ಕುಶಾಲನಗರ: ಆ.31ರಂದು ನಡೆಯಲಿರುವ
ಗೌರಿ-ಗಣೇಶ ಹಬ್ಬಕ್ಕೆ ಪೂರ್ವಭಾವಿಯಾಗಿ ಸಮೀಪದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಹಾಗೂ ಎನ್‌ಎಸ್‌ಎಸ್ ಘಟಕದ ವತಿಯಿಂದ ಎಸ್‌ಡಿಎಂಸಿ ಹಾಗೂ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಪರಿಸರ ಸ್ನೇಹಿ ಗಣೇಶೋತ್ಸವದಲ್ಲಿ ವಿದ್ಯಾರ್ಥಿಗಳು ಜೇಡಿಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಪ್ರದರ್ಶಿಸಲಾಯಿತು.
ಕೊಡಗು ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ ವತಿಯಿಂದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಘಟಕ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ‘ನಮ್ಮ ನಡೆ ಹಸಿರೆಡೆಗೆ’ ಜನ ಜಾಗೃತಿ ಜಾಥಾದಲ್ಲಿ ವಿದ್ಯಾರ್ಥಿಗಳು ತಾವು ತಯಾರಿಸಿದ ಮಣ್ಣಿನ ಗಣೇಶ ಮೂರ್ತಿಗಳು ಹಾಗೂ ಪರಿಸರ ಸ್ನೇಹಿ ಗಣೇಶ ಅಭಿಯಾನದ ಭಿತ್ತಿಪತ್ರಗಳನ್ನು ಹಿಡಿದು ಜಾಥಾ ನಡೆಸಿ ಗ್ರಾಮಸ್ಥರ ಗಮನ ಸೆಳೆದರು.
ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಯ ಮಹತ್ವ ಕುರಿತು ಮಾಹಿತಿ ನೀಡಿ ಪರಿಸರ ಪ್ರತಿಜ್ಞೆ ಬೋಧಿಸಿದ ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್ ನ ಜಿಲ್ಲಾ ನೋಡಲ್ ಅಧಿಕಾರಿಯೂ ಆದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಗಣೇಶ ಹಬ್ಬದ ಸಂದರ್ಭದಲ್ಲಿ ಪಿಒಪಿ ಹಾಗೂ ರಾಸಾಯನಿಕ ಮಿಶ್ರಿತ ಗಣೇಶ ಮೂರ್ತಿಯನ್ನು ಬಳಸದೆ ಪರಿಸರ ಸ್ನೇಹಿ ಹಾಗೂ ನೈಸರ್ಗಿಕವಾಗಿ ಮಣ್ಣಿನ ಮೂರ್ತಿ ತಯಾರಿಸಿ ಪ್ರತಿಷ್ಠಾಪಿಸುವ ಮೂಲಕ ಮಾಲಿನ್ಯ ತಡೆಗಟ್ಟಲು ಶಾಲೆಗಳ ಇಕೋ ಕ್ಲಬ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆಯ ಬಗ್ಗೆ ಮಾಹಿತಿ ನೀಡಿದ ಇಕೋ ಕ್ಲಬ್‌ನ ಶಿಕ್ಷಕಿ ಬಿ.ಡಿ.ರಮ್ಯಾ, ಮಾಲಿನ್ಯ ಮುಕ್ತ ಹಬ್ಬ ಆಚರಣೆಗೆ ಎಲ್ಲರೂ ಪಣತೊಡಬೇಕು ಎಂದರು.
ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ದಯಾನಂದ ಪ್ರಕಾಶ್, ಶಾಲಾ ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಅನ್ಸಿಲಾ ರೇಖಾ, ವೈ.ಎಂ.ಸರಸ್ವತಿ, ಸಿಬ್ಬಂದಿ ಉಷಾ, ವಿದ್ಯಾರ್ಥಿಗಳು ಇದ್ದರು.
ಗಣೇಶೋತ್ಸವ ಜಾಗೃತಿ ಜಾಥಾ: ಕೂಡುಮಂಗಳೂರು ಮತ್ತು ಕೂಡ್ಲೂರು ಗ್ರಾಮದಲ್ಲಿ ನಡೆದ ಗಣೇಶೋತ್ಸವ ಜಾಗೃತಿ ಜಾಥಾದಲ್ಲಿ ಮಕ್ಕಳು ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆಗೆ ಸಂಬಂಧಿಸಿದಂತೆ ರಾಸಾಯನಿಕ ಮುಕ್ತ ಮಣ್ಣಿನ ಗಣೇಶ ಮೂರ್ತಿಯನ್ನು ಬಳಸಿ ಎಂದು ಜನರಲ್ಲಿ ಜಾಗೃತಿ ಮೂಡಿಸಿದರು.
ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸೋಣ ಬನ್ನಿ, ಬಣ್ಣದ ಗಣೇಶ ತ್ಯಜಿಸಿ, ಮಣ್ಣಿನ ಗಣಪ ಬಳಸಿ- ಪರಿಸರ ಸಂರಕ್ಷಿಸಿ ಎಂಬಿತ್ಯಾದಿ ಘೋಷಣೆಗಳನ್ನು ವಿದ್ಯಾರ್ಥಿಗಳು ಕೂಗಿ ಜನರ ಗಮನ ಸೆಳೆದರು.