ಮಕ್ಕಳ ವ್ಯಕ್ತಿತ್ವ ರೂಪಿಸುವ ಕೇಂದ್ರವಾಗಲಿ

ಕಾರವಾರ: ಶಾಲೆ, ಕಾಲೇಜ್​ಗಳು ಮಕ್ಕಳ ಸಮಗ್ರ ವ್ಯಕ್ತಿತ್ವ ಅಭ್ಯುದಯ ಮಾಡುವ ಕೇಂದ್ರವಾಗಬೇಕು ಎಂದು ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಹೇಳಿದರು.
ಚೆಂಡಿಯಾ ಸಮೀಪ ಕದಂಬ ನೌಕಾನೆಲೆ ವ್ಯಾಪ್ತಿಯಲ್ಲಿ ನಿರ್ವಣವಾದ ಕೇಂದ್ರೀಯ ವಿದ್ಯಾಲಯದ ನೂತನ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಎಲ್ಲ ಶಾಲೆ, ಕಾಲೇಜ್​ಗಳು, ಶಿಕ್ಷಕರು, ಪಾಲಕರು ಕಂಪ್ಯೂಟರ್ ಎದುರು ಕುಳಿತು ಕೆಲಸ ಮಾಡುವಂತಹ ಉತ್ತಮ ಗ್ರಹಣ ಶಕ್ತಿಯುಳ್ಳ ಹಾರ್ಡ್ ಡಿಸ್ಕ್​ನಂಥ ವ್ಯಕ್ತಿಗಳನ್ನು ಸಿದ್ಧಪಡಿಸುತ್ತಿದ್ದಾರೆ. ಆದರೆ, ಜೀವನಕ್ಕೆ ಕೇವಲ ಬುದ್ಧಿಮತ್ತೆ, ಗ್ರಹಣ ಶಕ್ತಿ ಸಾಲದು. ನೈತಿಕ ಸಾಮರ್ಥ್ಯ, ಭಾವನಾತ್ಮಕ ಸಾಮರ್ಥ್ಯ ಬೇಕು. ದೇಶ ನಿರ್ವಣಕ್ಕೆ ದೇಶಭಕ್ತ ಸದೃಢ ಶಕ್ತಿಗಳು ಬೇಕು. ಕಾರವಾರದ ಕೇಂದ್ರೀಯ ವಿದ್ಯಾಲಯ ಅಂತಹ ವ್ಯಕ್ತಿಗಳನ್ನು ರೂಪಿಸುವ ಶಾಲೆಯಾಗಿ ಹೊರಹೊಮ್ಮಲಿ ಎಂದರು.
ಶಾಸಕಿ ರೂಪಾಲಿ ನಾಯ್ಕ, ಕರ್ನಾಟಕ ನೌಕಾ ವಲಯ ಮುಖ್ಯಸ್ಥ ರಿಯರ್ ಅಡ್ಮಿರಲ್ ಕೆ.ಜೆ. ಕುಮಾರ್, ಕದಂಬ ನೌಕಾನೆಲೆಯ ಮುಖ್ಯಸ್ಥ ಕ್ಯಾಪ್ಟನ್ ಶಾಂತನು ಶರ್ವ, ಕೇಂದ್ರೀಯ ವಿದ್ಯಾಲಯಗಳ ಸಹಾಯಕ ಆಯುಕ್ತ ಡಾ. ಎಸ್. ವಸಂತ ವೇದಿಕೆಯಲ್ಲಿದ್ದರು. ಕೇಂದ್ರೀಯ ವಿದ್ಯಾಲಯಗಳ ಬೆಂಗಳೂರು ವಲಯ ಉಪ ಆಯುಕ್ತ ಡಿ.ಟಿ.ಎಸ್. ರಾವ್ ಸ್ವಾಗತಿಸಿದರು. ಶಾಲೆಯ ಪ್ರಾಂಶುಪಾಲೆ ಆಶಾಲತಾ ಗಾಂವಕರ್ ವಂದಿಸಿದರು.