ಮತಗಳಿಕೆಯಲ್ಲಿ ಇಳಿಕೆ ಕಂಡ ಕಾಂಗ್ರೆಸ್​ಗೆ ಮೈತ್ರಿ ಬಲ

ಕೋಲಾರ: ಕೋಲಾರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ. 1952ರಿಂದ 2014ರವರೆಗೆ ನಡೆದಿರುವ 16 ಲೋಕಸಭೆ ಚುನಾವಣೆಯಲ್ಲಿ 15 ಬಾರಿ ಗೆದ್ದಿರುವ ಕೈ ಮತಗಳಿಕೆಯಲ್ಲಿ ಏರಿಳಿತ ಕಾಣುವಂತಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತಗಳಿಕೆ ಹೆಚ್ಚುವ ವಿಶ್ವಾಸ ಹೊಂದಿದ್ದು, ಕೈ ನಾಗಾಲೋಟಕ್ಕೆ ಬಿಜೆಪಿ ಬ್ರೇಕ್ ಹಾಕುವುದೇ ಎಂಬ ಕುತೂಹಲ ಮೂಡಿದೆ.

ಕೋಲಾರ ಲೋಕಸಭಾ ಕ್ಷೇತ್ರ 1952ರಿಂದ 1962ರವರೆಗೆ ದ್ವಿಸದಸ್ಯತ್ವ ಕ್ಷೇತ್ರವಾಗಿತ್ತು.1962ರಲ್ಲಿ ಮರುರಚಿಸಲ್ಪಟ್ಟು ಮೀಸಲು ಕ್ಷೇತ್ರವಾಯಿತು. 1952- ದೊಡ್ಡತಿಮ್ಮಯ್ಯ, ಎಂ.ವಿ. ಕೃಷ್ಣಪ್ಪ (ಕಾಂ),1957-ದೊಡ್ಡತಿಮ್ಮಯ್ಯ, ಕೆ.ಚಂಗಲರಾಯರೆಡ್ಡಿ (ಕಾಂ),1962-ದೊಡ್ಡತಿಮ್ಮಯ್ಯ (ಮೀಸಲು ಕ್ಷೇತ್ರ) (ಕಾಂ), 1967-ಜಿ.ವೈ. ಕೃಷ್ಣನ್ (ಕಾಂ), 1971-ಜಿ.ವೈ.ಕೃಷ್ಣನ್ (ಕಾಂ),1977-ಜಿ.ವೈ. ಕೃಷ್ಣನ್ (ಕಾಂ),1980-ಜಿ. ವೈ. ಕೃಷ್ಣನ್(ಕಾಂ),1984-ವಿ. ವೆಂಕಟೇಶ್(ಜನತಾ ಪಕ್ಷ)1989-ವೈ.ರಾಮಕೃಷ್ಣ (ಕಾಂ) ಹಾಗೂ 1991, 96, 98, 99, 2004, 2009 ಹಾಗೂ 2014ರಲ್ಲಿ ಕೆ.ಎಚ್. ಮುನಿಯಪ್ಪ (ಕಾಂ) ಆಯ್ಕೆಯಾಗಿದ್ದಾರೆ.

ಶೇಖಡಾವಾರು ಮತಗಳಿಕೆ: 1977ರಲ್ಲಿ ಜಿ.ವೈ.ಕೃಷ್ಣನ್ ಶೇ.55.85 ಮತ ಪಡೆದರೆ, 1980ರಲ್ಲಿ ಮರು ಆಯ್ಕೆಯಾದಾಗ ಮತ ಗಳಿಕೆ ಶೇ.50.19ಕ್ಕೆ ಕುಸಿಯಿತು. 1984ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಸೋಲುಂಡ ಸಂದರ್ಭದಲ್ಲಿ ಶೇ.42.22 ಮತ ಗಳಿಸಿತ್ತು. ಇಲ್ಲಿಂದಾಚೆಗೆ ಬಹುತೇಕ ಚುನಾವಣೆಯಲ್ಲಿ ಕಾಂಗ್ರೆಸ್ ಶೇಕಡಾವಾರು ಮತ ಗಳಿಕೆಯಲ್ಲಿ ಇಳಿತ ಕಂಡಿದೆ.

ಕುಸಿದ ಕೈ ವೋಟ್​ಬ್ಯಾಂಕ್: 1991-2004ರವರೆಗೆ ಸತತ 7 ಬಾರಿ ಗೆದ್ದಿರುವ ಸಂಸದ ಕೆ.ಎಚ್.ಮುನಿಯಪ್ಪ ಅವರ ಮತ ಗಳಿಕೆಯಲ್ಲಿ ಇಳಿತ ಕಂಡಿದೆ. 1991ರಲ್ಲಿ ಮೊದಲ ಬಾರಿ ಗೆದ್ದಾಗ ಶೇ.40.14 ಮತ ಗಳಿಸಿದ್ದರು. 2ನೇ ಸಲ ಗೆದ್ದಾಗ ಮತ ಗಳಿಕೆಯಲ್ಲಿ ಶೇ.4.24 ಏರಿಕೆ (ಶೇ.44.38) ಆದರೂ 1998ರಲ್ಲಿ ಶೇ.4.74 ಕುಸಿತ (ಶೇ.39.62 ) 1999ರಲ್ಲಿ ಶೇ.0.15 (39.47) ವೋಟ್​ಬ್ಯಾಂಕ್ ಕಳೆದುಕೊಂಡಿದ್ದರು. 2004ರಲ್ಲಿ ಮತಗಳಿಕೆಯಲ್ಲಿ ಶೇ.2.94 ಚೇತರಿಕೆ (ಶೇ. 42.41) ಕಂಡಿತು. 2009ರಲ್ಲಿ ಮತ್ತೆ ಶೇ.5.17 (ಗಳಿಕೆ ಶೇ.37.24), 2014ರಲ್ಲಿ ಶೇ.08 (ಶೇ.37.16) ಕುಸಿದಿದೆ.

