ಮತದಾನಕ್ಕೆ ಜಿಲ್ಲಾಡಳಿತ ಸಜ್ಜು

ಮಂಡ್ಯ: ಏ.18ರಂದು ನಡೆಯುವ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, 18ರ ಬೆಳಗ್ಗೆ 7ಗಂಟೆಯಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪಿ.ಸಿ.ಜಾಫರ್ ಹೇಳಿದರು.

8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 18 ಪುರುಷರು, 4 ಮಹಿಳೆಯರು ಸೇರಿ 22 ಅಭ್ಯರ್ಥಿಗಳು ಇದ್ದು, ಎಲ್ಲ ಮತಗಟ್ಟೆಗಳಲ್ಲಿ 2 ಮತಯಂತ್ರಗಳಿರುತ್ತವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮತದಾನಕ್ಕಾಗಿ 2046 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಚುನಾವಣಾ ಕಾರ್ಯಕ್ಕೆ 9904 ಅಧಿಕಾರಿ, ಸಿಬ್ಬಂದಿ ನೇಮಿಸಲಾಗಿದೆ. ಈ ಪೈಕಿ 2476 ಪ್ರಿಸೈಡಿಂಗ್ ಅಧಿಕಾರಿಗಳು, 2475 ಸಹಾಯಕ ಪ್ರಿಸೈಡಿಂಗ್ ಅಧಿಕಾರಿಗಳು, 4952 ಮತದಾನ ಅಧಿಕಾರಿಗಳು ಇದ್ದಾರೆ.
ಮತಗಟ್ಟೆಗೆ ನೇಮಕಗೊಂಡಿರುವ ಅಧಿಕಾರಿಗಳನ್ನು ಏ.17ರ ಬೆಳಗ್ಗೆ 6 ಗಂಟೆಗೆ ನಿಯೋಜಿಸಿರುವ ವಿಧಾನಸಭಾ ಕ್ಷೇತ್ರಕ್ಕೆ ಕರೆದೊಯ್ಯಲು ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗೆ ಸಿಬ್ಬಂದಿ ಉಪಯೋಗಕ್ಕೆ ತುರ್ತು ಚಿಕಿತ್ಸೆ, ಪ್ರಥಮ ಚಿಕಿತ್ಸೆ, ವೆಲ್‌ಫೇರ್ ಕಿಟ್ ನೀಡಲಾಗುವುದು ಎಂದರು.

ಇದಲ್ಲದೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನೇಮಿಸಿರುವ ಸೆಕ್ಟರ್ ಅಧಿಕಾರಿಗಳು ಮತದಾನದ ದಿನದಂದು ಮತಗಟ್ಟೆ ಅಧಿಕಾರಿಗಳಿಗೆ ಸಹಾಯ ಮಾಡುವುದಲ್ಲದೆ, ಮತದಾನ ಪ್ರಕ್ರಿಯೆ ವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಳ್ಳಬೇಕೆಂದು ಹೇಳಿದರು.

ಮಸ್ಟರಿಂಗ್ ಮತ್ತು ಡಿ ಮಸ್ಟ್‌ರಿಂಗ್‌ಗೆ 324 ಬಸ್‌ಗಳು, 61 ಮ್ಯಾಕ್ಸಿಕ್ಯಾಬ್/ಮಿನಿಬಸ್ಸು, 55 ಜೀಪುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಮಳವಳ್ಳಿ ಕ್ಷೇತ್ರದ ಮಸ್ಟರಿಂಗ್ ಡಿ ಮಸ್ಟರಿಂಗ್ ಶಾಂತಿ ಕಾಲೇಜಿನಲ್ಲಿ, ಮದ್ದೂರು ಎಚ್.ಕೆ.ವೀರಣ್ಣಗೌಡ ಕಾಲೇಜು, ಮೇಲುಕೋಟೆ ಪಿಎಸ್‌ಎಸ್‌ಕೆ ಪ್ರೌಢಶಾಲೆ, ಮಂಡ್ಯ ಬಾಲಕಿಯರ ಪದವಿ ಪೂರ್ವ ಕಾಲೇಜು(ಕಲ್ಲುಕಟ್ಟಡ), ಶ್ರೀರಂಗಪಟ್ಟಣ ಸರ್ಕಾರಿ ಪಪೂರ್ವ ಕಾಲೇಜು, ನಾಗಮಂಗಲ ಸರ್ಕಾರಿ ಪಪೂ ಕಾಲೇಜು, ಕೆ.ಆರ್.ಪೇಟೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಕೆ.ಆರ್.ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ.