ಮತದಾನದಿಂದ ದೂರ ಉಳಿದ 4 ಗ್ರಾಮ

ಬಾಗೇಪಲ್ಲಿ: ಮೂಲಸೌಲಭ್ಯ ಕಲ್ಪಿಸಲು ಅಧಿಕಾರಿಗಳ ನಿರ್ಲಕ್ಷ್ಯ ದೂರದ ಗ್ರಾಮಗಳಲ್ಲಿ ಮತಗಟ್ಟೆ ಸ್ಥಾಪನೆಗೆ ವಿರೋಧ ಸೇರಿ ಇತರ ಕಾರಣಗಳಿಂದ ತಾಲೂಕಿನ ವಿವಿಧ ಗ್ರಾಮಸ್ಥರು ಮತದಾನ ಬಹಿಷ್ಕರಿಸಲು ಮುಂದಾದಾಗ ತಹಸೀಲ್ದಾರ್ ವಿ.ನಾಗರಾಜ್ ಮನವೊಲಿಕೆಯಿಂದ ಕೆಲ ಗ್ರಾಮಸ್ಥರು ಮತದಾನ ಮಾಡಿದರೆ, ಕಾಗಾನಪಲ್ಲಿ, ಸಿದ್ದನಪಲ್ಲಿ, ಮೈನಗಾನಪಲ್ಲಿ, ಮರವಪಲ್ಲಿ ಗ್ರಾಮಸ್ಥರು ಮತದಾನ ಪ್ರಕ್ರಿಯೆಯಿಂದ ದೂರ ಉಳಿದರು.

ನಲ್ಲಗುಟ್ಲಪಲ್ಲಿ ಗ್ರಾಪಂನ ರಾಜುವಾಂಡ್ಲಪಲ್ಲಿ ಮತಗಟ್ಟೆ ಸಂಖ್ಯೆ 142ರಿಂದ ಮೂಗಿರೆಡ್ಡಿಪಲ್ಲಿ, ಮೂಗಿರೆಡ್ಡಿಪಲ್ಲಿ ತಾಂಡಾ, ಕುಂಟತಾಂಡಾ ಪ್ರತ್ಯೇಕಗೊಳಿಸಿ ಮೂಗಿರೆಡ್ಡಿಪಲ್ಲಿಯಲ್ಲಿ ಹೊಸ ಮತಗಟ್ಟೆ ಸ್ಥಾಪಿಸಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದ್ದರೂ ಮತಗಟ್ಟೆ ಸ್ಥಾಪಿಸಿಲ್ಲ ಎಂದು ಆರೋಪಿಸಿ ನಾಲ್ಕು ಗ್ರಾಮಗಳ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಪ್ರತ್ಯೇಕ ಮತಗಟ್ಟೆ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದು ತಹಸೀಲ್ದಾರ್ ನಾಗರಾಜ್ ಭರವಸೆ ನೀಡಿದ್ದರಿಂದ ಗ್ರಾಮಸ್ಥರು ಮತದಾನ ಮಾಡಿದರು.

ಮತದಾನಕ್ಕೆ ಬಸ್ ವ್ಯವಸ್ಥೆ: ಗೂಳೂರು ಹೋಬಳಿ ನಾರಾಯಣಸ್ವಾಮಿ ಕೋಟೆಯಲ್ಲಿ ಸ್ಥಾಪಿಸಿರುವ ಮತಗಟ್ಟೆ ಎರಡು ಕಿ.ಮೀ. ದೂರವಿದ್ದು, ಮತದಾನಕ್ಕೆ ತೆರಳಲು ಕಷ್ಟಕರವೆಂದು ಆರೋಪಿಸಿ ಚಿಂತಮಾಕಲದಿನ್ನೆ ಗ್ರಾಮಸ್ಥರು ಮತದಾನ ಬಹಿಷ್ಕರಿಸಲು ಮುಂದಾದಾಗ ತಹಸೀಲ್ದಾರ್ ನಾಗರಾಜ್, ಗ್ರಾಮಸ್ಥರ ಮನವೋಲಿಸಿ ಬಸ್ ವ್ಯವಸ್ಥೆ ಕಲ್ಪಿಸಿದರು. ಇದರಿಂದ ಗ್ರಾಮಸ್ಥರು ಮತದಾನದಲ್ಲಿ ಪಾಲ್ಗೊಂಡರು.

ಮನವೊಲಿಕೆ ಪ್ರಯತ್ನ ವಿಫಲ: ಯಲ್ಲಂಪಲ್ಲಿ ಗ್ರಾಪಂನ ಕಾಗಾನಪಲ್ಲಿ, ಸಿದ್ದನಪಲ್ಲಿ, ಮೈನಗಾನಪಲ್ಲಿ, ಮರವಪಲ್ಲಿ ಗ್ರಾಮಗಳಲ್ಲಿ ಸಮರ್ಪಕ ರಸ್ತೆ ಸೌಲಭ್ಯವಿಲ್ಲ ಎಂದು ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾಗ ತಹಸೀಲ್ದಾರ್ ವಿ.ನಾಗರಾಜ್ ಮನವೊಲಿಸಲು ಮಾಡಿದ ಪ್ರಯತ್ನ ವಿಫಲವಾಗಿದೆ.

 

Leave a Reply

Your email address will not be published. Required fields are marked *