ಮಡಿಕೇರಿ ಟ್ರಾಫಿಕ್ ವ್ಯವಸ್ಥೆಗೆ ಸರ್ಜರಿ

ಮಡಿಕೇರಿ: ಕೊಡಗು ಜಿಲ್ಲಾ ಕೇಂದ್ರವಾಗಿರುವ ಮಡಿಕೇರಿ ನಗರದಲ್ಲಿ ಟ್ರಾಫಿಕ್ ಪರಿಸ್ಥಿತಿ ನಿಭಾಯಿಸಲು ಪೊಲೀಸ್ ಇಲಾಖೆ ವತಿಯಿಂದ ಟ್ರಾಫಿಕ್ ವ್ಯವಸ್ಥೆಗೆ ಸರ್ಜರಿ ಮಾಡಲಾಗುತ್ತಿದೆ.

ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಸಂಚಾರ ವ್ಯವಸ್ಥೆ ಸಮರ್ಪಕವಾಗಿಲ್ಲದೆ ಇರುವುದು, ವಾಹನ ನಿಲುಗಡೆಗೆ ಸೂಕ್ತ ಸ್ಥಳಗಳು ಇಲ್ಲದಿರುವುದು, ಪರ್ಯಾಯ ಮಾರ್ಗಗಳ ಅಲಭ್ಯತೆ, ಪ್ರತಿಭಟನೆ, ಮೆರವಣಿಗೆ ಸಂದರ್ಭದಲ್ಲಿ ಹಾಗೂ ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರ ಆಗಮನದಂತಹ ಕಾರಣಗಳಿಂದ ನಗರದಲ್ಲಿ ವಾಹನಗಳ ಕಿರಿಕಿರಿ ಜಾಸ್ತಿಯಾಗಿತ್ತು. ಪರಿಣಾಮವಾಗಿ ಪೊಲೀಸ್ ಇಲಾಖೆ ನಗರದ ವಿವಿಧೆಡೆಗಳಲ್ಲಿ ಪಾರ್ಕಿಂಗ್, ರಸ್ತೆ ವಿಭಜಕ ರೀತಿಯಲ್ಲಿ ಕೋನ್ ಅಳವಡಿಸಿ ಟ್ರಾಫಿಕ್ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್, ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ನೇತೃತ್ವದಲ್ಲಿ ವಾಹನಗಳ ಸಂಚಾರ-ನಿಲುಗಡೆ ಸರಿಪಡಿಸಲು ಮುಂದಾಗಿದ್ದಾರೆ. ಅಲ್ಲದೆ, ಈ ಕುರಿತು ಸಾರ್ವಜನಿಕರ ಸಹಕಾರವನ್ನೂ ಕೋರಲಾಗಿದ್ದು, ನಗರದ ಅನುಭವಿಗಳಿಂದ ಸೂಕ್ತ ಸಲಹೆಗಳಿದ್ದಲ್ಲಿ ಅದನ್ನೂ ಪರಿಗಣಿಸಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ..? ಏನೇನು..?:
ಮಡಿಕೇರಿಯ ಖಾಸಗಿ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಿಂದ ಐ.ಜಿ.ವೃತ್ತದವರೆಗೆ ಕೋನ್ ಅಳವಡಿಸಿ ದ್ವಿಪಥ ರಸ್ತೆಯನ್ನಾಗಿ ಪರಿವರ್ತಿಸಲಾಗಿದೆ. ಕಾಲೇಜು ರಸ್ತೆಯಲ್ಲಿ ವಾಹನಗಳ ನಿಲುಗಡೆಗೆ ಸ್ಥಳ ಗುರುತಿಸಿ ಮಾರ್ಕ್ ಮಾಡಲಾಗಿದೆ. ದ್ವಿಪಥ ರಸ್ತೆಯನ್ನು ಅಂಚೆ ಕಚೇರಿ, ಪೊಲೀಸ್ ಠಾಣೆಯವರೆಗೆ ಮುಂದುವರಿಸಲಾಗುವುದು. ಮಂಗೇರಿರ ಮುತ್ತಣ್ಣ ವೃತ್ತದಲ್ಲಿ ಜೀಬ್ರಾ ಮಾರ್ಕ್ ಹಾಕುವ ಕ್ರಮವನ್ನೂ ಜಾರಿಗೆ ತರಲಾಗುತ್ತಿದೆ. ದೇವಸ್ಥಾನ ರಸ್ತೆಯಲ್ಲಿ ದ್ವಿಚಕ್ರ ವಾಹನ ಹಾಗೂ 4 ಚಕ್ರಗಳ ವಾಹನಗಳನ್ನು ಪ್ರತ್ಯೇಕವಾಗಿ ನಿಲುಗಡೆಗೊಳಿಸಲು ವ್ಯವಸ್ಥೆ ಮಾಡಲಾಗಿದೆ.

