ಮತದಾನ ಸಹಕಾರಕ್ಕೆ ಸ್ವಯಂ ಸೇವಕರ ಬಳಕೆ

ಹಳಿಯಾಳ: ಹಳಿಯಾಳ, ದಾಂಡೇಲಿ ಹಾಗೂ ಜೊಯಿಡಾ ತಾಲೂಕುಗಳನ್ನೊಳಗೊಂಡಿರುವ ಹಳಿಯಾಳ ವಿಧಾನ ಸಭಾ ಕ್ಷೇತ್ರ-ನಂ. 76ರಲ್ಲಿ ಲೋಕಸಭೆ ಚುನಾವಣೆಗಾಗಿ ಸರ್ವ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಪುಟ್ಟಸ್ವಾಮಿ ಹೇಳಿದರು.

ಶನಿವಾರ ಮಿನಿ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗಾಗಿ ಕೈಗೊಂಡ ಸಿದ್ಧತೆ ಕುರಿತು ಮಾಹಿತಿ ನೀಡಿದರು.

ಹಿರಿಯ ನಾಗರಿಕರು, ಅಂಗವಿಕಲರು ಹಾಗೂ ಗರ್ಭಿಣಿಯರನ್ನು ಮತಗಟ್ಟೆಗಳಿಗೆ ಕರೆತರಲು 17 ವರ್ಷದೊಳಗಿನ ಯುವ ಸಮೂಹವನ್ನು ಸ್ವಯಂ ಸೇವಕರನ್ನಾಗಿ ಬಳಸುವ ನೂತನ ಪದ್ಧತಿ ಆರಂಭಿಸಲಾಗುವುದು ಎಂದರು.

ಮತಗಳು: ಹಳಿಯಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 16-1-19ರಂದು ಪ್ರಕಟಗೊಂಡ ಮತದಾರರ ಅಂತಿಮ ಯಾದಿಯಂತೆ 1,71,225 ಮತದಾರರಿದ್ದು, ಅದರಲ್ಲಿ 86,864 ಪುರುಷ ಮತದಾರರು, 84,361 ಮಹಿಳಾ ಮತದಾರರು ಹಾಗೂ ಇತರೆ 1 ಮತದಾರರಿದ್ದಾರೆ ಎಂದರು.

ಪಟ್ಟಣದ ಕಿಲ್ಲಾ ಕೋಟೆ ಬಳಿಯಿರುವ ಶಾಲೆಯಲ್ಲಿ ಮತಗಟ್ಟೆ 90 ಅನ್ನು ಪಿಂಕ್ ಮತಗಟ್ಟೆಯನ್ನಾಗಿ ರಚಿಸಲಾಗಿದೆ. ಕಾರ್ವೆಲ್ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ನಂ 99ರಲ್ಲಿ ಅಂಗವಿಕಲರಿಗಾಗಿ ಇರುವ ಎಲ್ಲ ಸೌಲಭ್ಯಗಳನ್ನು ಒದಗಿಸಿ ಮತಗಟ್ಟೆ ರಚಿಸಲಾಗಿದೆ. ಜೊಯಿಡಾ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ನಂ 42 ಅನ್ನು ಎಲ್ಲ ಮೂಲ ಸೌಕರ್ಯಗಳನ್ನೊಳಗೊಂಡ ಮತಗಟ್ಟೆಯನ್ನಾಗಿ ರಚಿಸಲಾಗಿದೆ. ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 21 ಮತಗಟ್ಟೆಗಳನ್ನು ಸೂಕ್ಷ್ಮ ಹಾಗೂ 12 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಿ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುವುದು ಎಂದರು.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುವುದನ್ನು ತಡೆಯಲು ವಿವಿಟಿ, ಎಸ್​ಎಸ್​ಟಿ ತಂಡಗಳನ್ನು ರಚಿಸಲಾಗಿದೆ. ತಾಲೂಕಿನ ಮಾವಿನಕೊಪ್ಪ, ಅರ್ಲವಾಡ, ಕಾವಲವಾಡ, ಭರ್ಚಿ, ಹಾಗೂ ಜೊಯಿಡಾ ತಾಲೂಕಿನ ಬಾಪೇಲಿ ಕ್ರಾಸ್ ಮತ್ತು ರಾಮನಗರದಲ್ಲಿ ಚೆಕ್ ಪೋಸ್ಟ್ 24 ಗಂಟೆ ತಪಾಸಣಾ ಕಾರ್ಯ ಆರಂಭಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಅಥವಾ ಚುನಾವಣೆಗೆ ಸಂಬಂಧಿಸಿದಂತೆ

ಸಿ ವಿಸಿಲ್ ಆಪ್ ನಲ್ಲಿ ದೂರುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.

ಹಳಿಯಾಳ ತಹಸೀಲ್ದಾರ್ ಶಿವಾನಂದ ಬಿ. ಉಳೇಗಡ್ಡಿ, ಗ್ರೇಡ್ 2 ತಹಸೀಲ್ದಾರ್ ಗುರುನಾಥ ಜಿ. ರತ್ನಾಕರ, ಚುನಾವಣಾ ಶಿರಸ್ತೇದಾರ ಅನಂತ ಚಿಪ್ಪಲಗಟ್ಟಿ, ದಾಂಡೇಲಿ ತಹಸೀಲ್ದಾರ್ ಚಾಮರಾಜ ಪಾಟೀಲ ಇದ್ದರು.

Leave a Reply

Your email address will not be published. Required fields are marked *