ಮಣ್ಣು ಕುಸಿದು ವ್ಯಕ್ತಿ ಸ್ಥಳದಲ್ಲೇ ಸಾವು

ಲಕ್ಷ್ಮೇಶ್ವರ: ಶೆಟ್ಟಿಕೇರಿಯಲ್ಲಿ ಅಕ್ರಮವಾಗಿ ಮರಳು ತೆಗೆಯುವ ಕಾರ್ಯದಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬರು ಮಣ್ಣಿನ ಮೇಲ್ಪದರು ಕುಸಿದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾಗಡಿ ಗ್ರಾಮದ ಮಂಜುನಾಥ ಕದಡಿ (40) ಎಂಬುವವರೆ ಮೃತ ದುರ್ದೈವಿ.

ಶೆಟ್ಟಿಕೇರಿ ಕೆರೆಯಲ್ಲಿ ಮರಳನ್ನು ಅಕ್ರಮವಾಗಿ ತೆಗೆದು ಟ್ರ್ಯಾಕ್ಟರ್​ನಲ್ಲಿ ತುಂಬುತ್ತಿದ್ದ ವೇಳೆಯಲ್ಲಿ ಮೇಲ್ಪದರು ಮಣ್ಣಿನ ಗುಡ್ಡೆ ಕುಸಿದು ಬಿದ್ದಿದೆ. ಮಣ್ಣಿನ ಅಡಿ ಸಿಲುಕಿದ ಮಂಜುನಾಥನನ್ನು ಅಲ್ಲಿದ್ದವರು ಪ್ರಯಾಸ ಪಟ್ಟು ತೆಗೆಯುವಷ್ಟರಲ್ಲಿ ಕಿವಿ, ಮೂಗು, ಬಾಯಿಯಿಂದ ರಕ್ತಸ್ರಾವವಾಗಿ ತಲೆಗೆ ಬಲವಾದ ಪೆಟ್ಟು ಬಿದ್ದು ಆತನ ಸ್ಥಿತಿ ಗಂಭೀರವಾಗಿತ್ತು.

ಮಣ್ಣಿನಡಿ ಸಿಲುಕಿದ್ದ ಮಂಜುನಾಥನನ್ನು ಲಕ್ಷ್ಮೇಶ್ವರದ ಖಾಸಗಿ ಆಸ್ಪತ್ರೆಗೆ ಸೇರಿಸುವಷ್ಟರಲ್ಲಾಗಲೇ ವ್ಯಕ್ತಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಗ್ಗಿಲ್ಲದೆ ನಡೆದಿದೆ ಅಕ್ರಮ ಮರಳು ದಂಧೆ:

ತಾಲೂಕಿನ ಶೆಟ್ಟಿಕೇರಿ ಕೆರೆಯಲ್ಲಿ ಮರಳು ಅಕ್ರಮ ದಂಧೆ ಎಗ್ಗಿಲ್ಲದೆ ನಡೆದಿದೆ. ಈ ಕೆರೆ ಸುಮಾರು 217 ಎಕರೆ ವಿಸ್ತಾರವಿದ್ದು ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. ತಾಲೂಕಿನ ಗೊಜನೂರ, ಅಕ್ಕಿಗುಂದ, ಚನ್ನಪಟ್ಟಣ, ಶೆಟ್ಟಿಕೇರಿ, ಬಟ್ಟೂರ, ಸಂಕದಾಳ, ಹುಲ್ಲೂರ, ಪು.ಬಡ್ನಿ. ಹುಲ್ಲೂರ, ಅಮರಾಪುರ, ಕೊಕ್ಕರಗೊಂದಿ, ಬೂದಿಹಾಳ, ತಂಗೋಡ, ಗೋವನಕೊಪ್ಪ ಸೇರಿ ಅನೇಕ ಗ್ರಾಮಗಳಲ್ಲಿನ ಹಳ್ಳ, ಹಳ್ಳದ ಪಾತ್ರದ ಜಮೀನು, ಸ್ಮಶಾನಭೂಮಿ, ಕೆರೆಗಳು ಅಕ್ರಮ ದಂಧೆಕೋರರ ಕೆಂಗಣ್ಣಿಗೆ ಬಲಿಯಾಗುತ್ತಿವೆ.

ಜೀವದ ಆಸೆ ಬಿಟ್ಟು ರಾತ್ರೋರಾತ್ರಿ ಹೆಚ್ಚಿನ ಕೂಲಿಗಾಗಿ ಟ್ರ್ಯಾಕ್ಟರ್​ನಲ್ಲಿ ಮರಳು ತೆಗೆಯಲು ಹೋಗುತ್ತಾರೆ. ಮರಳು ಅಕ್ರಮ ದಂಧೆಯ ಹಿಂದೆ ಸಾಕಷ್ಟು ಸಾವು, ನೋವು, ಗಲಾಟೆ, ವ್ಯಾಜ್ಯಗಳು ಸಾಮಾನ್ಯವಾಗಿದೆ. ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮರಳು, ಮಣ್ಣು, ಕಲ್ಲು ಗಣಿಗಾರಿಕೆಗೆ ಬ್ರೇಕ್ ಹಾಕಬೇಕಾದ ಪೊಲೀಸ್, ಕಂದಾಯ, ಆರ್​ಟಿಒ, ಗಣಿ ಮತ್ತು ಭೂಗರ್ಭ ಇಲಾಖೆ ಅಧಿಕಾರಿಗಳು ಒಬ್ಬರ ಮೇಲೊಬ್ಬರು ಬೊಟ್ಟು ಮಾಡುತ್ತ ಜಾರಿಕೊಳ್ಳುತ್ತಿದ್ದಾರೆ. ಇದು ಮರಳು ಅಕ್ರಮ ಸಾಗಾಟಕಾರರಿಗೆ ಎಡೆ ಮಾಡಿಕೊಟ್ಟಂತಾಗುತ್ತಿದೆ. ಮರಳು ಜನಸಾಮಾನ್ಯರಿಗೆ ಅವಶ್ಯವಾಗಿದೆ. ಆದರೆ, ಸರ್ಕಾರದ ಅವೈಜ್ಞಾನಿಕ ಮರಳು ನೀತಿಗಳು ಅಕ್ರಮ ಕೂಟಕ್ಕೆ ಕಾರಣವಾಗಿವೆ.