ಸ್ತಿರಾಸ್ತಿ ಹಾಗೂ 1.05 ಲಕ್ಷ ರೂ. ಚರಾಸ್ತಿ ಇದೆ. ಕೈಯಲ್ಲಿ 30 ಸಾವಿರ ನಗದು, ಗೌರಿಬಿದನೂರು ಸ್ಟೇಟ್ ಬ್ಯಾಂಕ್ ಉಳಿತಾಯ ಖಾತೆಯಲ್ಲಿ 90ರೂ. ನಗದು, ಕೆನರಾ ಬ್ಯಾಂಕಿನಲ್ಲಿ 50ಸಾವಿರ ರೂ. ಬೆಳೆ ಸಾಲ ಬಾಕಿಯಿದೆ ಎಂದು ಚುನಾವಣಾಧಿಕಾರಿಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ.

ಚುನಾವಣೆಗೆ ಸ್ಪರ್ಧಿಸಿದ ಪ್ರತಿ ಬಾರಿಯೂ ಮೂರಂಕಿಯ ಮತಗಳು ಬೀಳುತ್ತಿರುವುದು ಖುಷಿಯ ವಿಚಾರ. ಈಗ ಸೋತರೂ ಭವಿಷ್ಯದಲ್ಲಿ ಮತದಾರರು ಗೆಲ್ಲಿಸುವ ವಿಶ್ವಾಸವಿದೆ.

| ಜಿ.ಎನ್.ರವಿ, ಪಕ್ಷೇತರ ಅಭ್ಯರ್ಥಿ