ಮತದಾನ ಮಾಡದವರಿಗೆ ವ್ಯಂಗ್ಯಭರಿತ ಸನ್ಮಾನ

ಚಿಕ್ಕಮಗಳೂರು: ಪ್ರಜಾತಂತ್ರ ಹಬ್ಬದಲ್ಲಿ ಮತ ಚಲಾಯಿಸುವುದು ಬಿಟ್ಟು ಮೋಜು ಮಸ್ತಿಗೆ ಆಗಮಿಸಿದ್ದ ಪ್ರವಾಸಿಗರಿಗೆ ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು ತರಾಟೆಗೆ ತೆಗೆದುಕೊಂಡು ವ್ಯಂಗ್ಯಭರಿತ ಸನ್ಮಾನ ಮಾಡಿದ್ದಾರೆ.

ನಗರದ ಮುಳ್ಳಯ್ಯನಗಿರಿ ಕಡೆ ಸಾಲುಗಟ್ಟಿ ಹೋಗುತ್ತಿದ್ದ ಕಾರುಗಳಲ್ಲಿದ್ದ ಪ್ರಯಾಣಿಕರಿಗೆ ಶಾಲು ಹಿಡಿದು, ಪೇಪರ್​ಗಳ ಹಾರು ಹಿಡಿದು ಸನ್ಮಾನ ಮಾಡಲು ಸಂಘದವರು ಬಂದಾಗ ಶಾಕ್ ಆದರು. ನಮಗೇಕೆ ಸನ್ಮಾನ, ಶಾಲು ಎಂದು ಪ್ರಶ್ನಿಸುತ್ತಿದ್ದಂತೆ, ನೀವು ವೋಟು ಹಾಕದೆ ಬಂದಿರುವ ಸಾಧನೆ ನೋಡಿ ನಿಮಗೆ ಸನ್ಮಾನ ಮಾಡುತ್ತಿದ್ದೇವೆ ಎಂದಾಗ ಪ್ರವಾಸಿಗರ ಮುಖ ಕಿವುಚಿದಂತೆ ಆಯಿತು.

ನಗರದ ಬೇಲೂರು ರಸ್ತೆ ಮಾಗಡಿ ಚೆಕ್ ಪೋಸ್ಟ್ ಹಾಗೂ ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ಹೋಗುವ ಕೈಮರದ ಬಳಿ ಪ್ರವಾಸಿಗರ ಕಾರು ತಡೆದು ಮತದಾನ ಮಾಡಿರುವ ಬಗ್ಗೆ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಜಶೇಖರ್ ನೇತೃತ್ವದಲ್ಲಿ ತಪಾಸಣೆ ಅಭಿಯಾನ ಹಮ್ಮಿಕೊಂಡಿತ್ತು. ಮತದಾನ ದಿನವೇ ಜಿಲ್ಲೆಗೆ 250ಕ್ಕಿಂತ ಹೆಚ್ಚು ಕಾರುಗಳು ಬೆಂಗಳೂರಿನಿಂದ ಬಂದಿದ್ದವು.

ದಿಢೀರ್ ರಸ್ತೆಯಲ್ಲಿ ಮಾಡಿದ ಸನ್ಮಾನ ಸ್ವೀಕರಿಸಲು ಕೆಲವರು ಹಿಂದೇಟು ಹಾಕಿದರು. ಮತ್ತೆ ಕೆಲವರು ತಮ್ಮ ತಪ್ಪಿನ ಅರಿವಾಗಿ ಸನ್ಮಾಕ್ಕೆ ಕೊರಳೊಡ್ಡಿದ್ದರು. ಮತದಾನ ಮಾಡದೆ ಬಂದವರಿಗೆ ಎಟಿಎಂ ಕಾರ್ಡ್, ಆಧಾರ್, ವೋಟರ್ ಐಡಿ ಸೇರಿ ಸರ್ಕಾರದ ಸೌಲಭ್ಯಗಳ ಗುರುತಿನ ಚೀಟಿಗಳ ಜೆರಾಕ್ಸ್ ಪ್ರತಿಗಳಿಂದ ತಯಾರಿಸಿದ ಹಾರ ಹಾಕಲಾಗುತ್ತಿತ್ತು. ಜತೆಗೊಂದು ಗುಲಾಬಿ ನೀಡಿ ಮುಂದಿನ ಚುನಾವಣೆಯಲ್ಲಾದರೂ ತಪ್ಪದೆ ಮತದಾನ ಮಾಡಬೇಕೆಂದು ಮನವಿ ಮಾಡಿಕೊಳ್ಳಲಾಯಿತು.

ಮತದಾನ ಬಿಟ್ಟು ಬಂದಿರುವುದು ತಪ್ಪಾಯಿತೆಂದು ಕೆಲವರು ಕ್ಷಮೆ ಕೋರುತ್ತಿದ್ದರು. ಇನ್ನು ಕೆಲವರು ಮತದಾನ ನಮ್ಮಲ್ಲಿ ಕಡ್ಡಾಯವೇನಿಲ್ಲವೆಂದು ಮೊಂಡು ವಾದ ಮಾಡುತ್ತಿದ್ದರು. ಮತ್ತೆ ಕೆಲವರು ಆಂಧ್ರ, ತಮಿಳುನಾಡಿನಿಂದ ಬಂದಿದ್ದೇವೆ ಎನ್ನುತ್ತಿದ್ದರು. ಇನ್ನು ಕೆಲವರು ಉತ್ತರ ಕರ್ನಾಟಕದ ನಗರಗಳ ಹೆಸರು ಹೇಳಿ ತಪಾಸಣೆ ತಂಡಕ್ಕೆ ಚಳ್ಳೆಹಣ್ಣು ತಿನ್ನಿಸುತ್ತಿದ್ದರು. ಏ.17ರಿಂದಲೇ ರಜೆ ಇರುವುದರಿಂದ ಹಲವರು ಎರಡು ದಿನ ಮೊದಲೆ ಆಗಮಿಸಿ ಹೋಂ ಸ್ಟೇ, ರೆಸಾರ್ಟ್, ಲಾಡ್ಜ್​ಗಳಲ್ಲಿ ವಸತಿ ಮಾಡಿದ್ದರು. ಸಂಘದ ಅಧ್ಯಕ್ಷ ಜಿ.ಎಂ.ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಬ್ಯಾಲದಾಳು ಕುಮಾರ್, ಆಲ್ದೂರು ರಾಜೇಶ್ ಇತರರಿದ್ದರು.

ದೇಶದ ಭವಿಷ್ಯ ನಿರ್ವಿುಸಬೇಕಾದ ಯುವ ಜನತೆ ಮತದಾನದ ಪವಿತ್ರ ಕಾರ್ಯ ಮರೆತು ಹೀಗೆ ಮೋಜಿಗಾಗಿ ಬಂದಿರುವುದರ ವಿರುದ್ಧ ಸಾತ್ವಿಕ ವಿರೋಧ ವ್ಯಕ್ತಪಡಿಸಲಾಗಿದೆ. | ಜಿ.ಎಂ.ರಾಜಶೇಖರ್, ಅಧ್ಯಕ್ಷ, ಜಿಲ್ಲಾ ಪತ್ರಕರ್ತರ ಸಂಘ

Leave a Reply

Your email address will not be published. Required fields are marked *