ಮತದಾನಕ್ಕೆ ವಿದೇಶದಿಂದ ಆಗಮಿಸಿದ ಧಾರವಾಡಿಗರು

ಧಾರವಾಡ: ಲೋಕಸಭೆ ಸಾರ್ವತ್ರಿಕ ಚುನಾವಣೆ ಮತದಾನ ಹಿನ್ನೆಲೆಯಲ್ಲಿ ವಿದೇಶದಲ್ಲಿದ್ದ ಟೆಕ್ಕಿಗಳು ಸೇರಿದಂತೆ ದೂರದ ನಗರದಲ್ಲಿ ವಾಸವಾಗಿದ್ದ ಜನರು ಮಂಗಳವಾರ ನಗರಕ್ಕೆ ಆಗಮಿಸಿ ಮತ ಚಲಾಯಿಸಿದರು.

ಅಮೆರಿಕದಲ್ಲಿ ವಾಸವಾಗಿರುವ ಧಾರವಾಡ ಸಾರಸ್ವತಪುರ ಮೂಲದ ಇಂಜಿನಿಯರ್ ನಿಹಾರ ಸಶಿತ್ತಲ ಹಾಗೂ ತಾಯಿ ಮಂಗಲಾ ಅವರು ಸಾರಸ್ವತಪುರ ಮಾಡರ್ನ್ ಶಾಲೆಯಲ್ಲಿ ಮತ ಚಲಾಯಿಸಿದರು.

ನಂತರ ಪತ್ರಿಕೆಯೊಂದಿಗೆ ಮಾತನಾಡಿದ ನಿಹಾರ, ಇದೊಂದು ಲೋಕತಂತ್ರದ ಉತ್ಸವ. ಇದಕ್ಕೆ ನಮ್ಮ ಚಿಕ್ಕ ಕೊಡುಗೆ ನೀಡಲು ಅಮೆರಿಕದಿಂದ ಆಗಮಿಸಿದ್ದೇವೆ. ಸ್ಥಿರ ಸರ್ಕಾರ, ಸಶಕ್ತ ಸರ್ಕಾರ ಬರಲಿ ಎಂಬುದು ನಮ್ಮ ಆಶಯ. ಹೀಗಾಗಿ ಅಲ್ಲಿಂದ ಬಂದಿದ್ದೇವೆ. ಪತ್ನಿ ಪ್ರೇಕ್ಷಾ ದೇಶಪಾಂಡೆ ಅವರ ಮತ ಮುಂಬೈನಲ್ಲಿದೆ. ಹೀಗಾಗಿ ಮುಂಬೈನಲ್ಲಿನ ಮತದಾನ ಮುಗಿದ ಬಳಿಕ ಅಮೇರಿಕಕ್ಕೆ ತೆರಳಲಿದ್ದೇವೆ ಎಂದು ತಿಳಿಸಿದರು.

ಇದೇ ರೀತಿಯಲ್ಲಿ ಕಲಘಟಗಿ ತಾಲೂಕಿನ ಬಿಸನಳ್ಳಿ ಮೂಲದವರಾಗಿದ್ದು, ಆಸ್ಟ್ರೇಲಿಯಾದಲ್ಲಿ ಬ್ಯಾಂಕ್​ವೊಂದರ ಸಲಹೆಗಾರ ಆಗಿರುವ ಬಸವರಾಜ ಮದುವನ್ನವರ ಹಾಗೂ ಪತ್ನಿ ಭಾರತಿ ಅವರು ಆಗಮಿಸಿ ಬಿಸನಳ್ಳಿಯ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದರು. ಈ ಕುರಿತು ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಅನಿವಾರ್ಯ ಕಾರಣಗಳಿಂದ ಮತ ಹಾಕಲು ಆಗಿರಲಿಲ್ಲ. ಆದರೆ, ಲೋಕಸಭೆ ಚುನಾವಣೆಗೆ ಮೊದಲೇ ಯೋಜನೆ ರೂಪಿಸಿ ಮತದಾನ ಮಾಡಲು ಬಂದಿದ್ದೇವೆ. ಭಾರತದಲ್ಲಿ ಗಟ್ಟಿಯಾದ ಪ್ರಜಾಪ್ರಭುತ್ವ ನೆಲೆಗೊಳ್ಳಲಿ ಎಂಬುದೇ ತಮ್ಮ ಆಶಯ ಎಂದರು.

ಇನ್ನುಳಿದಂತೆ ದೆಹಲಿಯಲ್ಲಿ ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶುಭಾ ಧಾರವಾಡಕರ ಅವರು ಗರ್ಭಿಣಿಯಾಗಿದ್ದರೂ ಧಾರವಾಡಕ್ಕೆ ಆಗಮಿಸಿ ನಗರದ ಬುದ್ಧ ರಕ್ಕಿಥ ಶಾಲೆಯಲ್ಲಿ ಮತ ಚಲಾಯಿಸಿದರು.

Leave a Reply

Your email address will not be published. Required fields are marked *