ಮತದಾನಕ್ಕೆ ಜಿಲ್ಲಾಡಳಿತ ಸಜ್ಜು

ಗದಗ: ಜಿಲ್ಲೆಯಲ್ಲಿ ಏ. 23ರಂದು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಲೋಕಸಭೆ ಚುನಾವಣೆಯ ಮತದಾನವನ್ನು ಮುಕ್ತ ಹಾಗೂ ಶಾಂತಿಯುತವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿಯೊಬ್ಬ ಮತದಾರರು ನಿರ್ಭೀತಿಯಿಂದ ಹಕ್ಕು ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 4,30,194 ಪುರುಷ, 4,238,37 ಮಹಿಳೆ ಹಾಗೂ 53 ಇತರೆ ಸೇರಿ 8,54,084 ಮತದಾರರಿದ್ದಾರೆ. ಬಾಗಲಕೋಟೆ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ನರಗುಂದ ವಿಧಾನಸಭೆ ಕ್ಷೇತ್ರದಲ್ಲಿ 96,025 ಪುರುಷ, 93,053 ಮಹಿಳೆ ಹಾಗೂ 6 ಇತರೆ ಸೇರಿ 1,89,084 ಮತದಾರರಿದ್ದಾರೆ. ಹಾವೇರಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಯ ಶಿರಹಟ್ಟಿ, ಗದಗ ಮತ್ತು ರೋಣ ವಿಧಾನಸಭೆ ಕ್ಷೇತ್ರದಲ್ಲಿ 3,34,169 ಪುರುಷ, 3,30,784 ಮಹಿಳೆ ಹಾಗೂ 47 ಇತರೆ ಸೇರಿ 6,65,000 ಮತದಾರರಿದ್ದಾರೆ ಎಂದರು.

ಜಿಲ್ಲೆಯಲ್ಲಿ 959 ಮತಗಟ್ಟೆಗಳಿವೆ. 740 ಮತಗಟ್ಟೆಗಳು ಹಾವೇರಿ ಲೋಕಸಭೆ ಕ್ಷೇತ್ರ, 219 ಮತಗಟ್ಟೆಗಳು ಬಾಗಲಕೋಟೆ ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಬರುತ್ತವೆ. ಎಲ್ಲ ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಗೃಹ, ವಿದ್ಯುತ್, ಇತರೆ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮತದಾನ ಕಾರ್ಯನಿರ್ವಹಣೆಗೆ 4,236 ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸಲಾಗಿದೆ. ಅವರಿಗೆ ಕರ್ತವ್ಯದ ಅವಧಿಯಲ್ಲಿ ಆಹಾರ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. 959 ಮತಗಟ್ಟೆಗಳಲ್ಲಿ 188 ಅತಿಸೂಕ್ಷ್ಮ ಉಳಿದವು 771 ಸಾಮಾನ್ಯ ಮತಗಟ್ಟೆಗಳೆಂದು ಪರಿಗಣಿಸಲಾಗಿದೆ. 162 ಮತಗಟ್ಟೆಗಳಿಗೆ ಮೈಕ್ರೋ ಅಬ್ಸರ್ವರ್​ಗಳನ್ನು ನಿಯೋಜಿಸಲಾಗಿದೆ. 