ಅಂಗವಿಕಲರಿಗೆ ವಿಶೇಷ ಮತಗಟ್ಟೆ

ಚಿಕ್ಕಮಗಳೂರು; ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ವಿಶೇಷ ಮುತುವರ್ಜಿ ವಹಿಸಿರುವ ಚುನಾವಣಾ ಆಯೋಗವು ಅಂಗವಿಕಲರು ಮತದಾನದಲ್ಲಿ ಸಕ್ರಿಯವಾಗಿ ಭಾಗವಹಿಸುವ ವಾತಾವರಣ ನಿರ್ವಣಕ್ಕೆ ಕ್ರಮ ಕೈಗೊಂಡಿದೆ.

ರಾಜ್ಯದಲ್ಲಿ 4.30 ಲಕ್ಷ ಅಂಗವಿಕಲ ಮತದಾರರಿದ್ದು, ಅವರಿಗೆ ಮತದಾನಕ್ಕೆ ಬೇಕಾದ ವ್ಹೀಲ್​ಚೇರ್, ಮ್ಯಾಗ್ನಿಫೈವಿಂಗ್ ಗ್ಲಾಸ್, ಸಂಜ್ಞೆ ಸೂಚಿಸುವ ಫಲಕಗಳು, ಸಹಾಯಕರನ್ನು ಕಲ್ಪಿಸುತ್ತಿದೆ. ಜಿಲ್ಲೆಗೆರಡು ವಿಕಲಚೇತನರೇ ನಿರ್ವಹಿಸುವ ಪ್ರತ್ಯೇಕ ಬೂತ್ ರೂಪಿಸಲು ಆಯೋಗ ನಿರ್ಧರಿಸಿದೆ.

ಗ್ರಾಪಂ ಮಟ್ಟದಲ್ಲಿ ಗ್ರಾಮೀಣ ಪುನರ್​ವಸತಿ ಸೇವಕರು (ವಿಆರ್​ಡಬ್ಲ್ಯು) ಪ್ರತಿ ಬೂತ್ ಮಟ್ಟದಲ್ಲಿರುವ ಅಂಗವಿಕಲರನ್ನು ಕರೆತಂದು ಮತ ಚಲಾಯಿಸಲು ನೆರವಾಗಬೇಕಿದೆ. ಪುನರ್​ವಸತಿ ಸೇವಕರು ಗ್ರಾಮೀಣ ಮಟ್ಟದಲ್ಲಿ ನಿಗದಿತ ಸಂಭಾವನೆ ಪಡೆದು ಕಾರ್ಯನಿರ್ವಹಿಸುತ್ತಾರೆ.

ಇವಿಎಂನಲ್ಲಿ ಬ್ರೖೆಲ್ ಲಿಪಿ: ಅಂಧರಿಗೆ ಪ್ರತಿ ಇವಿಎಂನಲ್ಲೂ ಬ್ರೖೆಲ್ ಲಿಪಿ ಅಳವಡಿಸಲಾಗಿದೆ. ಆ ಮೂಲಕ ತಮಗಿಷ್ಟವಾದ ಅಭ್ಯರ್ಥಿಗೆ ಮತ ಚಲಾಯಿಸಬಹುದು. ಅಲ್ಪ ದೃಷ್ಟಿ ದೋಷಿಗಳಿಗೆ ಮ್ಯಾಗ್ನಿಫೈಯಿಂಗ್ ಗ್ಲಾಸ್ ಕೂಡ ಈ ಬಾರಿ ಕೊಡಲಾಗುತ್ತಿದೆ. ಅಂಗವಿಕಲ ಮತದಾರರು ಹೆಚ್ಚಿರುವ ಕಡೆ ಮತದಾನ, ಅಭ್ಯರ್ಥಿಗಳ ವಿವರ ಇರುವ ಸಂಜ್ಞೆ ಫಲಕಗಳನ್ನೂ ಅಳವಡಿಸಲು ಆಯೋಗ ಜಿಲ್ಲಾ ಚುನಾವಣಾಧಿಕಾರಿಗೆ ಸೂಚಿಸಿದೆ. ಮತಗಟ್ಟೆಗಳಲ್ಲಿ ರ‍್ಯಾಂಪ್ ವ್ಯವಸ್ಥೆ ಮಾಡಲಾಗಿದ್ದು, ರ‍್ಯಾಂಪ್ ಇಲ್ಲದ ಕಡೆ ವಿಆರ್​ಡಬ್ಲ್ಯುಗಳು ಮತದಾನ ಮಾಡಲು ದೈಹಿಕವಾಗಿ ಸಹಾಯ ಮಾಡಬೇಕು. ಅಂಗವಿಕಲರು ಸರದಿ ಸಾಲಿನಲ್ಲಿ ನಿಲ್ಲಿಸುವಂತಿಲ್ಲ. ಮತಗಟ್ಟೆಗೆ ಬಂದಾಗ ನೇರವಾಗಿ ಕೇಂದ್ರದೊಳಗೆ ಹೋಗಲು ಅವಕಾಶ ಮಾಡಬೇಕು ಎಂದು ಮತಗಟ್ಟೆ ಅಧಿಕಾರಿಗಳಿಗೆ ಆಯೋಗ ಸೂಚಿಸಿದೆ.

