ಮತದಾನ ಬಹಿಷ್ಕಾರಕ್ಕೆ ಮುಂದಾದ ಅಂಗರಗಟ್ಟಿ, ಮಾಸಣಗಿ ರೈತರು

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ
ಆಣೂರು ಕೆರೆ ತುಂಬಿಸುವುದೂ ಹಾಗೂ ಸುತ್ತಮುತ್ತಲ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸದ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಲೋಕಸಭೆ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಲಾಗಿದೆ ಎಂದು ಅಂಗರಗಟ್ಟಿ, ಮಾಸಣಗಿ ರೈತರು ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಈ ಹಿಂದೆ ಕಾಜಕಾರಣಿಗಳು ಪೊಳ್ಳು ಭರವಸೆ ಮೂಲಕ ಮತ ಹಾಕಿಸಿಕೊಂಡು ರೈತರನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.

ರೈತ ಸಂಘದ ಮುಖಂಡ ಗಂಗಣ್ಣ ಎಲಿ ಮಾತನಾಡಿ, ನಮ್ಮ ವೋಟು ಪಡೆದು ಆಯ್ಕೆಯಾಗುವ ಜನಪ್ರತಿನಿಧಿಗಳು ನಮ್ಮ ಬೇಡಿಕೆಯನ್ನೂ ಈಡೇರಿಸಬೇಕು. ಅದು ಅವರ ಕರ್ತವ್ಯ. ಮೂರು ತಿಂಗಳಿಂದ ರೈತರು ನೀರಿಗಾಗಿ ನಿರಂತರ ಹೋರಾಟ ನಡೆಸುತ್ತಿದ್ದು, ಜಿಲ್ಲಾಧಿಕಾರಿ, ಉಸ್ತುವಾರಿ ಮಂತ್ರಿ, ಮಾಜಿ, ಹಾಲಿ ಶಾಸಕರು ರೈತರಿಗೆ ಮೋಸವೆಸಗಿದ್ದಾರೆ. ಆಣೂರು ಕೆರೆ ಯೋಜನೆ ಜಾರಿಯಾಗಿದೆ ಎನ್ನುವ ನೀರಾವರಿ ಅಧಿಕಾರಿಗಳು ಈಗಲೇ ಆದೇಶ ತಂದು ತೋರಿಸಲಿ ಎಂದರು.

ಆಣೂರು ಕೆರೆ ವ್ಯಾಪ್ತಿಯ ರೈತರು ಮತದಾನ ಬಹಿಷ್ಕಾರ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.

ಮುಖಂಡ ನಾಗಪ್ಪ ಸಪ್ಪಣ್ಣನವರ ಮಾತನಾಡಿ, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಮತದಾನದಿಂದ ದೂರ ಉಳಿಯುವ ಮೂಲಕ ಸರ್ಕಾರದ ಧೋರಣೆಯನ್ನು ಖಂಡಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಹಸೀಲ್ದಾರ್ ಟಿ. ಗುರುಬಸವರಾಜ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ರೈತ ಮುಖಂಡರಾದ ಕಿರಣಕುಮಾರ ಗಡಿಗೋಳ, ಬಸಪ್ಪ ಬನ್ನಿಹಟ್ಟಿ, ಬಸಣ್ಣ ಕುಮ್ಮೂರು, ಮಹಾದೇವಪ್ಪ ಶಿಡೇನೂರು, ಚಿಕ್ಕಪ್ಪ ಛತ್ರದ, ಚಿದಾನಂದ ಬಡ್ಡಿಯವರ, ಪ್ರವೀಣ ಹೊಸಗೌಡ್ರ, ಸಿದ್ದನಗೌಡ್ರ ಪಾಟೀಲ, ಚಿಕ್ಕಪ್ಪ ಛತ್ರದ, ಶಿವಯೋಗಿ ಶಿರೂರು ಇತರರಿದ್ದರು.

15 ದಿನಗಳ ಹಿಂದೆ ರೈತರ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಆಣೂರು ಕೆರೆ ಯೋಜನೆ ಡಿಪಿಆರ್ ಆಗಿದೆ ಎಂದು ಸುಳ್ಳು ಹೇಳಿದ್ದಾರೆ. ಒಂದು ವೇಳೆ ಯೋಜನೆ ನೀಲಿನಕ್ಷೆ ಸಿದ್ಧವಾಗಿದ್ದರೆ ರೈತ ಮುಖಂಡರಿಗೆ ಜಿಲ್ಲಾಡಳಿತ ಆದೇಶ ಪ್ರತಿ ನೀಡಲು ಮುಂದಾಗಲಿ.
-ಮಲ್ಲಿಕಾರ್ಜುನ ಬಳ್ಳಾರಿ, ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