ಮತದಾನದ ಮಹತ್ವ ಸಾರಿದ ರಂಗೋಲಿ

ಧಾರವಾಡ: ಜಿಲ್ಲಾ ಸ್ವೀಪ್ ಸಮಿತಿಯಿಂದ ನಗರದ ಹಳೇ ಬಸ್ ನಿಲ್ದಾಣದಲ್ಲಿ ಬುಧವಾರ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯು ಮತದಾನದ ಮಹತ್ವ ಸಾರಿತು. ಮತದಾನ ಜಾಗೃತಿಗಾಗಿ ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿಗಳು ಅನೇಕ ರಂಗೋಲಿ ಬಿಡಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.

ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ್ ಅವರು ರಂಗೋಲಿ ಸ್ಪರ್ಧೆ ವೀಕ್ಷಿಸಿ ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸಿದರು.

ವಿವಿಧ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಅಧಿಕಾರಿಗಳು ಮತಯಂತ್ರ, ಚುನಾವಣಾ ಆಯೋಗ ಲಾಂಛನ, ಮತದಾನ ಮಾಡಿದ ತೋರುಬೆರಳು, ಹೂವು, ಮತದಾನ ಜಾಗೃತಿ, ಮದುವೆ ಆಮಂತ್ರಣ ಸೇರಿ ವಿವಿಧ ರೀತಿಯ ನವೀನ ರಂಗೋಲಿ ಚಿತ್ರ, ಮತಜಾಗೃತಿ ಚಿತ್ರಗಳನ್ನು ಬಿಡಿಸಿ ಘೊಷವಾಕ್ಯಗಳನ್ನು ಬರೆದರು.

ಗ್ರಾಮೀಣ ಪ್ರದೇಶಗಳ ನೂರಾರು ಪ್ರಯಾಣಿಕರು ವೀಕ್ಷಿಸಿದರು. ಇದೇವೇಳೆ ಜಿಲ್ಲಾಧಿಕಾರಿ ಹಾಗೂ ಮಕ್ಕಳು ಕೇಕ್ ಕತ್ತರಿಸಿ ವಿತರಿಸಿದರು. ಬಸ್ ನಿಲ್ದಾಣಕ್ಕೆ ಬಂದು ಸಾರ್ವಜನಿಕ ಪ್ರಯಾಣಿಕರಿಗೆ ‘ಭಾರತಕ್ಕಾಗಿ ಮತ, ತಪ್ಪದೇ ಮತದಾನ ಮಾಡಿ, ಮತದಾನ ಹಕ್ಕು ಮತ್ತು ಕರ್ತವ್ಯ’ ಘೊಷವಾಕ್ಯಗಳನ್ನು ಅವರ ಅಂಗೈ ಮೇಲೆ ಮೆಹಂದಿ ಬಳಸಿ ಬರೆಯುವ ಕಾರ್ಯವನ್ನು ಅಂಜುಮನ್ ಕಾಲೇಜ್ ವಿದ್ಯಾರ್ಥಿಗಳು ಮಾಡಿದರು.

ಡಿಡಿಪಿಐ ಜಿ.ಬಿ. ಮನ್ನಿಕೇರಿ, ಬಿಇಒಗಳಾದ ಎಂ.ಲ್. ಹಂಚಾಟೆ, ಎ.ಎ. ಖಾಜಿ, ವಿದ್ಯಾ ನಾಡಿಗೇರ, ಕೆ.ಎಂ. ಶೇಖ್, ಶಿಕ್ಷಕರು, ಇತರರಿದ್ದರು.

Leave a Reply

Your email address will not be published. Required fields are marked *