ಮಕ್ಕಳ ಮನೋವಿಕಾಸ ಹೆಚ್ಚಿಸಿ

ಹುಬ್ಬಳ್ಳಿ: ಮಕ್ಕಳ ಮನಸನ್ನು ಅರಿತು ಅವರ ಮನೋವಿಕಾಸ ಹೆಚ್ಚಿಸಬೇಕಿರುವುದು ಪಾಲಕರ ಕರ್ತವ್ಯ ಎಂದು ಕಲಾವಿದ ಸಂತೋಷ ಮಹಾಲೆ ಹೇಳಿದರು.

ಧಾರವಾಟದ ರೈಜಿಂಗ್​ಸ್ಟಾರ್ಸ್ ಆರ್ಟ್ ಆಂಡ್ ಕಲ್ಚರಲ್ ಅಕಾಡೆಮಿ ಮತ್ತು ಹುಬ್ಬಳ್ಳಿಯ ನಾಟ್ಯ ಭೈರವ ನೃತ್ಯ ಹಾಗೂ ಸಾಂಸ್ಕೃತಿಕ ಅಕಾಡೆಮಿ ಸಹಯೋಗದೊಂದಿಗೆ ನಗರದಲ್ಲಿ ಏರ್ಪಡಿಸಿದ್ದ ಚಿಣ್ಣರ ಕಲಾಮೇಳ-2019 ಮಕ್ಕಳ ಉಚಿತ ಬೇಸಿಗೆ ಶಿಬಿರದ ಸಾಂಸ್ಕೃತಿಕ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಕ್ಕಳಲ್ಲಿ ಒಂದೊಂದು ಪ್ರತಿಭೆ ಇರುತ್ತದೆ. ಒತ್ತಾಯಪೂರ್ವಕವಾಗಿ ಮಕ್ಕಳನ್ನು ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸದೆ ಅವರ ಇಚ್ಛೆಯಂತೆ ನಡೆದರೆ ಮಕ್ಕಳು ಉನ್ನತ ಮಟ್ಟಕ್ಕೆ ಹೋಗಬಹುದು ಹಾಗೂ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಬಹುದು ಎಂದರು.

ಕಾರ್ವಿುಕ ಮುಖಂಡ ಡಾ. ಕೆ.ಎಸ್. ಶರ್ಮಾ ಮಾತನಾಡಿ, ಪಾಶ್ಚಾತ್ಯ ಪ್ರಭಾವದಿಂದ ಕಂಗೆಟ್ಟಿರುವ ಮಕ್ಕಳಿಗೆ ದೈನಂದಿನ ಕಲಿಕೆ ಬೇಕಾಗಿದೆ. ದೇಶಿ ಆಟಗಳಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ವಿಕಾಸ ಸಾಧ್ಯ ಎಂದು ಹೇಳಿದರು.

ಡಾ. ಪ್ರಕಾಶ ಮಲ್ಲಿಗವಾಡ ಅಧ್ಯಕ್ಷತೆ ವಹಿಸಿದ್ದರು. ವಿದುಷಿ ವನಿತಾ ಮಹಾಲೆ, ಜನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮೀ ಗೇಟಿನವರ, ಕೃಷ್ಣ ಎಂ.ಎಚ್., ಬಸವರಾಜ ಬನ್ನಿಗೋಳಮಠ, ಸುಹಾಸಿನಿ ನಾರಾಯಣಕರ, ವಿಜಯಲಕ್ಷ್ಮೀ ಕೊಪ್ಪದ, ಸಹನಾ ಬನ್ನಿಗಿಡದ ಮತ್ತಿತರರಿದ್ದರು.