ಮಡಿಕೇರಿ: ನಗರದ ಜನತೆಗೆ ಮೂಲಸೌಲಭ್ಯ ಕಲ್ಪಿಸುವಲ್ಲಿ ನಗರಸಭೆ ವಿಫಲವಾಗಿದೆ ಎಂದು ಆರೋಪಿಸಿ ಮಡಿಕೇರಿ ರಕ್ಷಣಾ ವೇದಿಕೆಯ ಸದಸ್ಯರು ನಗರದ ಪ್ರಮುಖ ಬೀದಿಗಳಲ್ಲಿ ಶುಕ್ರವಾರ ನಗರಸಭೆಯ ಶವಯಾತ್ರೆ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಡಿಕೇರಿ ನಗರಸಭೆ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಎಷ್ಟು ಬಾರಿ ಮನವಿ ಸಲ್ಲಿಸಿದರೂ ರಸ್ತೆ ದುರಸ್ತಿ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಆರೋಪಿಸಿದ ಪ್ರತಿಭಟನಾನಿರತರು, ನಗರಸಭೆ ಆಡಳಿತದ ವಿರುದ್ಧ ಧಿಕ್ಕಾರ ಕೂಗಿದರು.
ನಗರದ 23 ವಾರ್ಡ್ಗಳಿಂದ ಸಂಗ್ರಹಿಸುತ್ತಿರುವ ಕಸವನ್ನು ವೈಜ್ಞಾನಿಕ ರೀತಿಯಲ್ಲಿ ವಿಂಗಡಿಸಿ ವಿಲೇವಾರಿ ಮಾಡುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ. ಘನ ತ್ಯಾಜ್ಯ ವಿಂಗಡಿಸುವ ಯಂತ್ರೋಪಕರಣಗಳು ದುಸ್ಥಿತಿಯಲ್ಲಿದ್ದು ತುಕ್ಕು ಹಿಡಿಯುತ್ತಿವೆ. ಇದರಿಂದ ಪ್ರವಾಸಿಗರು ಸೇರಿ ಸ್ಥಳೀಯರಿಗೂ ಕಿರಿಕಿರಿಯಾಗುತ್ತಿದೆ. ಹೋಟೆಲ್ ಹಾಗೂ ರೆಸಾರ್ಟ್ಗಳ ತ್ಯಾಜ್ಯವೆಲ್ಲ ನಗರದಿಂದ ಅನತಿ ದೂರದಲ್ಲಿರುವ ಸ್ಟೋನ್ಹಿಲ್ ಬೆಟ್ಟದಲ್ಲಿ ಸಂಗ್ರಹವಾಗಿ ಕಸದ ರಾಶಿಯ ಗಾತ್ರ ಹೆಚ್ಚುತ್ತಿದ್ದರೂ ನಗರಸಭೆ ಅಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ ಎಂದು ವೇದಿಕೆ ಸದಸ್ಯರು ಅಕ್ರೋಶವ್ಯಕ್ತಪಡಿಸಿದರು.
ಮುಂದಿನ ದಿನದಲ್ಲಿ ಈ ಬಗ್ಗೆ ಸಂಬಂಧಪಟ್ಟವರು ಕ್ರಮಕೈಗೊಳ್ಳದೆ ಇದ್ದಲ್ಲಿ ಮತ್ತಷ್ಟು ಹೋರಾಟ ರೂಪಿಸಲಾಗುವುದು ಎಂದು ಪ್ರತಿಭಟನಾ ನಿರತರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ವಕೀಲ ಪವನ್ ಪೆಮ್ಮಯ್ಯ, ಪ್ರಮುಖರಾದ ಸತ್ಯ, ಸಾರ್ವಜನಿಕರು ಇದ್ದರು.