More

  ಮತದಾನದಿಂದ ಸದೃಢ ರಾಷ್ಟ್ರ ನಿರ್ಮಾಣ


  ಹಾವೇರಿ: ಸಂವಿಧಾನ ಪ್ರಜೆಗಳಿಗೆ ಮತದಾನದ ಹಕ್ಕನ್ನು ನೀಡಿದ್ದು, ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಸುಭದ್ರ ಹಾಗೂ ಸದೃಢ ರಾಷ್ಟ್ರ ನಿರ್ವಣಕ್ಕೆ ಮುಂದಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎ.ವಿ. ಪಾಟೀಲ ಹೇಳಿದರು.

  ನಗರದ ಜಿಲ್ಲಾ ಗುರುಭವನದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

  ಮತದಾನದಲ್ಲಿ ಎಲ್ಲರೂ ಭಾಗವಹಿಸಲು ಆಯೋಗ ಮತದಾರರಿಗೆ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. 18 ವರ್ಷ ತುಂಬಿದ ಎಲ್ಲರೂ ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವ ಮೂಲಕ ನಿಮ್ಮ ಮತದಾನದ ಹಕ್ಕನ್ನು ಚಲಾಯಿಸಿ ಎಂದರು.

  ಅಪರ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ ಮಾತನಾಡಿ, ಜಿಲ್ಲೆಯಲ್ಲಿ ಮಿಂಚಿನ ಮತದಾನ ನೋಂದಣಿ ಮೂಲಕ 24 ಸಾವಿರ ಯುವ ಮತದಾರರನ್ನು ನೋಂದಾಯಿಸಲಾಗಿದೆ ಎಂದರು.

  ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಸಿ. ಪಾವಲಿ ಮಾತನಾಡಿ, ಸುಭದ್ರ ಸರ್ಕಾರ ನಿರ್ವಣದ ದೃಷ್ಟಿಯಿಂದ ಯುವ ಮತದಾರರು ದಿಟ್ಟ ಹೆಜ್ಜೆಯಿಡಬೇಕು ಎಂದರು.

  ಜಿಪಂ ಸಿಇಒ ರಮೇಶ ದೇಸಾಯಿ ಪ್ರತಿಜ್ಞಾವಿಧಿ ಬೋಧಿಸಿದರು. ಮತದಾರರ ನೋಂದಣಿ ಪ್ರಕ್ರಿಯೆಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಬಿಎಲ್​ಒ, ಇಎಲ್​ಸಿಗಳನ್ನು ಸನ್ಮಾನಿಸಲಾಯಿತು.
  ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಶ್ರೀವಿದ್ಯಾ, ವಕೀಲರ ಸಂಘದ ಕಾರ್ಯದರ್ಶಿ ಪಿ.ಎಂ. ಬೆನ್ನೂರ, ಡಿಡಿಪಿಐ ಅಂದಾನೆಪ್ಪ ವಡಗೇರಿ, ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್,ಸಿ. ಪೀರಜಾದೆ, ಬಿಇಒ ಎಂ.ಎಚ್. ಪಾಟೀಲ, ನಗರಸಭೆ ಆಯುಕ್ತ ಬಸವರಾಜ ಜಿದ್ದಿ ಇತರರು ಉಪಸ್ಥಿತರಿದ್ದರು. ಚುನಾವಣಾ ತಹಸೀಲ್ದಾರ್ ಡಾ. ಪ್ರಶಾಂತ ನಾಲವಾರ ಸ್ವಾಗತಿಸಿ ನಿರೂಪಿಸಿದರು. ತಹಸೀಲ್ದಾರ್ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ ಶಂಕರ ಜಿ.ಎಸ್., ವಂದಿಸಿದರು.

  ವಿಶ್ವದ ಕೆಲವು ದೇಶಗಳಲ್ಲಿ ರಾಜರ ಆಳ್ವಿಕೆ ಇನ್ನೂ ಜೀವಂತವಾಗಿದೆ. ಆದರೆ, ಭಾರತ ಪ್ರಜಾಪ್ರಭುತ್ವ ದೇಶವಾಗಿದೆ. ಪ್ರಜಾಪ್ರಭುತ್ವದಲ್ಲಿ ಯುವ ಜನತೆಯ ಪಾತ್ರ ಮುಖ್ಯವಾಗಿದೆ. 18 ವರ್ಷ ಪೂರೈಸಿದ ಯುವ ಸಮೂಹ ಮತದಾನ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು. ಸಂವಿಧಾನ ಶಾಸನಬದ್ಧವಾಗಿ ನೀಡಿರುವ ಮತದಾನದ ಹಕ್ಕನ್ನು ಚಲಾಯಿಸಬೇಕು.
  | ಕೃಷ್ಣ ಬಾಜಪೈ, ಜಿಲ್ಲಾಧಿಕಾರಿ

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts