ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ

ಮುಂಡರಗಿ: ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಏ.3ರ ವರೆಗೆ ಅವಕಾಶವಿದ್ದು, ಯುವ ಮತದಾರರು ಮತ್ತು ಮತದಾರ ಪಟ್ಟಿಗೆ ಸೇರದವರು ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಜಿ.ಪಂ. ಸಿಇಒ ಮಂಜುನಾಥ ಚವ್ಹಾಣ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಿಂಚಿನ ನೋಂದಣಿ ಕಾರ್ಯಕ್ರಮ ಮತ್ತು ವಿವಿಧ ಕಾಲೇಜ್​ಗಳಲ್ಲಿ ನಡೆಸಿದ ವಿಶೇಷ ಅಭಿಯಾನದ ಮೂಲಕ ಜಿಲ್ಲೆಯಲ್ಲಿ 18,707 ಯುವ ಮತದಾರರು ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದ್ದಾರೆ’ ಎಂದರು.

ಸಿ ವಿಜಿಲ್ ಆಪ್ ಅನ್ನು ಜನರು ಡೌನ್​ಲೋಡ್ ಮಾಡಿಕೊಳ್ಳಬೇಕು. ಚುನಾವಣೆ ಸಂದರ್ಭದಲ್ಲಿ ನಡೆಯುವ ಅಕ್ರಮ ಚಟುವಟಿಕೆಯನ್ನು ಆಪ್​ನಲ್ಲಿ ಅಪ್​ಲೋಡ್ ಮಾಡಿದರೆ ಅದು ಚುನಾವಣೆ ಅಧಿಕಾರಿಗಳ ಗಮನಕ್ಕೆ ಬರುತ್ತದೆ. 100 ನಿಮಿಷದಲ್ಲಿ ಅಕ್ರಮ ಚಟುವಟಿಕೆ ಕೈಗೊಂಡವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಈ ಕುರಿತು ಅಪ್​ಲೋಡ್ ಮಾಡಿದವರಿಗೆ ಮೆಸೇಜ್ ಸಹ ನೀಡಲಾಗುತ್ತದೆ. ಸಾರ್ವಜನಿಕರು ಅಕ್ರಮ ಚಟುವಟಿಕೆ ತಡೆಗಟ್ಟಲು ಸಿ ವಿಜಿಲ್ ಆಪ್ ಬಳಕೆ ಮಾಡಬೇಕು ಎಂದರು.

ಅಂಗವಿಕಲರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಅವರನ್ನು ಮನೆಯಿಂದ ಕರೆತರಲು ಮತ್ತು ಮತದಾನದ ನಂತರ ಅವರನ್ನು ಪುನಃ ಮನೆಗೆ ಬಿಟ್ಟು ಬರಲು ವಾಹನ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಮತಗಟ್ಟೆಗಳಲ್ಲಿ ತ್ರಿಚಕ್ರ ವಾಹನ, ಗಾಲಿ ಕುರ್ಚಿ ವ್ಯವಸ್ಥೆ ಮಾಡಲಾಗಿದೆ ಎಂದರು.

ಜನರಲ್ಲಿ ಮತದಾನ ಜಾಗೃತಿ ಮೂಡಿಸಲು ಫೆ.18ರಿಂದ ಜಿಲ್ಲೆಯಾದ್ಯಂತ ಮತದಾನ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ 6,40,542 ಜನರಿಗೆ ಮತದಾನ ಪ್ರಾತ್ಯಕ್ಷಿಕೆ ನೀಡಲಾಗಿದೆ. ಮತದಾನ ಕುರಿತು ಜಾಗೃತಿ ಮೂಡಿಸಲು ಸಂಕಲ್ಪ ಪತ್ರ ತಯಾರಿಸಿದ್ದು, ಶೀಘ್ರವೇ ಶಾಲಾ ಮಕ್ಕಳ ಮೂಲಕ ಎಲ್ಲ ಕುಟುಂಬಗಳಿಗೆ ಅವುಗಳನ್ನು ತಲುಪಿಸಲಾಗುತ್ತದೆ ಎಂದರು.

ನಂತರ ಸಿಇಒ ಮಂಜುನಾಥ ಅವರ ಅಧ್ಯಕ್ಷತೆಯಲ್ಲಿ ಸಾಮರ್ಥ್ಯಸೌಧದಲ್ಲಿ ಸ್ವೀಪ್ ಸಮಿತಿಯಿಂದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಲಾಯಿತು.

Leave a Reply

Your email address will not be published. Required fields are marked *