ಒಟ್ಟಾರೆ 1977ರಲ್ಲಿ ಕಾಂಗ್ರೆಸ್ ಗರಿಷ್ಠವೆಂಬಂತೆ ಶೇ.55.85 ಮತ ಪಡೆದರೆ, 2014ರ ವೇಳೆಗೆ ಮತಗಳಿಕೆ ಪ್ರಮಾಣ ಶೇ.37.16ಕ್ಕೆ ತಲುಪಿದೆ. ಇದಕ್ಕೆ ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಳ ಸೇರಿ ಅನೇಕ ಕಾರಣ ಹೇಳಬಹುದಾದರೂ ಅಂಕಿ-ಅಂಶಗಳು ಕಾಂಗ್ರೆಸ್​ನ ಮತ ಕೊಯ್ಲು ಇಳಿಮುಖವಾದುದನ್ನು ತೋರಿಸುತ್ತಿವೆ.

ಏರಿಕೆಯ ನಿರೀಕ್ಷೆ: ರಾಜ್ಯದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸಂಸದ ಕೆ.ಎಚ್.ಮುನಿಯಪ್ಪ ಸ್ಪರ್ಧಿಸುತ್ತಿದ್ದು, ಜೆಡಿಎಸ್ ಬೆಂಬಲಿಸುವುದು ಅನಿವಾರ್ಯ. ಕಳೆದ ಬಾರಿ ಜೆಡಿಎಸ್ ಶೇ.32.91 ಮತ ಗಳಿಸಿತ್ತು. ಮೈತ್ರಿಯಿಂದ ಕೈ ಮತಗಳಿಕೆಯಲ್ಲಿ ಹೆಚ್ಚಳವಾಗಬಹುದಾದರೂ ಸ್ವ ಪಕ್ಷೀಯರ ಒಂದು ಬಣ ಮುನಿಯಪ್ಪ ವಿರುದ್ಧ ತಿರುಗಿ ಬಿದ್ದಿರುವುದು ಕಾಂಗ್ರೆಸ್ ಮತ ಕೊಯ್ಲಿಗೆ ಹಿನ್ನಡೆಯಾದರೂ ಅಚ್ಚರಿಯಿಲ್ಲ.

ಮೋದಿ ಅಲೆ ನಂಬಿದೆ ಬಿಜೆಪಿ: 1977ರಲ್ಲಿ ಲೋಕದಳ ಶೇ.35.07, 80ರಲ್ಲಿ ಜನತಾಪಕ್ಷ ಶೇ.23.34, 1984ರಲ್ಲಿ ಶೇ.51.92 ಮತ ಗಳಿಸಿತ್ತು. 1989ರಲ್ಲಿ ಜನತಾದಳ ಶೇ.32.21 ಮತ ಗಳಿಸಿದರೆ 1996 ಮತ್ತು 98ರಲ್ಲಿ ಜನತಾದಳ ಕ್ರಮವಾಗಿ ಶೇ. 41.95 ಹಾಗೂ ಶೇ.29.47 ಮತ ಪಡೆದಿತ್ತು. 1991ರ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಬಿಜೆಪಿ ಎದುರಾಳಿಯಾಗಿ ಶೇ.29.53 ಮತ ಪಡೆದರೆ 1999ರಲ್ಲಿ ಬಿಜೆಪಿ ಶೇ.29.32 ಮತ ಗಳಿಸಿತ್ತು. 2004ರಲ್ಲಿ ಸಾರ್ವಕಾಲಿಕ ದಾಖಲೆ ಯಾಗಿ ಶೇ.41.13 ಮತ ಪಡೆದು 2ನೇ ಸ್ಥಾನಕ್ಕೇರಿತ್ತು. 2009ರಲ್ಲಿ ಶೇ.34.75 ಮತ ಪಡೆದ ಬಿಜೆಪಿ 2014ರಲ್ಲಿ ಶೇ.23.71 ಮತ ಪಡೆದು 3ನೇ ಸ್ಥಾನಕ್ಕೆ ಕುಸಿದಿದೆ. ಈ ಬಾರಿ ಬಿಜೆಪಿ ಮತ ಗಳಿಕೆಗೆ ಮೋದಿ ಅಲೆಯನ್ನು ನಂಬಿದೆ.