ಮಣ್ಣಿನ ಮಡಕೆ, ಎಷ್ಟೊಂದು ಬೇಡಿಕೆ!

ಗದಗ: ಅನಾದಿಕಾಲದಿಂದಲೂ ಬಳಕೆಯಾಗುತ್ತಿರುವ ಬಡವರ ಫ್ರಿಜ್​ಗೆ ಮತ್ತೆ ಭಾರಿ ಬೇಡಿಕೆ ಕುದುರಿದೆ. ಫ್ರಿಜ್, ಎಸಿ, ಕೂಲರ್​ಗಳ ನಡುವೆಯೂ ತನ್ನ ಬೇಡಿಕೆ ಉಳಿಸಿಕೊಂಡಿರುವ ಮಣ್ಣಿನ ಮಡಕೆಗಳು ಆರೋಗ್ಯಕ್ಕೂ ಪೂರಕವಾಗಿವೆ.

ದಿನೇ ದಿನೆ ಬಿಸಿಲಿನ ತಾಪಮಾನ ಏರುತ್ತಿದೆ. ತಂಪಾದ ನೀರಿನಿಂದ ದಾಹ ನೀಗಿಸಿಕೊಳ್ಳಬೇಕೆನಿಸುತ್ತಿದೆ. ಹೀಗಾಗಿ, ಜನಸಾಮಾನ್ಯರು ಮಣ್ಣಿನ ಮಡಕೆಗಳ ಮೊರೆ ಹೋಗುತ್ತಿದ್ದಾರೆ. ಬಡವರ ಫ್ರಿಜ್ ಅಂತಲೇ ಪ್ರಸಿದ್ಧವಾದ ಮಣ್ಣಿನಿಂದ ತಯಾರಿಸಿದ ಮಡಕೆ, ಗಡಿಗೆ, ಬಿಂದಿಗೆ ಹಾಗೂ ತತ್ರಾಣಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಕಡಿಮೆ ಬೆಲೆ ಹಾಗೂ ಆರೋಗ್ಯಕ್ಕೂ ಪೂರಕವಾಗಿರುವ ವಿವಿಧ ಬಗೆಯ ಮಡಕೆಗಳು ಸಾರ್ವಜನಿಕರನ್ನು ಸೆಳೆಯುತ್ತಿವೆ.

ಬೇಸಿಗೆ ಅವಧಿಯಾಗಿದ್ದರಿಂದ ವಿದ್ಯುತ್ ಪದೇ ಪದೆ ಕೈಕೊಡುತ್ತಿದೆ. ಜತೆಗೆ ಫ್ರಿಜ್​ನಲ್ಲಿನ ತಂಪು ನೀರು ಆರೋಗ್ಯಕ್ಕೆ ಸರಿಯಲ್ಲ ಎಂಬ ವೈದ್ಯರ ಸಲಹೆಯಿಂದ ಗದಗ-ಬೆಟಗೇರಿ ಅವಳಿನಗರದ ಜನತೆ ಮಣ್ಣಿನ ಮಡಕೆ ಖರೀದಿಗೆ ಮುಂದಾಗಿದ್ದಾರೆ.

ಲಕ್ಕುಂಡಿ, ಅಡವಿಸೋಮಾಪುರ, ಹೊಂಬಳ ಸೇರಿದಂತೆ ತಾಲೂಕಿನ ಸುತ್ತಲಿನ ಗ್ರಾಮಗಳ ಕುಂಬಾರ ಕುಟುಂಬಗಳು ನಗರದ ಹಳೇ ಬಸ್ ನಿಲ್ದಾಣ ರಸ್ತೆ, ತೋಂಟದಾರ್ಯ ಮಠದ ರಸ್ತೆ, ಗಂಗಿಮಡಿ ಹಾಗೂ ಬೆಟಗೇರಿಯಲ್ಲಿ ವಿವಿಧ ಗಾತ್ರ ಮತ್ತು ಆಕಾರಗಳ ಮಡಕೆಗಳನ್ನು ಮಾರಾಟ ಮಾಡುತ್ತಿದ್ದಾರೆ.

