ಮಣಕವಾಡದ ಮಾಣಿಕ್ಯಕ್ಕೆ ಪಟ್ಟಾಧಿಕಾರ

ಹುಬ್ಬಳ್ಳಿ: ತಮ್ಮ ಆಕರ್ಷಕ ಪ್ರವಚನ ಎಂಬ ಅಸ್ತ್ರದ ಮೂಲಕ ನೂರಾರು ಹಳ್ಳಿ, ಪಟ್ಟಣದ ಭಕ್ತರ ಹೃದಯ ಸಾಮ್ರಾಜ್ಯ ಗೆದ್ದು ಈವರೆಗೆ ಶ್ರೀ ಸಿದ್ಧರಾಮ ದೇವರಾಗಿ ಪ್ರಸಿದ್ಧಿ ಪಡೆದವರು ಈಗ ಮಣಕವಾಡದ ಶ್ರೀ ಗುರು ಅನ್ನದಾನೀಶ್ವರ ದೇವ ಮಂದಿರ ಮಹಾಮಠದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿಯಾಗಿ ಅಭಿದಾನ ಪಡೆದರು.

ಅಣ್ಣಿಗೇರಿ ತಾಲೂಕಿನ ಮಣಕವಾಡದ ಭವ್ಯ ವೇದಿಕೆಯಲ್ಲಿ ಸೋಮವಾರ ನಡೆದ ನಿರಂಜನ ಚರಪಟ್ಟಾಧಿಕಾರ ಮಹೋತ್ಸವದ ಅದ್ದೂರಿ ಸಮಾರಂಭದಲ್ಲಿ ನಿಡಸೋಸಿ ದುರದುಂಡೇಶ್ವರ ಸಿದ್ಧಸಂಸ್ಥಾನಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿಯವರ ಅಮೃತ ಹಸ್ತದಿಂದ ನೂತನ ಅಭಿದಾನ ನೀಡಲಾಯಿತು.

ಅಭಿದಾನ ಸ್ವೀಕರಿಸಿದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ, ತಲೆ ಮೇಲೆ ಬಿಳಿ ಕಂಬಳಿ ಹೊದ್ದು, ಕೈಯಲ್ಲಿ ಬೆತ್ತ, ಹೆಗಲಿಗೆ ಜೋಳಿಗೆ ಹಾಕಿಕೊಂಡು ಭಕ್ತರ ಹಷೋದ್ಘಾರಗಳ ಮಧ್ಯೆ ನಿಡಸೋಸಿ ಶ್ರೀಗಳೊಂದಿಗೆ ಶೂನ್ಯ ಸಿಂಹಾಸನಾರೋಹಣ ಮಾಡಿದರು.

ಭಕ್ತರ ತಾಪ ಕಳೆಯಬೇಕು: ಈ ಸಂದರ್ಭದಲ್ಲಿ ಮಾತನಾಡಿದ ಅಭಿನವ ಮೃತ್ಯುಂಜಯ ಸ್ವಾಮೀಜಿ, ಧರ್ಮ ಕಾರ್ಯಗಳಿಗೆ ಹೆಸರಾದ ಮಣಕವಾಡ ಮಠಕ್ಕೆ ಬಂದಿದ್ದು ನನ್ನ ಪುಣ್ಯ. ಭಕ್ತರ ತಾಪ ಕಳೆಯುವವರೇ ನಿಜವಾದ ಸ್ವಾಮೀಜಿ ಎಂದು ನಾನು ತಿಳಿದುಕೊಂಡಿದ್ದೇನೆ ಎಂದರು. ತಮ್ಮ ಬಾಲ್ಯದ ಜೀವನ, ನಂತರದಲ್ಲಿ ಮನೆ ಬಿಟ್ಟಿದ್ದು, ಸ್ವಾಮೀಜಿಗಳ ಸಾಂಗತ್ಯದಿಂದ ತಾವು ಈ ಮಟ್ಟಕ್ಕೆ ಏರಿದ ಹಳೆಯ ನೆನಪುಗಳನ್ನು ಬಿಚ್ಚಿಟ್ಟ ಶ್ರೀಗಳು, ಜನರ ಮಧ್ಯೆ ಕುಳಿತು ಅವರ ಕಷ್ಟ ನಷ್ಟ ಅರಿತರೆ ಮಾತ್ರ ಒಬ್ಬ ಒಳ್ಳೆಯ ಸ್ವಾಮಿಯಾಗಲು ಸಾಧ್ಯ. ಪೀಠದ ಬದಲು ಜನರ ಮಧ್ಯದಲ್ಲಿ ಕುಳಿತರೆ ಅವರೇ ನಮ್ಮನ್ನು ಬೆಳೆಸುತ್ತಾರೆ ಎಂದರು.

ಗುರು ಪರಂಪರೆ

ಶಿಷ್ಯನನ್ನು ಗುರುವನ್ನಾಗಿ ಸುವುದು, ಆತನನ್ನು ತನ್ನ ಸ್ವರೂಪಕ್ಕೆ ಕೊಂಡೊಯ್ಯುವ ಪರಂಪರೆ ವಿರಕ್ತ ಮಠಗಳಲ್ಲಿದೆ ಎಂದು ನಿಡಸೋಸಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು. ಹೊಸಳ್ಳಿಯ ಬೂದೀಶ್ವರ ಸ್ವಾಮೀಜಿ, ಮುನವಳ್ಳಿಯ ಮುರುಘೕಂದ್ರ ಸ್ವಾಮೀಜಿ, ಅಥಣಿಯ ಪ್ರಭುಚೆನ್ನಬಸವ ಸ್ವಾಮೀಜಿ, ನವಲಗುಂದ ಗವಿಮಠ ಬಸವಲಿಂಗ ಸ್ವಾಮೀಜಿ, ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಸದ ಪ್ರಲ್ಹಾದ ಜೋಶಿ, ಎಸ್.ಎಫ್. ನಿರಂಜನಗೌಡರು, ಪಿ.ಎಸ್. ಪಾಟೀಲ ಇದ್ದರು. ಶೇಗುಣಸಿ ಮಹಾಂತ ದೇವರು ಕಾರ್ಯಕ್ರಮ ನಿರೂಪಿಸಿದರು. ಸಿದ್ಧರಾಮ ದೇವರ ಪೂರ್ವಾಶ್ರಮದ ತಂದೆ- ತಾಯಿ, ಇಂದಿನಿಂದ ನೀವು ಜಗತ್ತಿನ ಮಗ ಎಂದು ದೀರ್ಘದಂಡ ನಮಸ್ಕಾರ ಸಲ್ಲಿಸಿ ಅವರನ್ನು ಸಮಾಜಕ್ಕೆ ಅರ್ಪಿಸಿದರು.