ಮಕ್ಕಳ ನಾಟಕೋತ್ಸವಕ್ಕೆ ಚಾಲನೆ

ಧಾರವಾಡ: ಮಕ್ಕಳು ಕೇವಲ ಅಂಕಗಳನ್ನು ಪಡೆಯುವ ಭ್ರಮೆಯಲ್ಲಿದ್ದಾರೆ. ಪಠ್ಯೇತರ ಚಟುವಟಿಕೆಗಳೆಂದರೆ ಅಂಕ ಗಳಿಕೆಗೆ ಅಡೆತಡೆ ಇದ್ದಂತೆ ಎಂಬ ಭಾವನೆ ಬೆಳೆದಿದೆ. ಇದರ ಪರಿಣಾಮ ಮಕ್ಕಳು ಪಾಲಕರಿಗೆ ಗೊತ್ತಿಲ್ಲದೇ ಮಾನಸಿಕ ಹಿಂಸೆಗೆ ಒಳಪಟ್ಟು ನರಳುತ್ತಿದ್ದಾರೆ ಎಂದು ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆ ಉಪನಿರ್ದೇಶಕ (ಆಡಳಿತ) ಅಬ್ದುಲ್ ವಾಜಿದ್ ಖಾಜಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಚಿಣ್ಣರ ಚಿಲುಮೆ ಮಕ್ಕಳ ನಾಟಕ ಯೋಜನೆಯ ಅಡಿ ಇಲ್ಲಿನ ಸೃಜನಾ ರಂಗಮಂದಿರದಲ್ಲಿ ಐದು ದಿನಗಳ ಕಾಲ ಹಮ್ಮಿಕೊಂಡಿರುವ ಬೆಳಗಾವಿ ವಿಭಾಗ ಮಟ್ಟದ ಮಕ್ಕಳ ನಾಟಕೋತ್ಸವಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಒಂದು ಮಗು ನಾಟಕದಲ್ಲಿ ಪಾಲ್ಗೊಳ್ಳುವುದರಿಂದ ಕಲಿಕೆಗೆ ಪೂರಕವಾದ ಹಲವಾರು ಗುಣಗಳು ವೃದ್ಧಿಸುತ್ತವೆ ಎಂದು ಅವರು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ ಮಾತನಾಡಿ, ಪ್ರತಿ ಮಗು ಬಾಲ್ಯದಲ್ಲೇ ನಾಟಕವಾಡುತ್ತದೆ. ಅಪ್ಪ ಮನೆಗೆ ಬಂದರೆ ಆಟವಾಡುವುದನ್ನು ಬಿಟ್ಟು ಓದುವ ನಟನೆ, ಅಮ್ಮ ಊಟಕ್ಕೆ ಕರೆದರೆ ಇಲ್ಲದ ನೆವ ಹೇಳುವ ನಟನೆ, ಹೀಗೆ ಅವರಿಗೆ ಗೊತ್ತಿಲ್ಲದೆ ಮನೆಯಲ್ಲಿ ಹಲವು ರೀತಿ ನಟಿಸುತ್ತಿರುತ್ತಾರೆ. ಆದರೆ ಒಂದು ವಿಷಯದ ಮೇಲೆ ಬೇರೊಂದು ಪಾತ್ರದ ನಟನೆ ಮಾಡುವಾಗ ಸಹಜವಾಗಿ ವಿವಿಧ ಪಾತ್ರಗಳ ಗುಣಗಳ ಪರಿಚಯವಾಗುತ್ತದೆ. ಆ ಮೂಲಕ ವಿಶಾಲ ಮನೋಭಾವನೆ ಮಗುವಿನಲ್ಲಿ ಬೆಳೆಯಲು ಸಾಧ್ಯ ಎಂದರು.

ಕೆ.ಎಚ್. ನಾಯಕ, ಎಂ.ಎಂ. ಚಿಕ್ಕಮಠ, ಇತರರು ಇದ್ದರು. ಯೋಜನೆಯ ರಾಜ್ಯ ಸಮನ್ವಯ ಸಂಚಾಲಕ ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಸಮಿತಿ ಸದಸ್ಯೆ ಸುನಂದಾ ನಿಂಬನಗೌಡರ ನಿರೂಪಿಸಿದರು. ವಿಭಾಗ ಸಮಿತಿ ಸದಸ್ಯೆ ಪ್ರಮಿಳಾ ಜಕ್ಕಣ್ಣವರ ವಂದಿಸಿದರು. ನಂತರ ನವಲೂರು ಸರ್ಕಾರಿ ಶಾಲೆ ಮಕ್ಕಳು ಮತ್ತು ಮುಂಡರಗಿಯ ಜಾಲವಾಡಗಿ ಸರ್ಕಾರಿ ಶಾಲೆ ಮಕ್ಕಳು ನಾಟಕ ಪ್ರದರ್ಶಿಸಿದರು.