ವಿವಿಧ ದರ:ಮಡಕೆಗಳ ಗಾತ್ರಕ್ಕೆ ತಕ್ಕಂತೆ ದರ ನಿಗದಿಪಡಿಸಲಾಗಿದೆ. ನಲ್ಲಿ ಹೊಂದಿದ ಮಡಕೆಗೆ 150 ರಿಂದ 400 ರೂ., ಸಾಧಾರಣ ಮಡಕೆ, ಗಡಿಗೆ ಹಾಗೂ ಬಿಂದಿಗೆಗಳಿಗೆ 100ರಿಂದ 200 ರೂ. ಮತ್ತು ತತ್ರಾಣಿಗೆ 150ರಿಂದ 200 ರೂ. ದರ ನಿಗದಿ ಮಾಡಲಾಗಿದೆ.

ನೀರು ಒದಗಿಸುವ ವ್ಯವಸ್ಥೆ: ತಂಪಾದ ನೀರು ಕುಡಿಯಲು ಸಾರ್ವಜನಿಕರು ಮಡಿಕೆ ಖರೀದಿಗೆ ಮುಂದಾಗಿದ್ದರೆ, ಕೆಲ ಸಂಘ-ಸಂಸ್ಥೆಯವರು, ಆಟೋ ಚಾಲಕರ ಸಂಘಗಳು ವಿವೇಕಾನಂದ ನಗರ, ಕೆ.ಸಿ. ರಾಣಿ ರಸ್ತೆ, ವೀರಶೈವ ಲೈಬ್ರರಿ, ಮಹಾತ್ಮಾ ಗಾಂಧಿ ವೃತ್ತ, ಮಹೇಂದ್ರಕರ್ ವೃತ್ತ, ಹಳೇ ಜಿಲ್ಲಾಧಿಕಾರಿ ಕಚೇರಿ ಆಟೋ ನಿಲ್ದಾಣದ ಹತ್ತಿರ ಮಡಕೆಯಿಟ್ಟು ತಂಪಾದ ನೀರು ಒದಗಿಸುವ ವ್ಯವಸ್ಥೆ ಮಾಡಿದ್ದಾರೆ.

ಮಡಕೆ ತಯಾರಿಸಲು ಬಳಸುವ ಮಣ್ಣು ಸ್ಥಳೀಯವಾಗಿ ದೊರೆಯದ ಕಾರಣ ಹಾವೇರಿ, ರಾಣೆಬೆನ್ನೂರು, ಬಳ್ಳಾರಿ, ಹೊಸಪೇಟೆಯಿಂದ ಸಿದ್ಧ ಮಡಕೆಗಳನ್ನು ತರುತ್ತಿದ್ದೇವೆ. ಬೇಸಿಗೆ ಹಿನ್ನೆಲೆಯಲ್ಲಿ ಮಣ್ಣಿನ ಮಡಕೆ ಕೊಳ್ಳಲು ಗ್ರಾಹಕರು ಮುಂದಾಗಿದ್ದು, ದಿನಕ್ಕೆ 8ರಿಂದ 10 ಮಡಕೆಗಳು ಮಾರಾಟವಾಗುತ್ತಿವೆ.
> ಗುರು ಕೆರಿಯವರ, ಮಡಕೆ ವ್ಯಾಪಾರಿ

ಫ್ರಿಜ್​ನಲ್ಲಿರುವ ತಂಪು ನೀರು ಕುಡಿದರೆ, ಗಂಟಲು ನೋವು, ನೆಗಡಿ, ಕೆಮ್ಮಿನಂತಹ ತೊಂದರೆ ಉಂಟಾಗುತ್ತವೆ. ಪ್ರತಿನಿತ್ಯ ಮಡಕೆಯಲ್ಲಿನ ತಂಪಾದ ನೀರು ಕುಡಿಯುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ. ಮುಖ್ಯವಾಗಿ ಪಚನಕ್ರಿಯೆ ಸರಳವಾಗುತ್ತದೆ.
| ಡಾ. ವೀರಯ್ಯ ಹಿರೇಮಠ, ಆಯುರ್ವೆದ ವೈದ್ಯ