ಮಡಿವಾಳ ಪಕ್ಷಿ oriental magpie robin (Copsychus saularis)

| ಸುನೀಲ್ ಬಾರ್ಕರು

ಭಾರತದೆಲ್ಲೆಡೆ ಕಂಡುಬರುವ ಕಪ್ಪುಬಿಳಪು ಬಣ್ಣಗಳ ಸಮಾಗಮದ ಈ ಪಕ್ಷಿಯು ಉದ್ಯಾನವನಗಳಲ್ಲಿ, ತೋಟಗಳಲ್ಲೂ ಅರಣ್ಯಗಳಲ್ಲೂ ಕಾಣಬಹುದು. ಗುಬ್ಬಚ್ಚಿಗಳಿಗಿಂತ ತುಸು ದೊಡ್ಡದಾಗಿರುವ ಮಡಿವಾಳಪಕ್ಷಿಗಳಲ್ಲಿ ಗಂಡುಗಳಿಗೆ ತಲೆಯಿಂದ ಎದೆಯವರೆಗೆ ಕಪ್ಪು ಹಾಗೂ ಅದರ ಕೆಳಗೆ ಬಾಲದ ತುದಿಯವರೆಗೆ ಬಿಳಿಯ ಬಣ್ಣವಿರುತ್ತದೆ. ಬೆನ್ನು ಪೂರ್ತಿ ಕಪ್ಪು ಬಣ್ಣ ಹೊಂದಿದ್ದು, ಭುಜದ ಭಾಗದಲ್ಲಿ ಬಿಳಿಯ ಪಟ್ಟಿಯಿದೆ. ಹೆಣ್ಣುಗಳಿಗೆ ತಲೆಯಿಂದ ಎದೆಯವರೆಗೆ ಬೂದಿಬಣ್ಣವಿರುತ್ತದೆ. ಭಾರತದ ಉದ್ದಗಲದಲ್ಲಿ ಕಂಡು ಬರುವ ಉದ್ದ ಬಾಲದ ಈ ಹಕ್ಕಿ ಹಾಡುವಾಗಲೆಲ್ಲ ಅದರ ಬಾಲ ನೆಟ್ಟಗೆ ಎದ್ದು ನಿಲ್ಲುತ್ತದೆ. ಈ ಪಕ್ಷಿಯ ಬಣ್ಣಗಳಲ್ಲಿ ಸ್ವಲ್ಪ ಮಟ್ಟಿನ ವೈವಿಧ್ಯತೆ ಕಂಡುಬರುತ್ತದೆ. ಪುಟ್ಟ ಹುಳುಗಳು, ಕ್ರಿಮಿ ಕೀಟಗಳು, ಮಕರಂದ, ಪುಟ್ಟ ಮೀನುಗಳು ಇವುಗಳ ಆಹಾರ. ಈ ಮೊದಲು ಶಿಳ್ಳಾರಗಳ ಗುಂಪಿಗೆ ಸೇರಿಸಲಾಗಿದ್ದ ಇವುಗಳನ್ನೀಗ ನೊಣಹಿಡುಕಗಳಾಗಿ ಪ್ರತ್ಯೇಕಿಸಲಾಗಿದೆ. ಇಂಪಾಗಿ ಹಾಡುವುದಷ್ಟೇ ಅಲ್ಲದೆ, ಬೇರೆ ಹಕ್ಕಿಗಳ ಹಾಡುಗಳನ್ನು ಅನುಕರಿಸುವುದರಲ್ಲಿ ಮಡಿವಾಳ ಪಕ್ಷಿಯು ಪ್ರಸಿದ್ಧವಾಗಿದೆ. ತನ್ನ ಕಂಠಗಾರಿಕೆಯನ್ನು ಸನ್ನಿವೇಶಕ್ಕೆ ತಕ್ಕಂತೆಯೆ ಬದಲಿಸಿ ಉಳಿದ ಹಕ್ಕಿಗಳನ್ನು ಎಚ್ಚರಿಸುವುದರಲ್ಲಿ ಈ ಪಕ್ಷಿಯು ಸಿದ್ಧಹಸ್ತ. ಮಾರ್ಚ್ ನಿಂದ ಜುಲೈ ತಿಂಗಳಲ್ಲಿ ಸಂತಾನಾಭಿವೃದ್ಧಿಗೆ ತೊಡಗುವ ಇವುಗಳಲ್ಲಿ ಹೆಣ್ಣು ಗೂಡಿನಲ್ಲೇ ಇದ್ದು ಮರಿಗಳ ಆರೈಕೆ ನೋಡಿಕೊಂಡರೆ, ಗಂಡು ಉಳಿದ ಬೇಟೆಗಾರ ಪಕ್ಷಿಗಳಿಂದ ಗೂಡನ್ನು ರಕ್ಷಿಸುವ ಕೆಲಸ ಮಾಡುತ್ತದೆ.

