ಔರಾದ್: ಮಕ್ಕಳನ್ನು ಅಂಗಡಿಗಳಲ್ಲಿ ಕಡಿಮೆ ವೇತನದಲ್ಲಿ ದುಡಿಸಿಕೊಳ್ಳುತ್ತಾರೆ. ಅಂಥವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಜಿ ಹುಸೇನಸಾಬ್ ಯಾಡವಾಡ ಎಚ್ಚರಿಕೆ ನೀಡಿದರು.
ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಶಿಕ್ಷಣ ಇಲಾಖೆ ಸಹಯೋಗದಡಿ ಗುರುವಾರ ಆಯೋಜಿಸಿದ್ದ ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಾಲಕಾರ್ಮಿಕ ಪದ್ಧತಿ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುತ್ತದೆ. ಸಮಾಜಕ್ಕೆ ಮಾರಕವಾಗಿರುವ ಬಾಲಕಾರ್ಮಿಕ ಪದ್ಥತಿಯ ಸಂಪೂರ್ಣ ನಿರ್ಮೂಲನೆಗೆ ಅಧಿಕಾರಿಗಳು ಶ್ರಮಿಸುವುದರ ಜತೆಗೆ ಜನಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಬಹುತೇಕ ಬಾಲ ಕಾರ್ಮಿಕರು ಕೃಷಿ ಕಾರ್ಯ, ವಿವಿಧ ಅಂಗಡಿ ಮುಂಗಟ್ಟುಗಳಲ್ಲಿ ಇರುತ್ತಾರೆ. ಶಿಕ್ಷಕರು ಮತ್ತು ನಾಗರಿಕರು ಎಲ್ಲೆ ಬಾಲಕಾರ್ಮಿಕರು ಕಂಡು ಬಂದಲ್ಲಿ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಅಥವಾ ಮಕ್ಕಳ ಸಹಾಯವಾಣಿ ಸಂಖ್ಯೆ ೧೦೯೮ ಕರೆ ಮಾಡಿ ತಿಳಿಸಬೇಕು ಎಂದರು.
ಕಾರ್ಮಿಕ ಇಲಾಖೆಯ ಅಧಿಕಾರಿ ರಾಹುಲ ರತ್ನಾಕರ್ ಮಾತನಾಡಿದರು. ಬಾಲಾಜಿ ಕಂಬಾರ, ಶ್ರೀಧರ, ರಘುನ್ನಾಥ, ಸುನೀಲ, ಹಣಮಂತರಾವ ಮುಕ್ತೆದಾರ್, ಸುಭಾಷ ಸಾಕ್ರೆ ಇತರರಿದ್ದರು. ನ್ಯಾಯಾಲಯ ಆವರಣದಿಂದ ಕೇಂದ್ರ ಬಸ್ ನಿಲ್ದಾಣದವರೆಗೆ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಜಾಗೃತಿ ಜಾಥಾ ಕೈಗೊಳ್ಳಲಾಯಿತು. ಪಟ್ಟಣದ ಶಾಲಾ ಕಾಲೇಜುಗಳ ಮಕ್ಕಳು ಭಾಗವಹಿಸಿ ದುಡಿಮೆ ಬೇಡ ಶಿಕ್ಷಣ ಬೇಕು, ಮಕ್ಕಳನ್ನು ದುಡಿಸದಿರಿ, ಶಾಲೆಗೆ ಕಳುಹಿಸಿ ಅನ್ನುವ ಘೋಷಣೆಗೊಂದಿಗೆ ಜಾಗೃತಿ ಮೂಡಿಸಿದರು.