ಮಕ್ಕಳ ತಪ್ಪಿಗೆ ಪಾಲಕರಿಗೆ ದಂಡ


ಕುಶಾಲನಗರ: ಇಲ್ಲಿನ ಕನ್ಯಕಾ ಇಂಟರ್‌ನ್ಯಾಷನಲ್ ಸಭಾಂಗಣದಲ್ಲಿ ಸುಗಮ ಸಂಚಾರ ವ್ಯವಸ್ಥೆ ಮತ್ತು ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಚಾರ ಠಾಣಾಧಿಕಾರಿ ಸೋಮೇಗೌಡ ಮಾತನಾಡಿ, 18 ವರ್ಷದೊಳಗಿನ ಮಕ್ಕಳು ವಾಹನ ಚಾಲನೆ ಮಾಡುತ್ತಿದ್ದು, ಎಚ್ಚರಿಕೆ ವಹಿಸದಿದ್ದರೆ ಪಾಲಕರಿಗೆ ದಂಡ ಮತ್ತು ಜೈಲು ಶಿಕ್ಷೆಗೆ ಗುರಿಪಡಿಸುವ ಅವಕಾಶ ಇದೆ ಎಂದು ಹೇಳಿದರು.
ಗಾಂಜಾ ಸೇರಿದಂತೆ ಮಾದಕ ವಸ್ತುಗಳ ವ್ಯಸನಿಗಳಾಗುತ್ತಿರುವ ಯುವ ಜನರು, ಮತ್ತಿನಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ತೊಂದರೆ ನೀಡುತ್ತಿರುವ ಕುರಿತು ಸಾರ್ವಜನಿಕರು ಗಮನ ಸೆಳೆದರು. ವಿ.ಪಿ.ಶಶಿಧರ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಅಮೃತ್‌ರಾಜ್, ಪಿ.ಎಂ.ಮೋಹನ್ ಸಮಸ್ಯೆಗಳ ಕುರಿತು ತಿಳಿಸಿದರು.
ಅಹವಾಲು ಸ್ವೀಕರಿಸಿ ಮಾತನಾಡಿದ ಎಸ್‌ಪಿ ಡಾ.ಸುಮನಾ ಡಿ.ಪನ್ನೇಕರ್, ಕುಶಾಲನಗರದಲ್ಲಿ ವಾಹನ ದಟ್ಟಣೆ, ಪಾರ್ಕಿಂಗ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಶ್ರಮ ವಹಿಸುತ್ತೇನೆ ಎಂದು ಹೇಳಿದರು.
ಸುಗಮ ಸಂಚಾರ ವ್ಯವಸ್ಥೆ ಮತ್ತು ಅಪರಾಧ ತಡೆ ವಿಷಯದಲ್ಲಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಎಸ್ಪಿ ಬಹುಮಾನ ವಿತರಿಸಿದರು. ಕುಶಾಲನಗರ ವೃತ ನಿರೀಕ್ಷಕ ಕ್ಯಾತೇಗೌಡ, ಉಪ ಅಧೀಕ್ಷಕ ಮುರಳಿಧರ್, ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ವಿ.ಪಿ.ನಾಗೇಶ್ ಮತ್ತಿತರರು ಹಾಜರಿದ್ದರು.