ಒಂದು ವಾರದಿಂದ ಜಿಲ್ಲೆಯಲ್ಲಿ ಅಕಾಲಿಕ ಮಳೆ ಸುರಿಯುತ್ತಿದೆ, ಮತದಾನದ ದಿನವೂ ಮಳೆ ಬರುವ ಸಾಧ್ಯತೆ ಇರುವುದರಿಂದ ಮುಂಜಾಗ್ರತೆ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಯೂ ಆದ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.
ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಮತಗಟ್ಟೆ ಅಧಿಕಾರಿಗಳು ಕೊಡೆ ಮತ್ತು ರೈನ್‌ಕೋಟ್ ತರುವಂತೆಯೂ ಸೂಚನೆ ನೀಡಲಾಗಿದೆ. ವಿದ್ಯುನ್ಮಾನ ಮತಯಂತ್ರಗಳಿಗೆ ಮಳೆಯಿಂದ ಸುರಕ್ಷತೆಗಾಗಿ ಪಾಲಿತೀನ್ ಪ್ಲಾಸ್ಟಿಕ್ ಕವರ್ ನೀಡಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
11 ವಿಧಾನಸಭಾ ಕ್ಷೇತ್ರಗಳ 2,905 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಶೇ.74, 2019ರ ಲೋಕಸಭಾ ಚುನಾವಣೆಯಲ್ಲಿ ಶೇ.70ರಷ್ಟು ಮತದಾನವಾಗಿದೆ. ಈ ಪ್ರಮಾಣವನ್ನು ಶೇ.80ಕ್ಕೇರಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ 574 ಸೂಕ್ಷ್ಮ ಮತಗಟ್ಟೆಗಳಿವೆ. ಎನ್.ಆರ್.ಕ್ಷೇತ್ರದಲ್ಲಿ 78, ಚಾಮುಂಡೇಶ್ವರಿ ಕ್ಷೇತ್ರದಲ್ಲಿ 68, ವರುಣದಲ್ಲಿ 50 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. 40ಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿವೆ. ನಗದು ಮತ್ತು ಮದ್ಯ ವಶ ಸೇರಿದಂತೆ ಒಟ್ಟು 11 ಕೋಟಿ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಮಾತನಾಡಿ, ಮೈಸೂರು ನಗರ ವ್ಯಾಪ್ತಿಯ 3 ಕ್ಷೇತ್ರಗಳಿಂದ 2,400 ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಹೊರ ರಾಜ್ಯ ಅಥವಾ ಹೊರ ಜಿಲ್ಲೆಯವರು ನಗರದಲ್ಲಿ ಉಳಿದಿರುವ ಬಗ್ಗೆ ಮಾಹಿತಿ ನೀಡಿದರೆ ನಿಯಾಮನುಸಾರ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಮಾತನಾಡಿ, ಮೈಸೂರು ಗ್ರಾಮಾಂತರ ವ್ಯಾಪ್ತಿಯ 8 ಕ್ಷೇತ್ರಗಳಿಗೆ 2,514 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಮೇಲುಸ್ತುವಾರಿಗಾಗಿ 15ರಿಂದ 20 ಸೆಕ್ಟರ್ ಅಧಿಕಾರಿ ನಿಯೋಜಿಸಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಮುಂದುವರಿದಿದೆ ಎಂದು ತಿಳಿಸಿದರು.
ಜಿಪಂ ಸಿಇಒ ಕೆ.ಎಂ.ಗಾಯತ್ರಿ ಮಾತನಾಡಿ, ಮಹಿಳಾ ಮತದಾರರನ್ನು ಆಕರ್ಷಿಸಲು ಜಿಲ್ಲೆಯಲ್ಲಿ 55 ಸಖಿ ಮತಗಟ್ಟೆ ಸ್ಥಾಪಿಸಲಾಗಿದೆ. ಅಂಗವಿಕಲರಿಗೆ ಅನುಕೂಲವಾಗುವಂತೆ ಸೌಲಭ್ಯವುಳ್ಳ 11 ಮತಗಟ್ಟೆ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಎಲ್ಲರೂ ಮತದಾನದ ದಿನವನ್ನು ಪ್ರಜಾಪ್ರಭುತ್ವದ ಹಬ್ಬದ ದಿನವನ್ನಾಗಿ ಆಚರಿಸಬೇಕಾಗಿದೆ. ಪ್ರತಿಯೊಬ್ಬರ ಮತವೂ ಅಮೂಲ್ಯವಾಗಿದ್ದು, ಯಾವುದೇ ರೀತಿಯ ಆಮಿಷ, ಒತ್ತಡಗಳಿಗೆ ಒಳಗಾಗದೆ ನಿರ್ಭೀತರಾಗಿ ಮತದಾನ ಮಾಡಬೇಕು.
ಡಾ.ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ
ಮೇ 10ರಂದು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ನಡೆಯುವ ಪ್ರಜಾಪ್ರಭುತ್ವ ಹಬ್ಬದಲ್ಲಿ ಎಲ್ಲ ಮತದಾರರು ಮತದಾನ ಮಾಡುವ ಮೂಲಕ ಸಂಭ್ರಮಿಸೋಣ. ಎಲ್ಲರೂ ತಪ್ಪದೆ ಮತ ಚಲಾಯಿಸಿ. ಹಿರಿಯ ನಾಗರಿಕರು, ಮಹಿಳೆಯರು, ಯುವಜನತೆ, ತೃತೀಯ ಲಿಂಗಿಗಳು, ಅಂಗವಿಕಲರು, ಎಲ್ಲ ಅರ್ಹ ಮತದಾರರು ಸದೃಢ ಸಮಾಜವನ್ನು ನಿರ್ಮಿಸುವ ಸಲುವಾಗಿ ಪ್ರಜಾತಂತ್ರ ಹಬ್ಬದಲ್ಲಿ ಪಾಲ್ಗೊಂಡು ಮತದಾನವನ್ನು ಮಾಡೋಣ.
ಜಾವಗಲ್ ಶ್ರೀನಾಥ್, ಕ್ರಿಕೆಟಿಗ