48 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ (ಕಚೇರಿಯಲ್ಲಿ ಕುಳಿತು ಮತಗಟ್ಟೆ ವೀಕ್ಷಣೆ), 56 ಮತಗಟ್ಟೆಗಳಲ್ಲಿ ವಿಡಿಯೋ ಚಿತ್ರೀಕರಣ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 1,385 ಮತಯಂತ್ರಗಳನ್ನು ಈ ಚುನಾವಣೆಯಲ್ಲಿ ಉಪಯೋಗಿಸಲಾಗುತ್ತಿದೆ. ಸೆಕ್ಟರ್ ಅಧಿಕಾರಿಗಳು, ಬಿಇಎಲ್ ಕಂಪನಿಯ ಐವರು ತಾಂತ್ರಿಕ ಸಿಬ್ಬಂದಿ ಮತದಾನದಂದು ಯಾವುದೇ ಯಂತ್ರದಲ್ಲಿ ತೊಂದರೆ ಉಂಟಾದಲ್ಲಿ ಕೂಡಲೇ ಸ್ಥಳಕ್ಕಾಗಮಿಸಿ ಸರಿಪಡಿಸಲು ಸಜ್ಜಾಗಿದ್ದಾರೆ. ಚುನಾವಣೆ ಸಂಬಂಧಿತ ಸಾರ್ವಜನಿಕ ದೂರು ಹಾಗೂ ಸಹಾಯವಾಣಿ 1950 ಕಾಲ್ ಸೆಂಟರ್​ಗೆ ಈವರೆಗೆ 961 ಕರೆಗಳು ದಾಖಲಾಗಿವೆ. 7 ಅರ್ಹ ದೂರುಗಳು ಸ್ವೀಕೃತವಾಗಿದ್ದು, ಅವುಗಳನ್ನು ಇತ್ಯರ್ಥಗೊಳಿಸಿದೆ. ಏ. 21ರಂದು ಸಂಜೆ 6ಕ್ಕೆ ಚುನಾವಣೆ ಪ್ರಚಾರ ಅವಧಿ ಕೊನೆಗೊಂಡಿದ್ದು, ಕ್ಷೇತ್ರದ ಮತದಾರರಲ್ಲದ ರಾಜಕೀಯ ಮುಖಂಡರು, ಪ್ರಭಾವಿ ಕಾರ್ಯಕರ್ತರು ಕ್ಷೇತ್ರ ಬಿಟ್ಟು ತೆರಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ಜಿಲ್ಲಾ ಸ್ವೀಪ್ ಸಮಿತಿ ಸದಸ್ಯ ಕಾರ್ಯದರ್ಶಿ ಟಿ. ದಿನೇಶ, ಇತರರಿದ್ದರು.

50,799 ಲೀಟರ್ ಮದ್ಯ ವಶ :ಜಿಲ್ಲೆಯಲ್ಲಿ ಮಾ. 10ರಿಂದ ಏ. 21ರವರೆಗೆ ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ಅಬಕಾರಿ, ಪೊಲೀಸ್ ಕಣ್ಗಾವಲು ತಂಡಗಳು 2.02 ಕೋಟಿ ರೂ. ಮೌಲ್ಯದ ಒಟ್ಟು 50,799 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿವೆ.

59.26 ಲಕ್ಷ ರೂ. ಮೌಲ್ಯದ ಇತರ ಸಾಮಗ್ರಿಯಾದ 21 ಬೈಕ್, 1 ಕ್ಯಾಂಟರ್, 1 ಆಟೋ, 2 ಟ್ರಕ್, 11 ಗ್ಯಾಸ್ ಸಿಲಿಂಡರ್, 11 ರೆಗ್ಯುಲೆಟರ್ಸ್, 11 ಸ್ಟವ್, 1 ಟಾಟಾ ಏಸ್ ಮೋಟರ್, 11 ಗ್ಯಾಸ್ ಸಿಲಿಂಡರ್ ಫಲಾನುಭವಿ ಕಾರ್ಡ್​ಗಳು, 240 ರುಚಿಗೋಲ್ಡ್ ಪಾಮ್ ಆಯಿಲ್ ಬಾಕ್ಸ್, 240 ರುಚಿ ಗೋಲ್ಡ್ ಟಿನ್, 15 ಸ್ಟೀಲ್ ಟೇಬಲ್ಸ್, 95 ರೆಡ್ ಪ್ಲಾಸ್ಟಿಕ್ ಚೇರ್ಸ್, 20 ಲೀಟರ್​ನ 5 ಪ್ಲಾಸ್ಟಿಕ್ ವಾಟರ್ ಕ್ಯಾನ್ ಸೇರಿ ಒಟ್ಟಾರೆ 59.26 ಲಕ್ಷ ರೂ. ಮೌಲ್ಯದ ಇತರ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಲ್ಲಿವರೆಗೆ ಒಟ್ಟು 1.54 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಈವರೆಗೆ ಸಂಚಾರಿ ದಳದಿಂದ 2, ಸ್ಥಿರ ಕಣ್ಗಾವಲು ತಂಡದಿಂದ 1, ಪೊಲೀಸ್ ಮತ್ತು ಅಬಕಾರಿ ಅಧಿಕಾರಿಗಳಿಂದ 368 ಸೇರಿ 371 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

