ಮತದಾನ ಬಹಿಷ್ಕಾರಕ್ಕೆ ಚಿಂತನೆ

ಕಾರವಾರ:ಸುವರ್ಣ ತ್ರಿಭುಜ ಮೀನುಗಾರಿಕೆ ಬೋಟ್ ನಾಪತ್ತೆಯಾಗಿ ಮೂರು ತಿಂಗಳು ಕಳೆದರೂ ಅದನ್ನು ಹುಡುಕಲು, ಸರ್ಕಾರಗಳು ಯಾವುದೇ ಸೂಕ್ತ ಕ್ರಮ ವಹಿಸದ ಹಿನ್ನೆಲೆಯಲ್ಲಿ ಮೀನುಗಾರರು ಮತದಾನ ಬಹಿಷ್ಕರಿಸುವ ಕುರಿತು ಚಿಂತಿಸುತ್ತಿದ್ದಾರೆ ಎಂದು ಉತ್ತರ ಕನ್ನಡ ಮೀನು ಮಾರಾಟಗಾರರ ಫೆಡರೇಷನ್ ಅಧ್ಯಕ್ಷ ಗಣಪತಿ ಮಾಂಗ್ರೆ ಹೇಳಿದ್ದಾರೆ.

ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಮಲ್ಪೆ ಬಂದರಿನಿಂದ ಹೊರಟ ಬೋಟ್​ನಲ್ಲಿ ಉತ್ತರ ಕನ್ನಡದ ಐವರು ಹಾಗೂ ಉಡುಪಿಯ ಇಬ್ಬರು ಮೀನುಗಾರರು ನಾಪತ್ತೆಯಾಗಿದ್ದಾರೆ.

ಗೋವಾ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿರುವ ಸಿಂಧದುರ್ಗ ಪ್ರದೇಶದಲ್ಲಿ ಬೋಟ್ ಕೊನೆಯದಾಗಿ ಸಂಪರ್ಕಕ್ಕೆ ಸಿಕ್ಕಿದೆ ಎಂಬ ಮಾಹಿತಿ ಇದೆ. ಬೋಟ್ ಏನಾಯಿತು. ಮೀನುಗಾರರ ಏನಾದರು ಎಂಬುದನ್ನು ಬಹಿರಂಗ ಮಾಡುವಂತೆ ಸಮಸ್ತ ಮೀನುಗಾರರು ಪ್ರತಿಭಟನೆ ಮಾಡಿಯಾಗಿದೆ. ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಘಟನೆ ನಡೆದ ಗೋವಾ ಹಾಗೂ ಮಹಾರಾಷ್ಟ್ರ ಎರಡೂ ಕಡೆ ಬಿಜೆಪಿ ಸರ್ಕಾರವಿದೆ. ಸಹಕಾರ ನೀಡಬೇಕಾದ ಕೇಂದ್ರದಲ್ಲೂ ಬಿಜೆಪಿ ಸರ್ಕಾರವಿದೆ. ಆದರೆ, ಉತ್ತರ ಕನ್ನಡ ಸಂಸದರು ಮಾತ್ರ ಈ ನಿಟ್ಟಿನಲ್ಲಿ ಮೀನುಗಾರರಿಗೆ ಯಾವುದೇ ಸಹಕಾರ ನೀಡಿಲ್ಲ. ಕರ್ನಾಟಕ ಸರ್ಕಾರ ಸಹ ಮೀನುಗಾರರನ್ನು ಹುಡುಕುವ ನಿಟ್ಟಿನಲ್ಲಿ ಸಮರ್ಪಕವಾಗಿ ಜವಾಬ್ದಾರಿ ನಿಭಾಯಿಸಿಲ್ಲ ಎಂಬುದು ಎಲ್ಲ ಮೀನುಗಾರರ ನೋವು. ಈ ಹಿನ್ನೆಲೆಯಲ್ಲಿ ಚುನಾವಣೆ ಬಹಿಷ್ಕರಿಸುವುದಾಗಿ ಉಡುಪಿಯಲ್ಲಿ ನಾಪತ್ತೆಯಾದ ಮೀನುಗಾರರ ಕುಟುಂಬದವರು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ನಾಪತ್ತೆಯಾದವರಲ್ಲಿ ನಮ್ಮ ಜಿಲ್ಲೆಯ ಮೀನುಗಾರೇ ಹೆಚ್ಚಿರುವುದರಿಂದ ನಾವು ಚುನಾವಣೆ ಬಹಿಷ್ಕರಿಸಬೇಕು ಎಂಬ ಕೂಗು ಸಮಾಜ ಬಾಂಧವರಿಂದಲೇ ಕೇಳಿ ಬಂದಿದೆ.