ಮತದಾನಕ್ಕಾಗಿ ಸ್ವದೇಶಕ್ಕೆ ಬಂದವ್ರೆ!

ಶಿರಸಿ:  ‘ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವ ಇಮ್ಮಡಿಯಾಗಿದೆ. ನಮ್ಮನ್ನು ಆತ್ಮೀಯರಂತೆ ನೋಡುತ್ತಾರೆ. ದೇಶದ ಋಣವನ್ನು ಮತದಾನದ ಮೂಲಕ ನಾವು ತೀರಿಸಬೇಕಿದೆ’.

ತಾಲೂಕಿನ ಗೌಡಳ್ಳಿ ಮೂಲದ ಬಹ್ರೇನ್ ನಿವಾಸಿ, ಉದ್ಯಮಿ ಕಿರಣ ಉಪಾಧ್ಯಾಯ ಅವರ ಹೆಮ್ಮೆಯ ನುಡಿ ಇದು. ಮತದಾನಕ್ಕಾಗಿಯೇ 45 ಸಾವಿರ ರೂ. ಖರ್ಚು ಮಾಡಿ ಸ್ವದೇಶಕ್ಕೆ ಆಗಮಿಸಿರುವ ಅವರು ಮೈಸೂರು, ಮಂಡ್ಯ ಮತ್ತು ಹಾಸನದಲ್ಲಿ ಮತದಾನ ಜಾಗೃತಿಗಾಗಿ ಪ್ರಚಾರ ಕಾರ್ಯವನ್ನೂ ನಡೆಸಿದ್ದಾರೆ. ‘ಸ್ಥಳೀಯವಾಗಿ ವಾಸವಾಗಿಲ್ಲ ಎಂಬ ಕಾರಣದಿಂದ ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರನ್ನು ಕೆಲ ವರ್ಷಗಳ ಹಿಂದೆ ಕೈ ಬಿಟ್ಟಿದ್ದರು. ಕಳೆದ ಲೋಕಸಭೆ ಚುನಾವಣೆ ವೇಳೆ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಿ ನನ್ನ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದೆ. ಅಲ್ಲದೆ, ಮತದಾನ ಮಾಡಿ ವಾಪಸಾಗಿದ್ದೆ. ನರೇಂದ್ರ ಮೋದಿಯವರು ಪ್ರಧಾನಿಯಾದಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮನ್ನು ಗೌರವದಿಂದ ನೋಡಲಾಗುತ್ತಿದೆ. ಹೀಗಾಗಿ, ನಮಗೆ ಸಿಗುವ ಗೌರವವನ್ನು ಉಳಿಸಿಕೊಳ್ಳಲು ವಿಧಾನಸಭೆ ಚುನಾವಣೆಗೂ ಆಗಮಿಸಿ ಮತದಾನ ಮಾಡಿ, ಈ ಚುನಾವಣೆಗೂ ಬಂದಿದ್ದೇನೆ’ ಎನ್ನುತ್ತಾರೆ ಕಿರಣ ಉಪಾಧ್ಯಾಯ.

ಬಹ್ರೇನ್​ನಲ್ಲಿ ವಾಸವಾಗಿರುವ ಕರ್ನಾಟಕದ 25ಕ್ಕೂ ಅಧಿಕ ಜನರು ಪಟ್ಟಿಯಲ್ಲಿ ಹೆಸರು ನೋಂದಣಿಗೆ ಆನ್​ಲೈನ್ ಅರ್ಜಿ ಸಲ್ಲಿಸಿದ್ದರು. ಇವರಲ್ಲಿ ಮಂಗಳೂರಿನ ನಾಲ್ವರು, ಹುಬ್ಬಳ್ಳಿಯ ಇಬ್ಬರು ಮತ್ತು ಬೆಳಗಾವಿಯ ಒಬ್ಬರ ಹೆಸರು ಮತದಾರರ ಪಟ್ಟಿಗೆ ಸೇರಿಸಲಾಗಿದ್ದು, ಅವರೂ ಸಹ ಮತದಾನಕ್ಕಾಗಿ ಹುಟ್ಟೂರಿಗೆ ಬಂದಿದ್ದಾರೆ. ಏ. 26ರಂದು ಬಹ್ರೇನ್​ಗೆ ವಾಪಸಾಗಲಿದ್ದೇನೆ ಎಂದರು.

ಕಿರಣ ಅವರ ಮಗ ಸಿದ್ಧಾರ್ಥ ಮೈಸೂರಿನಲ್ಲಿ ವ್ಯಾಸಂಗ ಮಾಡ್ತುತಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿದೆ. ಹೀಗಾಗಿ ಮೊದಲ ಬಾರಿಗೆ ಮತ ಚಲಾಯಿಸಲು ಅವರನ್ನೂ ಊರಿಗೆ ಕರೆಸಿದ್ದಾರೆ. ಸ್ಥಳೀಯರು ಮತದಾನದಲ್ಲಿ ಪಾಲ್ಗೊಳ್ಳದಿದ್ದರೆ ಬೇಸರವೆನಿಸುತ್ತದೆ. ಮತದಾನ ನಮ್ಮ ಕರ್ತವ್ಯ, ಅದನ್ನು ಚಾಚೂ ತಪ್ಪದೇ ನಡೆಸಬೇಕು ಎಂಬುದು ಕಿರಣ ಅವರ ಆಶಯ.

Leave a Reply

Your email address will not be published. Required fields are marked *