ಟಿಂಟೆಡ್ ಗ್ಲಾಸ್‌ಗೆ ದಂಡ:
ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬೇಕಾಬಿಟ್ಟಿ ವಾಹನ ಚಲಾಯಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ಟ್ರಾಫಿಕ್ ನಿಯಂತ್ರಿಸಲು ಬ್ಯಾರಿಕೇಡ್ ಅಳವಡಿಸಲಾಗುತ್ತದೆ ಹಾಗೂ ವಾಹನಗಳಲ್ಲಿ ಟಿಂಟೆಡ್ ಗ್ಲಾಸ್‌ಗಳಿದ್ದಲ್ಲಿ ಅಂತಹ ಸ್ಟಿಕ್ಕರ್‌ಗಳನ್ನು ಕಳಚಿ ದಂಡ ವಿಧಿಸಲಾಗುತ್ತಿದೆ. ಅಲ್ಲದೆ, ನಿರ್ದಿಷ್ಟ ಪಾಯಿಂಟ್‌ಗಳಲ್ಲಿ ಈಗಿನ ವ್ಯವಸ್ಥೆಯಂತೆ ನಿಯೋಜಿತ ಸಿಬ್ಬಂದಿ ಕರ್ತವ್ಯದಲ್ಲಿರುತ್ತಾರೆ. ಅಗತ್ಯವಿರುವೆಡೆ ಮಾರ್ಗಸೂಚಕ ಫಲಕಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ ಎಂದು ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ತಿಳಿಸಿದ್ದಾರೆ.

ಒಟ್ಟಿನಲ್ಲಿ ನಗರದಲ್ಲಿ ಸಾರ್ವಜನಿಕರಿಗೆ ಕಿರಿಯಾಗುತ್ತಿದ್ದ ಟ್ರಾಫಿಕ್ ಸಮಸ್ಯೆ ಸರಿದೂಗಿಸಲು ಪೊಲೀಸ್ ಇಲಾಖೆ ತಯಾರಿ ನಡೆಸುತ್ತಿದೆ.

ಟ್ರಾಫಿಕ್ ಸಿಗ್ನಲ್‌ಗೆ ಚಿಂತನೆ
ನಗರದಲ್ಲಿ ಟ್ರಾಫಿಕ್ ಸಿಗ್ನಲ್ ನಿರ್ಮಾಣ ಮಾಡಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ. ಈ ಸಂಬಂಧ ಟೆಂಡರ್ ಕರೆದು ನಂತರ ಸಿಗ್ನಲ್ ನಿರ್ಮಾಣ ಕಾರ್ಯರೂಪಕ್ಕೆ ಬರಲಿದೆ. ನಗರದಲ್ಲಿ ಎಲ್ಲೆಲ್ಲಿ ಸಿಗ್ನಲ್‌ಗಳ ಅವಶ್ಯಕತೆ ಇದೆ ಎಂಬುದನ್ನು ಗಮನಿಸಿ ನಿರ್ಮಾಣಕ್ಕೆ ಪೊಲೀಸ್ ಇಲಾಖೆ ಮುಂದಾಗಲಿದೆ.

ಜಿಲ್ಲೆಯಲ್ಲಿ ಟ್ರಾಫಿಕ್ ಸಿಗ್ನಲ್ ಇಲ್ಲ
ರಾಜ್ಯದ ಎಲ್ಲ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ಟ್ರಾಫಿಕ್ ಸಿಗ್ನಲ್ ಎಂಬುದು ಇಲ್ಲ. ಹಲವು ವರ್ಷಗಳ ಹಿಂದೆ ಮಡಿಕೇರಿ ನಗರದ ಇಂದಿರಾಗಾಂಧಿ ವೃತ್ತ(ಐ.ಜಿ. ಸರ್ಕಲ್)ದಲ್ಲಿ ಒಂದೇ ಒಂದು ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಮಡಿಕೇರಿಯ ಹವಾಮಾನ ಪರಿಸ್ಥಿತಿಯಿಂದ ಮುಂದುವರಿಯಲಿಲ್ಲ. ಇತ್ತೀಚೆಗೆ ಕುಶಾಲನಗರದಲ್ಲಿ ಒಂದು ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಸಿರುವುದು ಹೊರತುಪಡಿಸಿದರೆ, ಕೊಡಗು ಜಿಲ್ಲೆಯ ಸಂಚಾರ ವ್ಯವಸ್ಥೆಯನ್ನು ಇಲಾಖಾ ಸಿಬ್ಬಂದಿ ವ್ಯಕ್ತಿಗತವಾಗಿಯೇ ನಿಭಾಯಿಸಬೇಕಾಗಿದೆ.