ಮಕ್ಕಳ ಸಾಹಿತ್ಯ ಹದಿಹರೆಯದವರನ್ನು ಎಚ್ಚರಿಸುವಂತಿರಲಿ

ತೀರ್ಥಹಳ್ಳಿ: ಮಕ್ಕಳ ಸಾಹಿತ್ಯ ಶಿಶು ಸಾಹಿತ್ಯವಾಗದೆ ಹದಿಹರೆಯದವರ ತವಕ ತಲ್ಲಣಗಳ ವಿಚಾರದಲ್ಲಿ ಪ್ರೌಢಾವಸ್ಥೆಯಲ್ಲಿರುವವರನ್ನು ಎಚ್ಚರಿಸುವಂತಿರಬೇಕು. ಮುಖ್ಯವಾಗಿ ಪ್ರೌಢಾವಸ್ಥೆಯಲ್ಲಿರುವವರು ಪಾಲಕರೊಂದಿಗೆ ಮುಕ್ತವಾಗಿ ಹೇಳಿಕೊಳ್ಳುವ ವಾತಾವರಣ ಅತ್ಯಗತ್ಯ ಎಂದು ಕವಯತ್ರಿ ಮುದ್ದು ತೀರ್ಥಹಳ್ಳಿ ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಗೋಪಾಲಗೌಡ ರಂಗಮಂದಿರದಲ್ಲೀ ನಡೆಯುತ್ತಿರುವ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಮಕ್ಕಳ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಕ್ಕಳ ಕುರಿತು ಈವರೆಗೆ ಬಂದಿರುವ ಬಹುತೇಕ ಸಾಹಿತ್ಯಗಳು ಶಿಶು ಸಾಹಿತ್ಯವಾಗಿವೆ. ಪ್ರೌಢಾವಸ್ಥೆಯಲ್ಲಿರುವ ಮಕ್ಕಳ ನೈಜವಾದ ಭಾವನೆಯನ್ನು ಅರಿತು ಮಾರ್ಗಸೂಚಿಯಾಗಿ ಕೆಲ ಸಾಹಿತಿಗಳು ಮಾತ್ರ ಆ ಕೆಲಸ ಮಾಡಿದ್ದಾರೆ ಎಂದರು.

ಮಕ್ಕಳ ಸಾಹಿತ್ಯ ರಚನೆ ಬಲು ಕಷ್ಟ. ಈ ಸಾಹಿತ್ಯ ಬರೆಯುವವರು ಮಗುವಿನ ಮಟ್ಟಕ್ಕೆ ಇಳಿದು ಬರೆಯಬೇಕಾಗುತ್ತದೆ. ಸರಿ ಇಲ್ಲದಿದ್ದರೆ ಆ ಸಾಹಿತ್ಯ ಸಾರಾಸಗಟಾಗಿ ತಿರಸ್ಕೃತವಾಗುತ್ತದೆ. ಸಾಹಿತ್ಯ ಪೈಪೋಟಿಯಾಗದೆ ಮೌಲ್ಯಯುತವಾಗಿರಬೇಕು ಎಂದರು.

ಪಾಲಕರ ಅತಿಯಾದ ಒತ್ತಡದಿಂದ ಮಕ್ಕಳು ಸೂಕ್ಷ್ಮ ಸಂವೇದನೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಮಗ ತಾಯಿಗೆ ಪೊರಕೆಯಲ್ಲಿ ಹೊಡೆದದ್ದು, ಬಾಲಕ ಚಾಕುವಿನಿಂದ ತಿವಿದದ್ದು, ತರಗತಿಯಲ್ಲಿ ಟೀಚರ್​ಗೆ ಎದುರಾಡಿದ ವಿಚಾರಗಳನ್ನು ಮಾಧ್ಯಮಗಳು ವೈಭವೀಕರಿಸುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಈ ಬೆಳವಣಿಗೆ ಎಳೆಯ ಮನಸ್ಸುಗಳ ಮೇಲೆ ಅತಿಯಾದ ದುಷ್ಪರಿಣಾಮ ಬೀರುತ್ತವೆ. ಈ ಬಗ್ಗೆ ಎಚ್ಚೆತ್ತಿಕೊಳ್ಳಬೇಕು ಎಂದು ತಿಳಿಸಿದರು.

ಬಾಲ ಸಾಹಿತಿ ಹಾಗೂ ಗಾಯಕಿ ಪ್ರಗತಿ ನಿಲುವಾಸೆ ಆಶಯ ನುಡಿ ಆಡಿದರು. 32 ಮಕ್ಕಳು ಕವನಗಳನ್ನು ವಾಚಿಸಿದರು. ಸಮ್ಮೇಳನ ಸರ್ವಾಧ್ಯಕ್ಷ ಟಿ.ಎಲ್.ಸುಬ್ರಮಣ್ಯ ಅಡಿಗ, ತಾಲೂಕು ಕಸಾಪ ಅಧ್ಯಕ್ಷ ಆಡಿನಸರ ಸತೀಶ್, ಕಾರ್ಯದರ್ಶಿ ಉದಯಕುಮಾರ್, ನಿವೃತ್ತ ಉಪನ್ಯಾಸಕ ಸದಾನಂದ್, ಭೋಜರಾಜ್ ಮುಂತಾದವರು ಇದ್ದರು.

ಪ್ರಸ್ತುತ ಸಾಮಾಜಿಕ ಜಾಲತಾಣದ ನಕಾರಾತ್ಮಕ ವಿಚಾರಗಳು ಹದಿಹರೆಯದವರಿಗೆ ಮಾರಕವಾಗಿವೆ. ಈ ಹಂತದಲ್ಲಿ ಮಕ್ಕಳ ಚಲನವಲನದ ಬಗ್ಗೆ ಪಾಲಕರು ನಿಗಾ ವಹಿಸಿಬೇಕು.

ಮುದ್ದು ತೀರ್ಥಹಳ್ಳಿ

ಕವಯತ್ರಿ