ಎನ್.ಆರ್.ಪುರ: ಶಿಕ್ಷಣ ಇಲಾಖೆ ಕಲಿಕಾ ಹಬ್ಬ ಎಂಬ ಕಾರ್ಯಕ್ರಮ ರೂಪಿಸಿರುವುದರಿಂದ ಗ್ರಾಮೀಣ ಭಾಗದ ಮಕ್ಕಳ ಪ್ರತಿಭೆ ಹೊರಬರಲು ಸಹಕಾರಿಯಾಗಲಿದೆ ಎಂದು ನಾಗಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀನಾ ಬೆನ್ನಿ ಅಭಿಪ್ರಾಯಪಟ್ಟರು.
ಬುಧವಾರ ದಿಂಡಿನಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಟ್ಟೆ ಕಡೆಯ ಗ್ರಾಮದ ಮಕ್ಕಳಿಗೂ ಶಿಕ್ಷಣ ಸಿಗಬೇಕು. ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸರ್ಕಾರ ಶಿಕ್ಷಣಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಶಿಕ್ಷಣಕ್ಕೆ ಸಂಬಂಧಪಟ್ಟ ವಿನೂತನವಾದ ಹಲವಾರು ಕಾರ್ಯಕ್ರಮ ರೂಪಿಸುತ್ತಿದೆ. ಇಂತಹ ಕಾರ್ಯಕ್ರಮವನ್ನು ಮಕ್ಕಳು ಉಪಯೋಗಿಸಿಕೊಳ್ಳಬೇಕು ಎಂದರು.
ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯಾಧಿಕಾರಿ ಸೇವ್ಯಾನಾಯಕ್ ಮಾತನಾಡಿ, ತಾಲೂಕಿನ 9 ಕ್ಲಸ್ಟರ್‌ಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಒಂದು ಕ್ಲಸ್ಟರ್‌ನಲ್ಲಿ ಒಂದು ಆಯ್ದ ಶಾಲೆಯಲ್ಲಿ ಕಲಿಕಾ ಹಬ್ಬ ಕಾರ್ಯಕ್ರಮ ನಡೆಸಲಾಗುವುದು. ಆ ಕ್ಲಸ್ಟರ್‌ನ ಸಂಬಂಧಪಟ್ಟ ಎಲ್ಲ ಶಾಲೆಗಳ ಮಕ್ಕಳು ಆ ಶಾಲೆಗೆ ಬರುತ್ತಾರೆ ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ನಂಜುಂಡಪ್ಪ ಮಾತನಾಡಿ, ಕಲಿಕಾ ಹಬ್ಬ ಮಕ್ಕಳ ಕಲಿಕಾ ಸಾಮರ್ಥ್ಯ ಪತ್ತೆ ಹಚ್ಚುವ ಕಾರ್ಯಕ್ರಮ. ಶೈಕ್ಷಣಿಕ ವರ್ಷದ ಮೊದಲನೇ ಸೆಮಿಸ್ಟರ್‌ನಲ್ಲಿ ಕ್ರೀಡಾ ಕೂಟ ಆಯೋಜನೆ ಮಾಡಿ, ಎರಡನೇ ಸೆಮಿಸ್ಟರ್‌ನಲ್ಲಿ ಪ್ರತಿಭಾ ಕಾರಂಜಿ ಹಾಗೂ ಕಲಿಕಾ ಹಬ್ಬವನ್ನು ಒಗ್ಗೂಡಿಸಿ ಆಯೋಜನೆ ಮಾಡಿದರೆ ಉತ್ತಮವಾಗಲಿದೆ ಎಂದು ಸಲಹೆ ನೀಡಿದರು.
ಗ್ರಾಪಂ ಸದಸ್ಯ ಚಿನ್ನಯ್ಯ, ಇಸಿಒಗಳಾದ ರಂಗಪ್ಪ, ಸಂಗೀತಾ, ಪ್ರಾ.ಶಾ.ಶಿ.ಸಂಘದ ಸದಸ್ಯ ಬೋಗೇಶ್, ತಿಮ್ಮೇಶ್, ರಂಜಿತಾ, ರಾಧಾ, ಗಂಗಾಧರ್, ಕೃಷ್ಣಮೂರ್ತಿ, ಲಕ್ಷ್ಮೀದೇವಿ, ದೇವರಾಜ್, ಅನಂತಪ್ಪ, ಅಶ್ವಲ್, ಅರುಣಾಕುಮಾರಿ, ಸಲ್ಲಾವುದ್ದೀನ್ ಇತರರಿದ್ದರು.