12 ಸಖಿ ಮತಗಟ್ಟೆಗಳು: ಲೋಕಸಭೆ ಚುನಾವಣೆಯಲ್ಲಿ ವಿಧಾನಸಭೆ ಕ್ಷೇತ್ರಕ್ಕೆ 3ರಂತೆ ಜಿಲ್ಲೆಯ 4 ವಿಧಾನಸಭೆ ಕ್ಷೇತ್ರಗಳಲ್ಲಿ ಒಟ್ಟು 12 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅವುಗಳನ್ನು ಸಂಪೂರ್ಣವಾಗಿ ಮಹಿಳಾ ಅಧಿಕಾರಿಗಳು, ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಜಿಪಂ ಸಿಇಒ, ಸ್ವೀಪ್ ಸಮಿತಿ ಜಿಲ್ಲಾಧ್ಯಕ್ಷ ಮಂಜುನಾಥ ಚವ್ಹಾಣ ಹೇಳಿದರು. ಶಿರಹಟ್ಟಿ ತಾಲೂಕಿನ ಹರ್ಲಾಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 10, ಎಪಿಎಂಸಿ ಆಫೀಸ್ ನ್ಯೂ ಬಿಲ್ಡಿಂಗ್ ಮತಗಟ್ಟೆ ಸಂಖ್ಯೆ 111, ಮುಂಡರಗಿ ಪಟ್ಟಣದ ಸರ್ಕಾರಿ ಹಿರಿಯ ಉರ್ದು ಬಾಲಕಿಯರ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 54, ಗದಗದಲ್ಲಿ ಮುಳಗುಂದ ರಸ್ತೆಯ ಸರ್ಕಾರಿ ಪಿಯು ಕಾಲೇಜ್ ಮತಗಟ್ಟೆ ಸಂಖ್ಯೆ 124, ಸಿದ್ಧಲಿಂಗ ನಗರದ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 118, ಗದಗದ ಸಿ.ಎಸ್. ಪಾಟೀಲ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 97, ರೋಣ ತಾಲೂಕಿನ ಗಜೆಂದ್ರಗಡದ ಸರ್ಕಾರಿ ಬಾಲಕಿಯರ ಮಾದರಿ ಶಾಲೆ ಮತಗಟ್ಟೆ ಸಂಖ್ಯೆ 76, ರೋಣ ತಾಲೂಕಿನ ನರೇಗಲ್ ಪಟ್ಟಣ ಪಂಚಾಯಿತಿ ಮತಗಟ್ಟೆ ಸಂಖ್ಯೆ 187, ರೋಣ ಪಟ್ಟಣದ ಸಿಡಿಪಿಒ ಆಫೀಸ್ ಮತಗಟ್ಟೆ ಸಂಖ್ಯೆ 109, ನರಗುಂದ ಪಟ್ಟಣದಲ್ಲಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮತಗಟ್ಟೆೆ ಸಂಖ್ಯೆ 91 ಹಾಗೂ ಸರ್ಕಾರಿ ಕನ್ನಡ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 80, ಎಪಿಎಂಸಿ ರೈತ ಭವನ ಹಳೆಯ ಕಟ್ಟಡ ಮತಗಟ್ಟೆ ಸಂಖ್ಯೆ 100ರಲ್ಲಿ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ಎರಡು ತಿಂಗಳಿಂದ ಜಿಲ್ಲೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿಯು ವೈವಿಧ್ಯಮಯ ಮತದಾರ ಜಾಗೃತಿ ಕಾರ್ಯಕ್ರಮಗಳ ಮೂಲಕ ಹೊಸ, ಯುವ ಮತದಾರರ ಸೇರ್ಪಡೆ, ಅಮಿಷಕ್ಕೆ ಒಳಗಾಗದೆ ತಪ್ಪದೇ ಮತ ಚಲಾಯಿಸಲು ಪ್ರೇರೇಪಿಸಲಾಗಿದೆ. ಪಾಲಕರಿಗೆ ಪತ್ರಾಂದೋಲನ ಮೂಲಕ 4 ಲಕ್ಷ ಮತದಾನ ಮಾಡುವ ಸಂಕಲ್ಪ ಪತ್ರಗಳನ್ನು ಸಂಗ್ರಹಿಸಲಾಗಿದೆ. ಕಡಿಮೆ ಮತದಾನ ಪ್ರದೇಶಗಳಲ್ಲಿ 1 ಲಕ್ಷ ಮತದಾರ ಜಾಗೃತಿ ಕರಪತ್ರಗಳನ್ನು ವಿತರಿಸಲಾಗಿದೆ. ಒಟ್ಟು 8,54,084 ಮತದಾರರಿಗೆ ವೋಟರ್ ಸ್ಲಿಪ್ ಹಂಚಲಾಗುತ್ತಿದೆ. ಅದರೊಂದಿಗೆ ಕುಟುಂಬಕ್ಕೊಂದರಂತೆ 2 ಲಕ್ಷ ಕುಟಂಬಗಳಿಗೆ ಮತದಾರ ಮಾರ್ಗದರ್ಶಿ ಮನವಿ ಪತ್ರಗಳನ್ನು ಹಂಚಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಗುರುತಿಸಿದ 12,168 ಅಂಗವಿಕಲ ಮತದಾರರಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. 427 ವಾಹನಗಳನ್ನು ನಿಯುಕ್ತಿಗೊಳಿಸಿದ್ದು, ಅಂಗವಿಕಲ ಮತದಾರರನ್ನು ಮತಗಟ್ಟೆಗೆ ಕರೆದು ತಂದು ಪುನಃ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮತಗಟ್ಟೆಗೆ ವ್ಹೀಲ್​ಚೇರ್ ವ್ಯವಸ್ಥೆ ಕಲ್ಪಿಸಲಾಗಿದೆ. ಗದಗ ಎಪಿಎಂಸಿ ಆವರಣದಲ್ಲಿ 102 ಸಂಖ್ಯೆಯ ಮತಗಟ್ಟೆಯನ್ನು ಪೂರ್ಣವಾಗಿ ಅಂಗವಿಕಲ ಅಧಿಕಾರಿ, ಸಿಬ್ಬಂದಿ ನಿರ್ವಹಿಸಲಿದ್ದಾರೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಲೋಕಸಭೆ ಮತದಾನ ಕಾರ್ಯ ಶಾಂತಿಯಿಂದ ಹಾಗೂ ಸುವ್ಯವಸ್ಥಿತವಾಗಿ ಜರುಗಲು ಚುನಾವಣಾ ಆಯೋಗದ ಮಾರ್ಗದರ್ಶಿ ಸೂತ್ರ, ಸ್ಥಳೀಯ ಅಂಶಗಳನ್ನು ಆಧರಿಸಿ ಭದ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
| ಮಂಜುನಾಥ ಚವ್ಹಾಣ, ಸ್ವೀಪ್ ಸಮಿತಿ ಜಿಲ್ಲಾಧ್ಯಕ್ಷ

ಬಿಗಿ ಬಂದೋಬಸ್ತ್:ಲೋಕಸಭೆ ಚುನಾವಣೆ ಮತದಾನದಂದು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. 4 ಡಿಎಸ್ಪಿ, 12 ಸಿಪಿಐ, 27 ಪಿಎಸ್​ಐ, 59 ಎಎಸ್​ಐ, 700 ಪೊಲೀಸ್ ಸಿಬ್ಬಂದಿ, 600 ಗೃಹರಕ್ಷಕ ದಳ ಸೇರಿ 1500ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ. ಇದಲ್ಲದೆ, ಎರಡು ಸಶಸ್ತ್ರ ಮೀಸಲು ಪಡೆ ಸೇರಿ ಹೆಚ್ಚುವರಿಯಾಗಿ ಹೊರಗಿನಿಂದ ಬಂದಿರುವ ರಕ್ಷಣಾ ದಳಗಳನ್ನು ಬಳಸಿಕೊಳ್ಳಲಾಗುವುದು. ಸೆಕ್ಟರ್ ಮೊಬೈಲ್ ರಕ್ಷಣೆ ಘಟಕಗಳು ಸದಾ ಸಂಚಾರದಲ್ಲಿರುತ್ತವೆ ಎಂದು ಎಸ್ಪಿ ಶ್ರೀನಾಥ ಜೋಶಿ ಹೇಳಿದರು.