ತುಮಕೂರಿನಲ್ಲಿ ಹೆಚ್ಚು ಮತದಾರರು: ಅಂಗವಿಕಲ ಮತದಾರರು ತುಮಕೂರು ಜಿಲ್ಲೆಯಲ್ಲಿ ಅಧಿಕ ಹಾಗೂ ಬೆಂಗಳೂರಲ್ಲಿ ಕಡಿಮೆ ಇದ್ದಾರೆ. ತುಮಕೂರು ಜಿಲ್ಲೆಯಲ್ಲಿ 28,430 ಮತದಾರರಿದ್ದು, ಬೆಂಗಳೂರಿನ ನಾಲ್ಕು ಕ್ಷೇತ್ರ ಸೇರಿ 11 ಸಾವಿರ ಅಂಗವಿಕಲರು ಮತದಾರರು ನೋಂದಣಿ ಮಾಡಿಸಿದ್ದಾರೆ. ಬೆಳಗಾವಿಯಲ್ಲಿ 24,650, ಬಳ್ಳಾರಿಯಲ್ಲಿ 17,641 ಅಂಗವಿಕಲರು ನೋಂದಣಿ ಮಾಡಿಕೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 8,267 ಅಂಗವಿಕಲ ಮತದಾರರಿದ್ದಾರೆ. ಕಳೆದ ಬಾರಿ 7,430 ಮತದಾರರಿದ್ದರು. 18 ವರ್ಷದೊಳಗಿನವರು ಸೇರಿ ಜಿಲ್ಲೆಯಲ್ಲಿ ಒಟ್ಟು 31ಸಾವಿರ ಅಂಗವಿಕಲರಿದ್ದಾರೆ.

ಅಂಗವಿಕಲರಿಂದಲೇ ಮತಗಟ್ಟೆ ನಿರ್ವಹಣೆ: ಜಾಗೃತಿ ಮೂಡಿಸುವ ಸಲುವಾಗಿ ಅಂಗವಿಕಲರೇ ನಿರ್ವಹಣೆ ಮಾಡುವ ಮತಗಟ್ಟೆ ಸ್ಥಾಪನೆಗೆ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಇಂಥ 26 ವಿಶೇಷ ಮತಗಟ್ಟೆ ಕೇಂದ್ರ ಸ್ಥಾಪಿಸಲಾಗಿತ್ತು. ಇದರಲ್ಲಿ ಮತಗಟ್ಟೆ ಅಧಿಕಾರಿಗಳಿಂದ ಇತರೆ ಎಲ್ಲ ಕಾರ್ಯಗಳನ್ನೂ ಅಂಗವಿಕಲರೇ ನಿರ್ವಹಣೆ ಮಾಡಿದ್ದರು. ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ಅಂಗವಿಕಲರು ನಿರ್ವಹಿಸುವ ಮತಗಟ್ಟೆ ಕೇಂದ್ರ ಹೆಚ್ಚು ಮಾಡಲು ಆಯೋಗ ಚಿಂತಿಸಿದೆ. ಒಂದು ಜಿಲ್ಲೆಯಲ್ಲಿ ಕನಿಷ್ಠ ಎರಡು ಇಂಥ ಮತಗಟ್ಟೆ ಸ್ಥಾಪನೆ ಮಾಡಲು ಈಗ ಆಯೋಗ ಜಿಲ್ಲಾ ಚುನಾವಣಾಧಿಕಾರಿಗೆ ಸೂಚಿಸಿದೆ.

ಕಳೆದ ಚುನಾವಣೆಯಲ್ಲಿ ವಿಜಯಪುರ, ಮಂಡ್ಯ, ಕೊಡಗು, ಮೈಸೂರಿನಲ್ಲಿ ಅಂಗವಿಕಲರೇ ನಿರ್ವಹಿಸುವ ಮತಗಟ್ಟೆ ಸ್ಥಾಪನೆ ಮಾಡಿದ್ದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.