ಬಾಂಗ್ಲಾದೇಶದ ರಾಷ್ಟ್ರೀಯ ಪಕ್ಷಿಯಾಗಿರುವ ಮಡಿವಾಳ ಪಕ್ಷಿಯ ಹೆಸರಿನಲ್ಲಿ ಢಾಕಾದ ಪ್ರಮುಖ ಚೌಕವಿದೆ. ಬಾಂಗ್ಲಾದ ನೋಟುಗಳಲ್ಲೂ ಇವುಗಳನ್ನು ನಾವು ಕಾಣಬಹುದು. ಈ ಪಕ್ಷಿಯ ಕುರಿತು ರಷ್ಯಾದಲ್ಲಿ ಅನೇಕ ರೀತಿಯ ನಂಬಿಕೆಗಳಿವೆ. ಒಂಟಿಯಾಗಿರುವ ಮಡಿವಾಳ ಕಂಡಲ್ಲಿ ಅಲ್ಲಿ ಜನ ನಮಸ್ಕರಿಸುತ್ತಾರೆ. ಕಾರಣವಿಷ್ಟೆ ಸದಾ ಜತೆಯಾಗಿರುವ ಮಡಿವಾಳ ಪಕ್ಷಿಗಳು ಒಂಟಿಯಾಗಿದೆ ಎಂದರೆ ಅದರ ಸಂಗಾತಿಯ ಅಗಲುವಿಕೆಯ ದುಃಖ ದಲ್ಲಿ ಕೆಟ್ಟಶಾಪವನ್ನು ನೀಡುತ್ತದೆ. ಹಾಗಾಗಿ ನಮಸ್ಕರಿಸಿದರೆ ಅದು ಖುಷಿಯಾಗಿರುತ್ತದೆ ಎಂಬ ನಂಬಿಕೆ ಅವರಲ್ಲಿದೆ. ಅದಕ್ಕೆ ವಿರುದ್ಧವಾಗಿ ಚೀನಾದಲ್ಲಿ ಒಂಟಿ ಮಡಿವಾಳ ಪಕ್ಷಿಯು ಶುಭ ಸಂಕೇತವಂತೆ. ಇನ್ನು ಕೆಲ ನಂಬಿಕೆಗಳ ಪ್ರಕಾರ ಇದೊಂದು ಶಾಪಗ್ರಸ್ತ ಪಕ್ಷಿ. ಏಕೆಂದರೆ ಏಸುವನ್ನು ಶಿಲುಬೆಗೇರಿಸಿದಾಗ ಎಲ್ಲ ಪಕ್ಷಿಗಳು ಆತನನ್ನು ಸಂತೈಸಲು ಹಾಡಿದವಂತೆ. ಆದರೆ ಮಡಿವಾಳ ಮಾತ್ರ ಹಾಡಿರಲಿಲ್ಲವಂತೆ ಎಂಬ ಕತೆಯೂ ಇದೆ.

Leave a Reply

Your email address will not be published. Required fields are marked *