ಸಂಡೂರು: ತಾಲೂಕು ಶೈಕ್ಷಣಿಕವಾಗಿ ಶೇ.80 ಪ್ರಗತಿ ಸಾಧಿಸಿದೆ. ನಂಜುಂಡಪ್ಪ ವರದಿ ಅನ್ವಯ ಅತ್ಯಂತ ಹಿಂದುಳಿದ ತಾಲೂಕು ಆಗಿದ್ದ ಕ್ಷೇತ್ರ ಸಾಕಷ್ಟು ಅಭಿವೃದ್ಧಿಯಾಗಿದ್ದು, ಕಾರ್ಮಿಕ ಸಚಿವ ಸಂತೋಷ್ ಲಾಡ್ ಮತ್ತು ಸಂಸದ ಈ.ತುಕಾರಾಮ್ ಅವರ ದೂರದೃಷ್ಟಿ ಇದಕ್ಕೆ ಕಾರಣ ಎಂದು ಶಾಸಕಿ ಅನ್ನಪೂರ್ಣ ತುಕಾರಾಮ್ ಹೇಳಿದರು.
ಕೃಷ್ಣನಗರದ ಜ್ಞಾನಭಾರತಿ ವಿದ್ಯಾಮಂದಿರದಲ್ಲಿ ಶಾಲಾ ವಾರ್ಷಿಕೋತ್ಸವದಲ್ಲಿ ಸೋಮವಾರ ಮಾತನಾಡಿದರು. ಪಾಲಕರು ವೈಯಕ್ತಿಕವಾಗಿ ಈಡೇರದ ಕನಸುಗಳನ್ನು ಮಕ್ಕಳ ಮೇಲೆ ಹೇರುವ ಸಂಪ್ರದಾಯ ಕೈಬಿಡಬೇಕು. ಇದರಿಂದ ಮಕ್ಕಳ ಪ್ರತಿಭೆಯನ್ನು ಕಡೆಗಣಿಸಿದಂತಾಗುತ್ತದೆ. ಮಕ್ಕಳಲ್ಲಿರುವ ಪ್ರತಿಭೆ ಅರಳುವಂತೆ ಪ್ರೋತ್ಸಾಹ ನೀಡಬೇಕೆಂದು ಸಲಹೆ ನೀಡಿದರು.
ರಾಮಾಯಣ, ಮಹಾಭಾರತದಂತಹ ಕಥೆಗಳನ್ನು ಕೇಳಿ ಬೆಳೆದ ಪಾಲಕರು ಅವುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಸೋತಿದ್ದಾರೆ. ಕಥೆಗಳ ಮೂಲಕ ಮೌಲ್ಯ ಸಾರಬೇಕು. ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ವಹಿಸಿ ಅವರನ್ನು ಉತ್ತಮ ಹಾದಿಯಲ್ಲಿ ನಡೆಸುವ ಜವಾಬ್ದಾರಿ ಶಿಕ್ಷಕರು ಮತ್ತು ಪಾಲಕರ ಮೇಲೆ ಇದೆ ಎಂದು ಶಾಸಕಿ ತಿಳಿಸಿದರು.
ಶಾಲಾ ವಾರ್ಷಿಕ ಸಾಧನೆಯನ್ನು ವಾಚನ ಮಾಡಲಾಯಿತು. ವಿವಿಧ ಸಾಧನೆಗೈದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಪಾಲಕರು ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಛದ್ಮವೇಷ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಬಿಇಒ ಡಾ.ಐ.ಆರ್.ಅಕ್ಕಿ, ಖಾಸಗಿ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಪುರುಷೋತ್ತಮ, ಖಾಸಗಿ ಶಾಲೆಗಳ ಆಡಳಿತ ಮಂಡಳಿ ತಾಲೂಕು ಅಧ್ಯಕ್ಷ ಮಹಾಂತೇಶ್, ಶಾಲಾ ಆಡಳಿತ ಮಂಡಳಿ ಪ್ರಮುಖರಾದ ಕೆ.ಕುಮಾರಸ್ವಾಮಿ, ನೀಲಕಂಠ ಇತರರಿದ್ದರು.