ಮತದಾನ ದಿನ ಕಾರ್ವಿುಕರಿಗೆ ವೇತನ ಸಹಿತ ರಜೆ

ಶಿವಮೊಗ್ಗ: ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂಬ ಉದ್ದೇಶದಿಂದ ಮತದಾನದ ದಿನ ಕೈಗಾರಿಕೆ ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ಕಾರ್ವಿುಕರಿಗೆ ವೇತನ ಸಹಿತ ರಜೆ ನೀಡಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕೆ.ಎ.ದಯಾನಂದ್ ಹೇಳಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ನಗರದ ಪರ್ಫೆಕ್ಟ್ ಅಲಾಯ್್ಸ ಕಾಂಪೋನೆಂಟ್ಸ್ ಆವರಣದಲ್ಲಿ ಮಂಗಳವಾರ ಕಾರ್ವಿುಕರಿಗೆ ಏರ್ಪಡಿಸಿದ್ದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ತಮಗೆ ಬೇಕಾದ ಆಡಳಿತ ವ್ಯವಸ್ಥೆಯನ್ನು ಆಯ್ಕೆ ಮಾಡುವ ಅವಕಾಶವನ್ನು ಮತದಾನ ಪ್ರಜೆಗಳಿಗೆ ನೀಡಿದೆ. ಮತದಾನ ಪ್ರಜಾಪ್ರಭುತ್ವ ವ್ಯವಸ್ಥೆಯ ಹಬ್ಬ. ಹಬ್ಬ ಎಂದರೆ ರಜೆ ಹಾಕಿ ಮನೆಯಲ್ಲಿ ಕುಳಿತುಕೊಳ್ಳುವುದಲ್ಲ ಎಂದು ತಿಳಿಸಿದರು.

ಮತದಾನದ ದಿನ ಎಲ್ಲ ಕೈಗಾರಿಕೆಗಳಲ್ಲಿ ಕಾರ್ವಿುಕರಿಗೆ ಸಂಬಳ ಸಹಿತ ರಜೆ ಘೊಷಿಸಲಾಗಿದೆ. ಆದರೆ ಮತದಾನ ಮಾಡದವರಿಗೆ ಸಂಬಳ ಸಹಿತ ರಜೆ ಪಡೆಯುವ ಹಕ್ಕು ಇಲ್ಲ. ಯಾವುದೇ ಅಭ್ಯರ್ಥಿ ಇಷ್ಟವಾಗದಿದ್ದರೆ ನೋಟಾ ಚಲಾಯಿಸಲು ಅವಕಾಶವಿದೆ ಎಂದರು.

1957ರಲ್ಲಿ ಜಿಲ್ಲೆಯಲ್ಲಿ 3.24 ಲಕ್ಷ ಮತದಾರರು ಇದ್ದರು. ಅಕ್ಷರಸ್ಥರು ಶೇ.15ರಿಂದ 20ರಷ್ಟಿದ್ದರೂ ಶೇ.75ರಷ್ಟು ಮತದಾನವಾಗಿತ್ತು. ಆದರೆ ಈಗ ಅಕ್ಷರಸ್ಥರ ಸಂಖ್ಯೆ ಹೆಚ್ಚಾಗಿದ್ದರೂ, ಮತದಾನ ಪ್ರಮಾಣ ಕಡಿಮೆಯಾಗುತ್ತಿರುವುದು ವಿಷಾದನೀಯ. ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿದ್ದು, ಈ ಬಾರಿ ಮತದಾನ ಪ್ರಮಾಣ ಹೆಚ್ಚಾಗಲು ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕೆಂದರು. ನೂರಾರು ಕಾರ್ವಿುಕರಿಗೆ ಈ ಸಂದರ್ಭದಲ್ಲಿ ಜಿಲ್ಲಾಚುನಾವಣಾಧಿಕಾರಿ ಕಡ್ಡಾಯ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು.

Leave a Reply

Your email address will not be published. Required fields are marked *